ಪ್ರಜೆಗಳ ಧ್ವನಿಯಾಗಿ ಪ್ರಜಾಕೀಯ ಆಡಳಿತ: ಉಪೇಂದ್ರ

ಶುಕ್ರವಾರ, ಏಪ್ರಿಲ್ 26, 2019
21 °C
ನಾವು ನಾಯಕರೂ ಅಲ್ಲ, ಸೇವಕರೂ ಅಲ್ಲ, ಜನರಿಂದ ಸಂಬಳ ಪಡೆದು ಕೆಲಸ ಮಾಡುವ ಕಾರ್ಮಿಕರು

ಪ್ರಜೆಗಳ ಧ್ವನಿಯಾಗಿ ಪ್ರಜಾಕೀಯ ಆಡಳಿತ: ಉಪೇಂದ್ರ

Published:
Updated:
Prajavani

ಚಿಕ್ಕಬಳ್ಳಾಪುರ: ‘ಬಂಡವಾಳ ಹೂಡಿಕೆ ಮಾಡಿ ರಾಜಕೀಯ ಲಾಭ ಪಡೆಯುವ ವ್ಯವಸ್ಥೆ ಬದಲಾಯಿಸಿ, ಜನಸಾಮಾನ್ಯರನ್ನೇ ಚುನಾವಣೆಯಲ್ಲಿ ಗೆಲ್ಲಿಸಿ, ಐದೂ ವರ್ಷವೂ ಜನರ ಸಹಭಾಗಿತ್ವದಲ್ಲಿ ಸರ್ಕಾರ ನಡೆಯುವಂತಹ ವ್ಯವಸ್ಥೆ ತರುವ ನಿಟ್ಟಿನಲ್ಲಿ ಉತ್ತಮ ಪ್ರಜಾಕೀಯ ಪಕ್ಷ ಹುಟ್ಟು ಹಾಕಿದ್ದೇವೆ’ ಪಕ್ಷದ ಸಂಸ್ಥಾಪಕ ಹಾಗೂ ಚಿತ್ರನಟ ಉಪೇಂದ್ರ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಣ ಮತ್ತು ತೋಳ್ಬಲ ಇರುವವರು ಮಾತ್ರ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯ ಎಂಬ ಭ್ರಮೆಯನ್ನು ಮೂಡಿಸಲಾಗಿದೆ. ಚುನಾವಣೆಗೆ ಸ್ಪರ್ಧಿಸಲು ಸಾವಿರಾರು ಕೋಟಿ ಹಣ ಸುರಿಯಬೇಕು ಎಂದು ನಂಬಿಸಲಾಗಿದೆ. ಚುನಾವಣೆಗಾಗಿ ಸುರಿಯುವ ಸಾವಿರಾರು ಕೋಟಿ ಯಾರ ಹಣ? ಈ ರಾಜಕೀಯ ವ್ಯವಸ್ಥೆಯನ್ನು ಬದಲಾವಣೆಯೇ ನಮ್ಮ ಗುರಿ’ ಎಂದು ತಿಳಿಸಿದರು.

‘ಸದ್ಯ ನಮ್ಮಲ್ಲಿ ಒಂದು ದಿನದ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಮತ ಹಾಕುವವರೆಗೆ ಮಾತ್ರ ಪ್ರಜೆಗಳು ಪ್ರಭುಗಳು. ಆ ಮೇಲೆ ಐದು ವರ್ಷ ಆಯ್ಕೆಯಾದವರು ಮಾಡಿದ್ದು ನೋಡಿಕೊಂಡು ಇರಬೇಕು. ಇಲ್ಲವೇ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ. ನಮಗೆ ಈ ರಾಜಕೀಯ ಬೇಡ, ಪ್ರಜಾಕೀಯ ಬೇಕು. ನಾವು ಸೇವೆ ಮಾಡುವುದಿಲ್ಲ. ನಾಯಕರೂ ಅಲ್ಲ. ಸಂಬಳ ಪಡೆದು ಕಾರ್ಮಿಕರ ರೀತಿ ಕೆಲಸ ಮಾಡುವ ವ್ಯವಸ್ಥೆ ನಮ್ಮದು’ ಎಂದರು.

‘ಅಭ್ಯರ್ಥಿಗಳಿಗೆ ದುಂದು ವೆಚ್ಚ ಮಾಡದಂತೆ ಹೇಳಿದ್ದೇನೆ. ಜನರಿಗೆ ತೊಂದರೆ ನೀಡಬಾರದು ಎಂಬ ಉದ್ದೇಶಕ್ಕೆ ರ್‍ಯಾಲಿ, ಬಹಿರಂಗ ಸಭೆ ನಡೆಸುತ್ತಿಲ್ಲ. ನಮ್ಮ ವಿಚಾರಗಳನ್ನು ಮಾಧ್ಯಮಗಳು, ಯುವಕರು, ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ತಲುಪಿಸಿ ಬದಲಾವಣೆ ತರುವ ಕೆಲಸ ಮಾಡುತ್ತಿದ್ದೇವೆ. ಈ ಪ್ರಯತ್ನಕ್ಕೆ ನಮಗೆ ಮಾಧ್ಯಮಗಳ ಬೆಂಬಲ ತುಂಬಾ ಮುಖ್ಯ’ ಎಂದು ಹೇಳಿದರು.

‘ಚುನಾವಣೆಯಲ್ಲಿ ನೀಡಿದ ಆಶ್ವಾಸನೆ ಈಡೇರಿಸಲು ವಿಫಲವಾದ ಜನಪ್ರತಿನಿಧಿಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಅವಕಾಶವನ್ನು ಮತದಾರರಿಗೆ ನೀಡಲು ಸಂವಿಧಾನಕ್ಕೆ ತಿದ್ದುಪಡಿ ತರುವ ಅಗತ್ಯವಿದೆ. ಎಲ್ಲ ರಾಜಕೀಯ ಪಕ್ಷಗಳು ಈಡೇರಿಸಲಾಗದ ಸುಳ್ಳು ಪ್ರಣಾಳಿಕೆಯನ್ನು ಹೊರತರುತ್ತವೆ. ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಗಳಿಗೆ ರಾಜಕೀಯ ಪಕ್ಷಗಳು ಬದ್ಧತೆ ತೋರಬೇಕು. ಎಲ್ಲ ಪ್ರಣಾಳಿಕೆಗಳನ್ನು ನ್ಯಾಯಾಲಯದಲ್ಲಿ ನೋಂದಣಿ ಮಾಡಬೇಕು’ ಎಂಬ ವಿಚಾರವನ್ನು ಮುಂದಿಟ್ಟರು.

‘ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ. ಮೊದಲ ಹಂತದ ಚುನಾವಣೆಗೆ 14 ಕ್ಷೇತ್ರದಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷದ ಧೇಯೋದ್ದೇಶಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಚುನಾವಣಾ ಕಣದಿಂದ ಹಿಂದೆ ಉಳಿದಿದ್ದೇನೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದೇನೆ’ ಎಂದರು.

ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಜಿ.ಮುನಿರಾಜು ಮಾತನಾಡಿ, ‘ನಾನು ನೆಲಮಂಗಲ ವಿಧಾನಸಭಾ ಕ್ಷೇತ್ರದ ನಿವಾಸಿ. ಖಾಸಗಿ ಕಂಪೆನಿ ಉದ್ಯೋಗಿಯಾಗಿದ್ದೇನೆ. ಇವತ್ತು ದೇಶದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಅಸಮಾನತೆ ಇದೆ. ರಾಜಕೀಯ ವ್ಯವಸ್ಥೆ ಕೂಡ ಸರಿ ಇಲ್ಲ. ಇದನ್ನು ನೋಡಿ ಪ್ರಜಾಕೀಯ ಮೂಲಕ ಏನಾದರೂ ಬದಲಾವಣೆ ತರುವ ಉದ್ದೇಶದಿಂದ ಚುನಾವಣೆ ಸ್ಪರ್ಧಿಸಿರುವೆ. ಪಕ್ಷದ ಸಿದ್ಧಾಂತದಂತೆ ಜನರ ಧ್ವನಿಯಾಗಿ ಕೆಲಸ ಮಾಡುತ್ತೇನೆ’ ಎಂದು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !