ಕಾಂಗ್ರೆಸ್‌ಗೆ ಬೆಂಬಲ, ಕೆ.ಎಚ್‌.ಮುನಿಯಪ್ಪಗೆ ಅಲ್ಲ

ಬುಧವಾರ, ಏಪ್ರಿಲ್ 24, 2019
29 °C

ಕಾಂಗ್ರೆಸ್‌ಗೆ ಬೆಂಬಲ, ಕೆ.ಎಚ್‌.ಮುನಿಯಪ್ಪಗೆ ಅಲ್ಲ

Published:
Updated:
Prajavani

ಶಿಡ್ಲಘಟ್ಟ: ‘ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನನ್ನ ಬೆಂಬಲವಿದೆ ಹೊರತು ಕೆ.ಎಚ್.ಮುನಿಯಪ್ಪ ಅವರಿಗೆ ಅಲ್ಲ’ ಎಂದು ಶಾಸಕ ವಿ.ಮುನಿಯಪ್ಪ ಸ್ಪಷ್ಟಪಡಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನನಗೆ ವ್ಯಕ್ತಿಗಿಂತಲೂ ಪಕ್ಷ ಮುಖ್ಯ. ಆದ್ದರಿಂದ ಈ ಬಾರಿ ಕಾಂಗ್ರೆಸ್ ಪಕ್ಷದ ಪರ ಮತಯಾಚನೆ ಮಾಡುತ್ತೇನೆಯೇ ಹೊರತು ವ್ಯಕ್ತಿಯ ಪರವಾಗಿ ಅಲ್ಲ’ ಎಂದರು.

‘ನಾಲ್ಕು ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದೇನೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟುವುದರ ಜೊತೆಗೆ ಹಲವರನ್ನು ರಾಜಕೀಯವಾಗಿ ಬೆಳೆಸಿದ್ದೇನೆ. ಕೆ.ಎಚ್.ಮುನಿಯಪ್ಪ ಅವರು ರಾಜಕೀಯವಾಗಿ ಬೆಳೆದಂತೆಲ್ಲಾ ನನ್ನನ್ನು ಕಡೆಗಣಿಸಿದಾಗ ಅವರಿಗೆ ತಿದ್ದಿಕೊಳ್ಳುವಂತೆ ಸಲಹೆ ನೀಡಿದ್ದೆ. ಆದರೆ ತಮ್ಮ ವರ್ತನೆ ತಿದ್ದಿಕೊಳ್ಳುವ ಬದಲಿಗೆ ಸ್ವಂತಕ್ಕೆ ಜಮೀನು ಮಾಡಿಕೊಳ್ಳುವಲ್ಲಿ ನಿರತರಾಗಿದ್ದರು’ ಎಂದು ತಿಳಿಸಿದರು.

‘ಜಮೀನಿನ ವಿಚಾರವಾಗಿ ಕೆಟ್ಟ ಹೆಸರು ಬರುತ್ತದೆ ಎಂದು ಬುದ್ಧಿವಾದ ಹೇಳಿದ್ದೆ. ಅದಕ್ಕೆ ಅವರು ಕಿವಿಗೊಡಲಿಲ್ಲ. ರಾಜಕೀಯವಾಗಿ ಬೆಳೆಸಿದವರನ್ನೇ ಮುಗಿಸಲು ತಂತ್ರ ರೂಪಿಸಿದರು. ಇದನ್ನು ಕಂಡು ಕೆ.ಎಚ್.ಮುನಿಯಪ್ಪ ಅವರಿಗೆ ಈ ಬಾರಿ ಟಿಕೆಟ್ ನೀಡದಂತೆ ಮನವಿ ಮಾಡಿದವರಲ್ಲಿ ನಾನೂ ಒಬ್ಬ. ಆದರೆ ಪಕ್ಷ ಅಧಿಕೃತವಾಗಿ ಅವರಿಗೆ ಮತ್ತೆ ಟಿಕೆಟ್ ನೀಡಿದೆ. ವರಿಷ್ಠರ ಮಾತಿಗೆ ಗೌರವ ನೀಡಿ ಪಕ್ಷದ ಪರ ಮತಯಾಚನೆ ಮಾಡಲಿದ್ದೇನೆ’ ಎಂದು ವಿವರಿಸಿದರು.

‘2009ಕ್ಕೂ ಮೊದಲು ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರಕ್ಕೆ ಸೇರಿತ್ತು. ಸಂಸದರಾಗಿದ್ದ ಕೃಷ್ಣರಾಯರು ತಮ್ಮ ಅಧಿಕಾರಾವಧಿಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರು. 2009ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯಾಗಿ ಕ್ಷೇತ್ರವನ್ನು ಕೋಲಾರ ಲೋಕಸಭೆ ಕ್ಷೇತ್ರಕ್ಕೆ ಸೇರಿಸಲಾಯಿತು. ಕೆ.ಎಚ್.ಮುನಿಯಪ್ಪ ಸಂಸದರಾದ ನಂತರ ಸಂಸದರ ನಿಧಿಯಿಂದ ಕ್ಷೇತ್ರಕ್ಕೆ ಏನೆಲ್ಲಾ ಕೊಡುಗೆ ನೀಡಿದ್ದಾರೆ ಎಂಬುದು ಶಾಸಕನಾದ ನನಗೇ ಗೊತ್ತಿಲ್ಲ. ಇನ್ನು ಕ್ಷೇತ್ರದ ಜನರಿಗೇನು ಗೊತ್ತಿರುತ್ತದೆ. ಸಂಸದರ ನಿಧಿಯನ್ನು ಕೇವಲ ಅವರ ಹಿಂಬಾಲಕರಿಗೆ ನೀಡುವ ಮೂಲಕ ಸ್ಥಳೀಯ ಶಾಸಕರನ್ನು ಮೂಲೆ ಗುಂಪು ಮಾಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಏಪ್ರಿಲ್ 13ರಂದು ಕೋಲಾರಕ್ಕೆ ರಾಹುಲ್ ಗಾಂಧಿ ಬರುವ ಪ್ರಯುಕ್ತ ಪೂರ್ವಭಾವಿಯಾಗಿ ಏ. 10ರಂದು ಸಭೆ ನಡೆಯಲಿದೆ. ಕ್ಷೇತ್ರದ ವೀಕ್ಷಕ ಡಿ.ಕೆ.ಶಿವಕುಮಾರ್ ಸೇರಿದಂತೆ ಇಬ್ಬರು ಕೆಪಿಸಿಸಿ ಕಾರ್ಯದರ್ಶಿಗಳು ಭಾಗವಹಿಸಿ, ಕಾರ್ಯಕರ್ತರ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ 5 ವರ್ಷಗಳ ಸಾಧನೆ ಕೇವಲ ಭಾಷಣಗಳಲ್ಲಿ ಕೇಳಬಹುದು. ಅವರು ನೀಡಿದ್ದ ಯಾವುದೇ ಭರವಸೆಯನ್ನು ಈಡೇರಿಸಿಲ್ಲ. ಅವರ ಮಾತಿನಲ್ಲಿ ಭಾರತ ಹೊಳೆಯುತ್ತಿದೆ ಹೊರತು ಅಭಿವೃದ್ದಿ ಆಗಿಲ್ಲ ಎಂದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !