ಕೆಂಪುತೋಟದಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌ ಜಾರಿ

ಬುಧವಾರ, ಏಪ್ರಿಲ್ 24, 2019
24 °C

ಕೆಂಪುತೋಟದಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌ ಜಾರಿ

Published:
Updated:
Prajavani

ಬೆಂಗಳೂರು: ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆಯನ್ನು ಪರಿಚಯಿಸುವ ಮೂಲಕ ತೋಟಗಾರಿಕೆ ಇಲಾಖೆಯು ಲಾಲ್‌ಬಾಗ್‌ನ ಪಾರ್ಕಿಂಗ್‌ ಸಮಸ್ಯೆಗೆ ಇತಿಶ್ರೀ ಹಾಡಿದೆ.

ಗುರುವಾರ ಲಾಲ್‌ಬಾಗ್‌ನ ಡಬಲ್‌ ರಸ್ತೆ ಕಡೆಯ ಮುಖ್ಯ ಪ್ರವೇಶ ದ್ವಾರದಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆಯನ್ನು ‌ಪರಿಚಯಿಸಲಾಗಿದೆ. ದ್ವಿಚಕ್ರ ವಾಹನಕ್ಕೆ ₹25 ಶುಲ್ಕ (ಮೂರು ಗಂಟೆಗಳವರೆಗೆ ನಿಲ್ಲಿಸಲು ಅವಕಾಶ) ವಿಧಿಸಲಾಗುತ್ತದೆ. ಬಳಿಕ ಪ್ರತಿ ಗಂಟೆಗೆ ₹5 ಹೆಚ್ಚುವರಿಯಾಗಿ ಪಾವತಿಸಬೇಕು.

ಕಾರಿಗೆ ₹30 (ಮೂರು ಗಂಟೆಗಳವರೆಗೆ ನಿಲ್ಲಿಸಲು ಅವಕಾಶ) ಪಾವತಿಸಬೇಕು. ಬಳಿಕ ಪ್ರತಿ ಗಂಟೆಗೆ ಹೆಚ್ಚುವರಿಯಾಗಿ ₹10 ಪಾವತಿಸಬೇಕು. 

‘ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆಯಿಂದ ಉದ್ಯಾನಕ್ಕೆ ಭೇಟಿ ನೀಡುವವರ ಹಾಗೂ ನಿತ್ಯ ವಾಹನ ನಿಲುಗಡೆ ಮಾಡುವವರ ಮಾಹಿತಿ ಇಲಾಖೆಗೆ ದೊರೆಯಲಿದೆ. ವಾಣಿಜ್ಯ ಸಂಕೀರ್ಣಗಳಲ್ಲಿರುವಂತೆ ಇಲ್ಲಿಯೂ ಮಾಹಿತಿ ಗಣಿಕೀಕೃತವಾಗಿರುತ್ತದೆ’ ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕ ಎಂ.ವಿ.ವೆಂಕಟೇಶ್‌ ತಿಳಿಸಿದರು.

‘ಖಾಸಗಿ ವಾಹನ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶ ಇದೆ. ಅದಕ್ಕಾಗಿ ಮೆಟ್ರೊ ಹಾಗೂ ಬಸ್‌ಗಳ ಮೂಲಕ ಉದ್ಯಾನಕ್ಕೆ ಬರುವವರಿಗೆ ಪ್ರೋತ್ಸಾಹ ನೀಡುವ ಯೋಜನೆಯನ್ನು ಪರಿಚಯಿಸಲು ಯೋಚಿಸುತ್ತಿದ್ದೇವೆ. ಚುನಾವಣೆ ಮುಗಿದ ಬಳಿಕ ಆ ಯೋಜನೆಯನ್ನು ಪರಿಚಯಿಸಲಿದ್ದೇವೆ’ ಎಂದು ಅವರು ತಿಳಿಸಿದರು.

‘ಶಾಲಾ ವಾಹನ ಮತ್ತು ಬೆಳಗಿನ ವಿಹಾರಕ್ಕೆ ಬರುವವರಿಗೆ ಶುಲ್ಕದಿಂದ ವಿನಾಯಿತಿ ಇದೆ. ಬೆಳಿಗ್ಗೆ 9ರಿಂದ ಸಂಜೆ 6 ಗಂಟೆಯವರೆಗೂ ಸ್ಮಾರ್ಟ್‌ ಪಾರ್ಕಿಂಗ್‌ ಸೌಲಭ್ಯ ಲಭ್ಯವಿರಲಿದೆ. ಇಡೀ ದಿನ ಬೈಕ್‌ ನಿಲ್ಲಿಸಿದರೆ ₹50–₹80 ಹಾಗೂ ಕಾರಿಗೆ ₹80–₹100 ಶುಲ್ಕ ವಿಧಿಸುವ ಕುರಿತು ಚರ್ಚಿಸಲಾಗುತ್ತಿದೆ’ ಎಂದು ಲಾಲ್‌ಬಾಗ್‌ನ ಉಪನಿರ್ದೇಶಕ ಎಂ.ಆರ್.ಚಂದ್ರಶೇಖರ ಹೇಳಿದರು.

‘₹ 3 ಕೋಟಿ ವೆಚ್ಚದಲ್ಲಿ ಬಾಷ್ ಕಂಪನಿಯು ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿದೆ. ಅಲ್ಲದೆ ಒಂದು ವರ್ಷದ ನಿರ್ವಹಣೆಗಾಗಿ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ’ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !