ಎತ್ತಿನಹೊಳೆಗಾಗಿ ಅಭಿಮನ್ಯು ರೀತಿ ಹೋರಾಡಿದ್ದೇನೆ: ಸಂಸದ ಎಂ.ವೀರಪ್ಪ ಮೊಯಿಲಿ

ಭಾನುವಾರ, ಏಪ್ರಿಲ್ 21, 2019
24 °C
ತಿಪ್ಪೇನಹಳ್ಳಿಯಲ್ಲಿ ನಡೆದ ಲೋಕಸಭಾ ಚುನಾವಣಾ ಪ್ರಚಾರ ಸಭೆ

ಎತ್ತಿನಹೊಳೆಗಾಗಿ ಅಭಿಮನ್ಯು ರೀತಿ ಹೋರಾಡಿದ್ದೇನೆ: ಸಂಸದ ಎಂ.ವೀರಪ್ಪ ಮೊಯಿಲಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಈ ಭಾಗಕ್ಕೆ ತರಲು ವಿರೋಧವಿದ್ದರೂ ಅಭಿಮನ್ಯು ರೀತಿ ಹೋರಾಡಿದ್ದೇನೆ. ನನ್ನ ಪ್ರಾಣ ಹೋಗುವ ಮುನ್ನ ಈ ಭಾಗಕ್ಕೆ ಆ ನೀರು ಹರಿಸಿಯೇ ಸಿದ್ಧ’ ಎಂದು ಮೈತ್ರಿ ಅಭ್ಯರ್ಥಿ, ಸಂಸದ ಎಂ.ವೀರಪ್ಪ ಮೊಯಿಲಿ ಹೇಳಿದರು.

ಚಿಕ್ಕಬಳ್ಳಾಪುರ ತಾಲೂಕಿನ ವ್ಯಾಪ್ತಿಯ ತಿಪ್ಪೇನಹಳ್ಳಿಯಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಯುಪಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಗ್ಯಾಸ್ ಸಿಲಿಂಡರ್ ಬೆಲೆ ₹300 ರಿಂದ ₹350 ಕ್ಕೆ ಇಳಿಸಲಾಗುವುದು. ಯುಪಿಎ ಅವಧಿಯಲ್ಲಿ ಕಚ್ಚಾ ತೈಲ ಬೆಲೆ ಅಧಿಕವಾಗಿದ್ದರೂ ಬಡವರಿಗೆ ಹೊರೆಯಾಗದಂತೆ ನೋಡಿಕೊಳ್ಳಲು ತೈಲ ಕಂಪನಿಗಳಿಗೆ ₹3 ಲಕ್ಷ ಕೋಟಿ ರೂಪಾಯಿ ಸಬ್ಸಿಡಿ ಹಣ ನೀಡುತ್ತಿದ್ದೆವು’ ಎಂದು ಹೇಳಿದರು.

‘ಹೊಲ ಹೊಲಕ್ಕೆ ನೀರು, ಮನೆ ಮನೆಗೆ ಉದ್ಯೋಗ ನೀಡುವ ಗುರಿ ಹೊಂದಿದ್ದೇನೆ. ಚಿಕ್ಕಬಳ್ಳಾಪುರ ಭಾಗದಲ್ಲಿ ಮೊಬೈಲ್ ಬಿಡಿಭಾಗಗಳ ಉತ್ಪಾದನಾ ಕ್ಷೇತ್ರದ ಕೈಗಾರಿಕೆ ಸ್ಥಾಪನೆಗೆ ಈಗಾಗಲೇ ನಿರ್ಧರಿಸಿದ್ದು ಅದಕ್ಕಾಗಿ ಸಾವಿರ ಎಕರೆ ಭೂಮಿ ಮೀಸಲಿಡಲಾಗಿದೆ. ಎತ್ತಿನಹೊಳೆ ಕಾಮಗಾರಿ ಭರದಿಂದ ಸಾಗಿದೆ. ಆದರೆ ಅದಕ್ಕೆ ಕೆಲವರು ಅಡ್ಡಿಪಡಿಸುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ನಾನು ಹೆದರುವುದಿಲ್ಲ’ ಎಂದರು.

‘ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಬಲಿಜರನ್ನು ಹಿಂದುಳಿದ ವರ್ಗಕ್ಕೆ ಸೇರಿಸಿರುವೆ. ವಾಲ್ಮೀಕಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನ ಒದಗಿಸುವ ಕಾರ್ಯ ಮಾಡಿದ್ದೇನೆ. ಆದರೆ ಇವತ್ತು ಮೋದಿ ಅವರು ಸಂವಿಧಾನ ಬದಲಿಸುವ ದುಸ್ಸಾಹಸಕ್ಕೆ ಕೈ ಹಾಕಲು ಯತ್ನಿಸುತ್ತಿದ್ದಾರೆ. ಅಂತಹ ಪಕ್ಷಕ್ಕೆ ಮತದಾನ ಮಾಡದೇ ಕಾಂಗ್ರೆಸ್ ಬೆಂಬಲಿಸಿ’ ಎಂದು ಮನವಿ ಮಾಡಿದರು.

ಶಾಸಕ ಡಾ.ಕೆ.ಸುಧಾಕರ್ ಮಾತನಾಡಿ, ‘ಬಿಜೆಪಿಯವರು ಶ್ರೀರಾಮನನ್ನು ಮಾರುಕಟ್ಟೆ ಸರಕಾಗಿ ಮಾಡಿಕೊಂಡು ಮತಗಳನ್ನು ಪಡೆಯುತ್ತಿದ್ದಾರೆ. 1992ರಲ್ಲಿ ರಾಮ ಮಂದಿರ ಕಟ್ಟುತ್ತೇವೆ ಎಂದು ಹೇಳಿ ಇಟ್ಟಿಗೆಗಳನ್ನು ಸಂಗ್ರಹಿಸಿದರು. ಅದು ಈಗ ಏನಾಗಿದೆ, ಎಲ್ಲಿದೆ ಎಂದು ಯಾರಿಗೂ ಗೊತ್ತಿಲ್ಲ’ ಎಂದು ಹೇಳಿದರು.

‘ಸಿದ್ದರಾಮಯ್ಯ ಅವರ ಸರ್ಕಾರವು ರೈತರಿಗೆ, ಹೈನುಗಾರರಿಗೆ ಹಲವು ಕೊಡುಗೆಗಳನ್ನು ನೀಡಿದೆ. ಪ್ರತಿ ಲೀಟರ್‌ ಹಾಲಿಗೆ ₹5 ಸಹಾಯಧನ ನೀಡಿದ ಪರಿಣಾಮ ಈ ಭಾಗದಲ್ಲಿ ಆರು ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಈ ಹಿಂದಿನ ನಮ್ಮ ಕಾಂಗ್ರೆಸ್‌ ಸರ್ಕಾರ ಎತ್ತಿನಹೊಳೆ ಯೋಜನೆಗೆ ₹13 ಸಾವಿರ ಕೋಟಿ ಅನುದಾನ ನೀಡಿದೆ. ಆ ಯೋಜನೆಗೆ ರಾಜ್ಯ ಸರ್ಕಾರ ವರ್ಷಕ್ಕೆ ₹500 ಕೋಟಿ ನೀಡಿದರೆ ಸಾಲದು, ವರ್ಷಕ್ಕೆ ₹5,000 ಕೋಟಿ ನೀಡಬೇಕು ಎಂದು ನೀರಾವರಿ ಸಚಿವರಿಗೆ ಆಗ್ರಹಿಸಿದ್ದೇನೆ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಿ.ಎನ್.ಕೇಶವರೆಡ್ಡಿ, ಪ್ರಕಾಶ್‌, ಕಾಂಗ್ರೆಸ್‌ ಮುಖಂಡರಾದ ಕೆ.ವಿ.ನಾಗರಾಜ್, ಯಲುವಹಳ್ಳಿ ಎನ್.ರಮೇಶ್‌, ಗೋವಿಂದಸ್ವಾಮಿ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !