ದೇಶದ ಐಕ್ಯತೆಗೆ ಬಿಜೆಪಿ ಸೋಲಿಸಿ: ಸುಭಾಷಿಣಿ ಅಲಿ

ಬುಧವಾರ, ಏಪ್ರಿಲ್ 24, 2019
31 °C
ಸಿಪಿಎಂ ಅಭ್ಯರ್ಥಿ ಎಸ್.ವರಲಕ್ಷ್ಮಿ ಅವರ ಚುನಾವಣಾ ಪ್ರಚಾರ ಸಭೆ

ದೇಶದ ಐಕ್ಯತೆಗೆ ಬಿಜೆಪಿ ಸೋಲಿಸಿ: ಸುಭಾಷಿಣಿ ಅಲಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ದೇಶದ ಐಕ್ಯತೆಗಾಗಿ ಬಿಜೆಪಿಯನ್ನು ಸೋಲಿಸಿ, ಜಾತ್ಯತೀತ ಮತ್ತು ಜನಪರವಾದ ಪಕ್ಷವನ್ನು ಅಧಿಕಾರಕ್ಕೆ ತರಬೇಕು’ ಎಂದು ಸಿಪಿಎಂ ಪಾಲಿಟ್ ಬ್ಯುರೊ ಸದಸ್ಯೆ ಸುಭಾಷಿಣಿ ಅಲಿ ಹೇಳಿದರು.

ನಗರದಲ್ಲಿ ಶನಿವಾರ ಸಿಪಿಎಂ ಅಭ್ಯರ್ಥಿ ಎಸ್.ವರಲಕ್ಷ್ಮಿ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ದೇಶದ ಸೇವೆ ಮಾಡಿಲ್ಲ. ಬದಲು ಶ್ರೀಮಂತ ಉದ್ಯಮಿಗಳಾದ ಅನಿಲ್ ಅಂಬಾನಿ, ಅದಾನಿ ಅವರ ಪರವಾಗಿ ಕೆಲಸ ಮಾಡಿದ್ದಾರೆಯೇ ಹೊರತು ಬಡವರು ಮತ್ತು ಕಾರ್ಮಿಕರ ಪರವಾಗಿ ಕೆಲಸ ಮಾಡಿಲ್ಲ’ ಎಂದು ಆರೋಪಿಸಿದರು.

‘ಇದೇ ಜಿಲ್ಲೆಯಲ್ಲಿ ಹುಟ್ಟಿದಂತಹ ಟಿಪ್ಪು ಸುಲ್ತಾನ್ ಸಹ ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ. ಆದರೆ ಮೋದಿ ಅವರು ಅಮೆರಿಕಾ, ಬ್ರಿಟನ್, ಚೀನಾ ದೇಶಗಳ ಮುಂದೆ ಗೊಡ್ಡು ಸಲಾಂ ಹಾಕುತ್ತಿದ್ದಾರೆ. ಕಡಿಮೆ ಬೆಲೆಗೆ ಸಿಗುವ ಪೆಟ್ರೋಲ್ ಅನ್ನು ಅಮೆರಿಕಾ ಮಾತು ಕೇಳಿ ಹೆಚ್ಚು ಬೆಲೆಗೆ ಮಾರಿ ಸಾಮಾನ್ಯ ಜನರ ಮೇಲೆ ಹೆಚ್ಚು ತೆರಿಗೆ ಹಾಕುತ್ತಿದ್ದಾರೆ’ ಎಂದು ಟೀಕಿಸಿದರು.

‘ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ವಿಭಜನೆ ಮಾಡುತ್ತಿದ್ದಾರೆ. ವಾಕ್ ಸ್ವಾತಂತ್ರ್ಯ ದಮನ ಮಾಡಲಾಗುತ್ತಿದೆ. ತಮ್ಮ ಅಭಿಪ್ರಾಯಗಳನ್ನು ಮಂಡಿಸುವವರನ್ನು ಹತ್ಯೆ ಮಾಡುತ್ತಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ. ಆದ್ದರಿಂದ ಪ್ರತಿಯೊಬ್ಬರೂ ಯೋಚನೆ ಮಾಡಿ ಮತ ಚಲಾಯಿಸಬೇಕು’ ಎಂದರು.

‘ಮೋದಿ ಅವರು ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಆಶ್ವಾಸನೆಗಳು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಕಪ್ಪು ಹಣ ದೇಶಕ್ಕೆ ವಾಪಸ್‌ ಬರಲಿಲ್ಲ. ಯುವಕರಿಗೆ ಉದ್ಯೋಗ ಕೊಡಲಿಲ್ಲ, ರೈತರಿಗೆ ಸಾಲ ಮನ್ನಾ ಮಾಡಲಿಲ್ಲ. ಇವರು ರೈತರು ಮತ್ತು ಬಡವರ ಪರವಾಗಿ ಕೆಲಸ ಮಾಡದೆ ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡಿ, ಅವರ ಕೋಟಿಗಟ್ಟಲೇ ಸಾಲ ಮನ್ನಾ ಮಾಡಿದ್ದಾರೆ’ ಎಂದು ತಿಳಿಸಿದರು.

‘ರಾಜ್ಯದ ಸಂಪತ್ತನ್ನು ಲೂಟಿ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದಲ್ಲಿ ಬಿ.ಎನ್.ಬಚ್ಚೇಗೌಡರು ಕಾರ್ಮಿಕ ಸಚಿವರಾಗಿದ್ದರು. ಆಗ ಬೆಂಗಳೂರಿನ ಕಾರ್ಖಾನೆಯೊಂದರ ಮಾಲೀಕರ ಕಾರ್ಮಿಕರಿಗೆ ಮೂರು ತಿಂಗಳ ವೇತನ ಕೊಡದೆ ಪರಾರಿಯಾಗಿದ್ದ. ಅದರ ಬಗ್ಗೆ ಕೇಳಲು ನಾನು ದೆಹಲಿಯಿಂದ ಬರಬೇಕಾಯಿತು. ಕೊನೆಗೆ ಅವರು ವೇತನ ಕೊಡಸಲಿಲ್ಲ’ ಎಂದು ಹೇಳಿದರು.

‘ಮೋದಿ ಅವರ ಸರ್ಕಾರದಲ್ಲಿ ಬ್ಯಾಂಕ್ ಲೂಟಿ ಮಾಡಿ ಓಡಿ ಹೋಗಬಹುದು. ಯಡಿಯೂರಪ್ಪ ಅವರ ಸರ್ಕಾರದದಲ್ಲಿ ಬಚ್ಚೇಗೌಡರು ಕಾರ್ಮಿಕರಿಗೆ ವೇತನ ಕೊಡಿಸದೆ ಓಡಿ ಹೋಗಬಹುದು. ಕೊನೆಗೆ ಇವರು ಈ ದೇಶವನ್ನು ಲೂಟಿ ಮಾಡಿ ಓಡಿ ಹೋಗುತ್ತಾರೆ ಆದ್ದರಿಂದ ಬಿಜೆಪಿಯನ್ನು ಸೋಲಿಸಬೇಕು’ ಎಂದರು.

ಸಿಪಿಎಂ ಅಭ್ಯರ್ಥಿ ಎಸ್.ವರಲಕ್ಷ್ಮಿ ಮಾತನಾಡಿ, ‘ಕಳೆದ 5 ವರ್ಷಗಳಿಂದ ನರೇಂದ್ರ ಮೋದಿ ಅವರು ಬಿಟ್ಟಿ ಪ್ರಚಾರ ತೆಗೆದುಕೊಂಡು ಅದನ್ನೇ ತಮ್ಮ ಸಾಧನೆ ಎಂದು ಬಿಂಬಿಸುತ್ತಿದ್ದಾರೆ. ಇತ್ತ ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 11 ವರ್ಷ ಕಳೆದರೂ ಕಾಂಗ್ರೆಸ್ ಪಕ್ಷ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ’ ಎಂದು ತಿಳಿಸಿದರು.

ಮುಖಂಡ ಜಿ.ವಿ ಶ್ರೀರಾಮರೆಡ್ಡಿ, ಸಿಪಿಎಂ ರಾಜ್ಯ ಸಮಿತಿ ಸದಸ್ಯರಾದ ಕೆ.ಎನ್.ಉಮೇಶ್‌, ಮಿನಾಕ್ಷಿ ಸುಂದರಂ, ಚನ್ನರಾಯಪ್ಪ, ಸಿಪಿಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಜಯರಾಂ ರೆಡ್ಡಿ, ಕೃಷಿ ಕೂಲಿಕಾರರ ಸಂಘಟನೆ ರಾಜ್ಯ ಸಮಿತಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ, ಪ್ರಾಂತ ರೈತ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಬಿ.ಎಂ.ಮುನಿಕೃಷ್ಣಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !