ರಸ್ತೆ ವಿನ್ಯಾಸದ ಕ್ರಮವೇ ಬದಲಾಗಬೇಕು

ಶನಿವಾರ, ಏಪ್ರಿಲ್ 20, 2019
29 °C

ರಸ್ತೆ ವಿನ್ಯಾಸದ ಕ್ರಮವೇ ಬದಲಾಗಬೇಕು

Published:
Updated:
Prajavani

‘ಮಂಗಳ ಗ್ರಹದವರೆಗೆ ಹೋಗಲು ಭಾರತೀಯರಿಗೆ ಸಾಧ್ಯವಿದೆ. ಆದರೆ, ಒಳ್ಳೆಯ ರಸ್ತೆ ನಿರ್ಮಿಸಲು ಬರುವುದಿಲ್ಲ’ ಎಂಬ ಮಾತು ತಜ್ಞರ ವಲಯದಲ್ಲಿ ಚಾಲ್ತಿಯಲ್ಲಿದೆ. ಇದು ಮಂಗಳೂರು ನಗರಕ್ಕೆ ಹೆಚ್ಚು ಅನ್ವಯವಾಗುತ್ತದೆ. ರಸ್ತೆ ವಿನ್ಯಾಸಕ್ಕೆ ಸಂಬಂಧಿಸಿದಂತೆ ಇಲ್ಲಿನ ಮಹಾನಗರ ಪಾಲಿಕೆಯ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಮತ್ತು ಸಲಹೆಗಾರರ ಆಲೋಚನಾ ಕ್ರಮದಲ್ಲೇ ದೋಷವಿದೆ. ಪರಿಣಾಮವಾಗಿ ವಾಹನಗಳ ಸಂಚಾರವನ್ನಷ್ಟೇ ಕೇಂದ್ರೀಕರಿಸಿದ ರಸ್ತೆಗಳ ನಿರ್ಮಾಣವಾಗುತ್ತಿದೆ. ಇಲ್ಲಿ ಪಾದಚಾರಿಗಳ ಬೇಕು, ಬೇಡಗಳನ್ನು ಕೇಳುವವರೇ ಇಲ್ಲವಾಗಿದೆ. ರಸ್ತೆ ವಿನ್ಯಾಸಕ್ಕೆ ಸಂಬಂಧಿಸಿದ ಆಲೋಚನಾ ಕ್ರಮದಲ್ಲಿ ಬದಲಾವಣೆಯಾದರೆ ಮಾತ್ರವೇ ಪರಿಹಾರ ದೊರಕುತ್ತದೆ.

ಹೊಸದಾಗಿ ಜನರು ಇಲ್ಲಿನ ರಸ್ತೆಗಳು ಹೇಗಿವೆ ಎಂಬುದರ ಮೇಲೆ ನಗರದ ಬಗ್ಗೆ ಒಂದು ಅಭಿಪ್ರಾಯಕ್ಕೆ ಬರುತ್ತಾರೆ. ರಸ್ತೆಗಳು ಎಂದರೆ ವಾಹನ ಸಂಚಾರಕ್ಕೆ ಮಾತ್ರ ಇರುವ ಪಥಗಳು ಎಂಬ ಅಭಿಪ್ರಾಯವೊಂದು ಆಳವಾಗಿ ಬೇರುಬಿಟ್ಟಿದೆ. ಅದರ ಆಧಾರದಲ್ಲೇ ರಸ್ತೆಗಳ ವಿನ್ಯಾಸವೂ ಆಗುತ್ತಿದೆ. ವಾಹನ ಸಂಚಾರದ ಪಥವೇ ರಸ್ತೆಗಳ ಬಹುಭಾಗವನ್ನು ಆಕ್ರಮಿಸಿಕೊಳ್ಳುತ್ತಿದೆ. ಪಾದಚಾರಿಗಳಿಗೆ ಆದ್ಯತೆ ನೀಡುವಂತಹ ರಸ್ತೆಯ ವಿನ್ಯಾಸವನ್ನು ಮಾಡುವುದು ಈಗಿನ ತುರ್ತು.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನಗರ ಯೋಜನೆ ರೂಪಿಸುವವರಲ್ಲಿ ಪರಿಣತಿಯ ಕೊರತೆ ಇದೆ. ನಗರ ಯೋಜನೆಯ ಬಗ್ಗೆ ಅಧ್ಯಯನ ನಡೆಸದೇ ಇರುವವರು ನಗರ ಯೋಜನಾ ವಿಭಾಗದಲ್ಲಿ ಅಧಿಕಾರಿಗಳಾಗಿದ್ದಾರೆ. ವೈದ್ಯರಲ್ಲದವರು ಶಸ್ತ್ರಚಿಕಿತ್ಸೆ ನಡೆಸುವಂತಹ ಸ್ಥಿತಿ ಇದೆ. ಕೆಲವೇ ಸಲಹೆಗಾರರ ಬಳಿ ಅಧಿಕಾರ ಕೇಂದ್ರೀಕೃತವಾಗಿರುವುದು ಕೂಡ ಇಂತಹ ದುಸ್ಥಿತಿಗೆ ಕಾರಣ. ಇಡೀ ನಗರದ ಅಭಿವೃದ್ಧಿಯನ್ನು ಕೆಲವರು ನಿರ್ಧರಿಸುವಂತಾಗಿದೆ. ನಗರ ಯೋಜನಾ ಕ್ಷೇತ್ರದ ವೃತ್ತಿಪರರ ನಿರಾಸಕ್ತಿ ಕೂಡ ಈ ರೀತಿಯ ಸಮಸ್ಯೆಗಳಿಗೆ ಪ್ರಮುಖ ಕಾರಣಗಳಲ್ಲಿ ಒಂದು. ಸುಶಿಕ್ಷಿತರು ಮತ್ತು ಹೆಚ್ಚು ಸಂಚಾರ ಮಾಡುವವರು ಮೌನ ವಹಿಸುತ್ತಿದ್ದಾರೆ. ಕೆಲವೇ ಹೋರಾಟಗಾರರು ದನಿ ಎತ್ತುತ್ತಿದ್ದಾರೆ. ಆದರೆ, ಕೆಲವೊಮ್ಮೆ ಅವರು ಪೂರ್ಣ ಮಾಹಿತಿ ಇಲ್ಲದೇ ಹೋರಾಟಕ್ಕೆ ಇಳಿಯುತ್ತಾರೆ. ಅವರನ್ನೇ ತಪ್ಪಿತಸ್ಥರಂತೆ ಬಿಂಬಿಸಿ ಹಳೆಯ ಕ್ರಮವನ್ನೇ ಮುಂದುವರಿಸಲಾಗುತ್ತದೆ.

ರಸ್ತೆ ವಿಸ್ತರಣೆ ವಿಷಯದಲ್ಲಿ ನಗರದ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ‘ಮಹಾ ಯೋಜನೆ’ಯನ್ನು (ಸಿಡಿಪಿ) ಉಲ್ಲಂಘಿಸಬಾರದು. ಆಯಾ ವಲಯದ ಅಗತ್ಯಕ್ಕೆ ಅನುಗುಣವಾಗಿ ರಸ್ತೆಗಳ ವಿಸ್ತೀರ್ಣವನ್ನು ನಿರ್ಧರಿಸಬೇಕು. ವಾಹನ ಸಂಚಾರ ಪಥ, ಚರಂಡಿ, ಕೇಬಲ್‌ ಅಳವಡಿಕೆ ಕೊಳವೆ, ಪಾದಚಾರಿ ಮಾರ್ಗ, ಗಿಡ ನೆಡುವ ಸ್ಥಳ ಎಲ್ಲವನ್ನೂ ರಸ್ತೆಯು ಒಳಗೊಳ್ಳಬೇಕು. ಇಂತಹ ಮಾದರಿಯಲ್ಲಿ ಪಾದಚಾರಿ ಮಾರ್ಗದ ವಿಸ್ತೀರ್ಣದಲ್ಲಿ ಎಲ್ಲಿಯೂ ರಾಜಿ ಮಾಡಿಕೊಳ್ಳಬಾರದು.

ಪಾದಚಾರಿ ಮಾರ್ಗಗಳು ಉತ್ತಮವಾಗಿದ್ದಷ್ಟೂ ನಗರದ ಸಂಚಾರ ದಟ್ಟಣೆ ತಗ್ಗುತ್ತದೆ. ಮಂಗಳೂರಿನಲ್ಲಿ ಎಲ್ಲಿಯೂ 100 ಮೀಟರ್‌ ಸಲೀಸಾಗಿ ನಡೆದು ಹೋಗಬಹುದಾದ ಪಾದಚಾರಿ ಮಾರ್ಗಗಳಿಲ್ಲ. ಇಲ್ಲಿ ಅತ್ಯುತ್ತಮ ಪಾದಚಾರಿ ಮಾರ್ಗಗಳನ್ನು ನಿರ್ಮಿಸಿದರೆ ಜನರು ಕೆಲವು ಕಿಲೋ ಮೀಟರ್‌ ದೂರವನ್ನು ನಡೆದೇ ಕ್ರಮಿಸುತ್ತಾರೆ. ರಸ್ತೆಗೆ ಇಳಿಯುವ ವಾಹನಗಳ ಸಂಖ್ಯೆ ಸಹಜವಾಗಿಯೇ ತಗ್ಗುತ್ತದೆ. ಕಂಕನಾಡಿ ಜಂಕ್ಷನ್‌ನಿಂದ ಕೋಟಿ–ಚೆನ್ನಯ ವೃತ್ತದವರೆಗಿನ 1.4 ಕಿ.ಮೀ. ರಸ್ತೆ ಅತ್ಯುತ್ತಮ ಪಾದಚಾರಿ ಮಾರ್ಗಗಳಿಗೆ ಒಂದು ಮಾದರಿ. ಇಲ್ಲಿ ಎರಡೂ ಬದಿಯಲ್ಲಿ ಪಾದಚಾರಿಗಳಿಗೆ 2.4 ಮೀಟರ್‌ ಅಗಲದ ಪಾದಚಾರಿ ಮಾರ್ಗ ಒದಗಿಸಲಾಗಿದೆ. ಈ ಮಾದರಿಯನ್ನು ಆದಷ್ಟು ಬೇಗ ಮಂಗಳೂರು ಅಳವಡಿಸಿಕೊಳ್ಳಬೇಕಿದೆ.

ನಮ್ಮ ನಗರದಲ್ಲಿ ಪಾದಚಾರಿಗಳ ಹಕ್ಕಿನ ಕುರಿತು ದನಿ ಎತ್ತುವವರ ಸಂಖ್ಯೆ ಕಡಿಮೆ ಇದೆ. ಬಹಳಷ್ಟು ಮಂದಿ ನ್ಯೂಯಾರ್ಕ್‌, ಬರ್ಲಿನ್‌ ಮುಂತಾದ ನಗರಗಳಿಗೆ ಹೋಗಿ ಅತ್ಯುತ್ತಮ ರಸ್ತೆಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾರೆ. ಮರಳಿ ಬಂದ ಮೇಲೆ ಮೌನಕ್ಕೆ ಶರಣಾಗುತ್ತಾರೆ. ಪಾದಚಾರಿಗಳ ಹಕ್ಕಿಗಾಗಿ ಬಲವಾದ ದನಿ ಕೇಳಿಬಂದರೆ ಸಹಜವಾಗಿಯೇ ವಿನ್ಯಾಸದಲ್ಲೂ ಬದಲಾವಣೆಗಳು ಜಾರಿಗೆ ಬರುತ್ತವೆ. ರಸ್ತೆ ಎಂಬುದು ವಾಹನಗಳ ಓಡಾಟಕ್ಕಾಗಿ ಮಾತ್ರ ಇರುವ ಪಥ ಎಂಬ ಒಪ್ಪಿತ ಕಲ್ಪನೆಯನ್ನು ಬದಲಿಸುವುದು ಈಗಿನ ತುರ್ತು.

– ನಿರೂಪಣೆ – ವಿ.ಎಸ್‌.ಸುಬ್ರಹ್ಮಣ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !