ಭಾನುವಾರ, ಸೆಪ್ಟೆಂಬರ್ 26, 2021
21 °C
ಮಂಗಳೂರು ನಗರದಾದ್ಯಂತ ಇಂದಿನಿಂದ ರೇಷನಿಂಗ್‌ ಜಾರಿ

ನಾಲ್ಕು ದಿನ ನೀರು, ಎರಡು ದಿನ ಬಿಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಮಳೆಯಾಗಿ ತುಂಬೆ ಅಣೆಕಟ್ಟೆಯ ಒಳಹರಿವು ಸುಧಾರಿಸಬಹುದು ಎಂಬ ನಿರೀಕ್ಷೆ ಹುಸಿಯಾಗಿದ್ದು, ಬುಧವಾರ ಬೆಳಿಗ್ಗೆಯಿಂದಲೇ ನಗರದ ನೀರು ಪೂರೈಕೆಯಲ್ಲಿ ರೇಷನಿಂಗ್‌ ಜಾರಿಗೊಳಿಸಲು ನಿರ್ಧರಿಸಲಾಗಿದೆ. ನಾಲ್ಕು ದಿನಗಳ ಸತತ ನೀರು ಪೂರೈಕೆಯ ಬಳಿಕ ಎರಡು ದಿನಗಳ ಕಾಲ ಸಂಪೂರ್ಣ ಸ್ಥಗಿತಗೊಳಿಸಲಾಗುತ್ತದೆ.

ಬುಧವಾರ ಬೆಳಿಗ್ಗೆ 6 ಗಂಟೆಯಿಂದಲೇ ನೀರಿನ ರೇಷನಿಂಗ್‌ ಜಾರಿಯಾಗಲಿದೆ. ಶುಕ್ರವಾರ ಬೆಳಿಗ್ಗೆ 6 ಗಂಟೆಯವರೆಗೂ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ. ಶುಕ್ರವಾರ (ಮೇ 3) ಬೆಳಿಗ್ಗೆ 6 ಗಂಟೆಯಿಂದ ಪುನಃ ನೀರು ಪೂರೈಕೆ ಪ್ರಾರಂಭವಾಗಲಿದ್ದು, ಮಂಗಳವಾರ (ಮೇ 7) ಬೆಳಿಗ್ಗೆ 6 ಗಂಟೆಯವರೆಗೂ ನೀರು ಪೂರೈಕೆ ಮಾಡಲಾಗುತ್ತದೆ. ನಂತರ ಮತ್ತೆ 48 ಗಂಟೆಗಳ ಬಿಡುವಿನ ಬಳಿಕ 96 ಗಂಟೆಗಳ ನಿರಂತರ ನೀರು ಸರಬರಾಜು ಮುಂದುವರಿಯಲಿದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಪ್ರಭಾರ ಆಯುಕ್ತ ಬಿ.ಎಚ್‌.ನಾರಾಯಣಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‌ ಅವರು ಭಾನುವಾರ ತುಂಬೆ ಅಣಕಟ್ಟೆಗೆ ಭೇಟಿನೀಡಿ ಪರಿಸ್ಥಿತಿ ಅವಲೋಕಿಸಿದ್ದರು. ಮಂಗಳವಾರದವರೆಗೂ ಪರಿಸ್ಥಿತಿ ಸುಧಾರಿಸದೇ ಇದ್ದಲ್ಲಿ ಮೇ 1ರಿಂದ ರೇಷನಿಂಗ್‌ ಜಾರಿಗೊಳಿಸುವ ಕುರಿತು ತೀರ್ಮಾನಿಸುವುದಾಗಿ ತಿಳಿಸಿದ್ದರು. ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ರೇಷನಿಂಗ್‌ ನಿರ್ಧಾರ ಕೈಗೊಳ್ಳಲಾಗಿದೆ. ಮೇ 21ರವರೆಗೂ ರೇಷನಿಂಗ್ ಮುಂದುವರಿಸಲು ತೀರ್ಮಾನಿಸಲಾಗಿದೆ.

27 ದಿನಗಳಿಗಿದೆ ನೀರು: ತುಂಬೆ ಅಣೆಕಟ್ಟೆಯಲ್ಲಿನ ನೀರಿನ ಸಂಗ್ರಹದ ಮಟ್ಟ ಮಂಗಳವಾರ ಸಂಜೆಯ ವೇಳೆಗೆ 4.7 ಮೀಟರ್‌ ಇತ್ತು. ಈಗಿನ ಅಂದಾಜಿನ ಪ್ರಕಾರ, ನಗರಕ್ಕೆ ನಿತ್ಯವೂ ನೀರು ಪೂರೈಸಿದರೆ 27 ದಿನಗಳಿಗೆ ಸಾಕಾಗುತ್ತದೆ. ಜೂನ್‌ ಆರಂಭದವರೆಗೂ ಮಳೆಯಾಗದಿದ್ದರೆ ನಗರದಲ್ಲಿ ತೀವ್ರವಾದ ನೀರಿನ ಕೊರತೆ ಉದ್ಭವಿಸುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿಯೇ ರೇಷನಿಂಗ್‌ ಆರಂಭಿಸಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಮೇ ಅಂತ್ಯದವರೆಗೂ ರೇಷನಿಂಗ್‌ ಮಾಡಿದರೆ ಎಂಟರಿಂದ ಒಂಬತ್ತು ದಿನಗಳಿಗೆ ಸಾಕಾಗುವಷ್ಟು ನೀರು ಉಳಿಯುತ್ತದೆ. ಆಗ ಜೂನ್‌ ಮೊದಲ ವಾರದವರೆಗೂ ನೀರಿನ ಕೊರತೆ ಹೆಚ್ಚದಂತೆ ನಿಭಾಯಿಸಲು ಸಾಧ್ಯವಾಗುತ್ತದೆ. ರೇಷನಿಂಗ್‌ ಮುಂದುವರಿಸಿದರೆ ಈಗ ಇರುವ ನೀರು ಜೂನ್‌ 4ರವರೆಗೂ ಪೂರೈಸಲು ಸಾಕಾಗುತ್ತದೆ ಎನ್ನುತ್ತಾರೆ ಅವರು.

ಟ್ಯಾಂಕರ್‌ ಸಿದ್ಧ: ‘ಬುಧವಾರ ಬೆಳಿಗ್ಗೆ 6 ಗಂಟೆಯಿಂದ ಪಂಪಿಂಗ್‌ ಅನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು. 48 ಗಂಟೆಗಳ ಬಳಿಕ ಎರಡೂ ಪಂಪ್‌ಗಳನ್ನು ಏಕಕಾಲಕ್ಕೆ ಚಾಲನೆ ಮಾಡಲಾಗುವುದು. ಶುಕ್ರವಾರ ಬೆಳಿಗ್ಗೆಯಿಂದ ನೀರು ಪೂರೈಕೆ ಪುನರಾರಂಭ ಆಗಲಿದೆ. ಆ ದಿನ ಸಂಜೆಯ ವೇಳೆಗೆ ನಗರ ಎಲ್ಲ ಪ್ರದೇಶಗಳಿಗೂ ನೀರು ತಲುಪಲಿದೆ’ ಎಂದು ಪಾಲಿಕೆಯ ನೀರು ಪೂರೈಕೆ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

‘ರೇಷನಿಂಗ್‌ ಪರಿಣಾಮದಿಂದ ನಗರದ ಕೆಲವು ಎತ್ತರದ ಪ್ರದೇಶಗಳಿಗೆ ನೀರು ತಲುಪದೇ ಇರಬಹುದು. ಅಂತಹ ಪರಿಸ್ಥಿತಿ ಎದುರಾದಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಟ್ಟು ಏಳು ಟ್ಯಾಂಕರ್‌ಗಳಿವೆ. ನಾಲ್ಕು ಟ್ಯಾಂಕರ್‌ಗಳನ್ನು ಮಂಗಳೂರು ನಗರಕ್ಕೆ ಮತ್ತು ಮೂರು ಟ್ಯಾಂಕರ್‌ಗಳನ್ನು ಸುರತ್ಕಲ್‌ ಪ್ರದೇಶಕ್ಕೆ ಒದಗಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಮಿತ ಬಳಕೆಗೆ ಮನವಿ: ‘ನಗರದಲ್ಲಿ ನೀರಿನ ಕೊರತೆ ಉಂಟಾಗುವುದನ್ನು ತಪ್ಪಿಸುವ ಉದ್ದೇಶದಿಂದ ರೇಷನಿಂಗ್‌ ಆರಂಭಿಸಲಾಗುತ್ತಿದೆ. ಸಾರ್ವಜನಿಕರು ತಮ್ಮ ಮನೆಗಳಲ್ಲಿನ ಕೈತೋಟಗಳಿಗೆ, ವಾಹನ ತೊಳೆಯಲು ಮತ್ತು ಇತರೆ ಕೆಲಸಗಳಿಗೆ ಕುಡಿಯುವ ನೀರನ್ನು ಬಳಸಬಾರದು. ಎಲ್ಲಿಯೂ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಬೇಕು. ನೀರನ್ನು ಮಿತವಾಗಿ ಬಳಸುವ ಮೂಲಕ ಮಹಾನಗರ ಪಾಲಿಕೆಯೊಂದಿಗೆ ಸಹಕರಿಸಬೇಕು’ ಎಂದು ಪಾಲಿಕೆ ಪ್ರಭಾರ ಆಯುಕ್ತ ಬಿ.ಎಚ್‌.ನಾರಾಯಣಪ್ಪ ಜನರಲ್ಲಿ ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.