ಭಾನುವಾರ, ಸೆಪ್ಟೆಂಬರ್ 26, 2021
23 °C
ಸಂದೇಶ ರೂಪದಲ್ಲಿ ಪೋಷಕರಿಗೆ ಎಸ್.ಜಯಕುಮಾರ್ ಕಿವಿಮಾತು

ಶಾಲೆಗೆ ಸೇರಲು 15 ಅಂಶಗಳ ಟಿಪ್ಸ್!

ವೆಂಕಟೇಶ್ ಜಿ.ಎಚ್. Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಪ್ರತಿ ತಿಂಗಳು ಶುಲ್ಕ ತುಂಬುವ ಗೋಜು ಇಲ್ಲ. ಫೀ ಕಟ್ಟಲಿಲ್ಲ ಎಂದು ಮಕ್ಕಳನ್ನು ಶಾಲೆಯಿಂದ ಹೊರಗೆ ಕಳುಹಿಸುವುದಿಲ್ಲ. ನಮ್ಮಲ್ಲೂ ಇಂಗ್ಲಿಷ್ ಕಲಿಸುತ್ತೇವೆ. ಹಾಗಾಗಿ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ..

ಇದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಾಥಮಿಕ ಶಿಕ್ಷಣ ವಿಭಾಗದ ನಿರ್ದೇಶಕ ಎಸ್.ಜಯಕುಮಾರ್ ಪೋಷಕರಿಗೆ ಮಾಡಿಕೊಂಡಿರುವ ಮನವಿಯ ಅಂಶ..

‘ಸರ್ಕಾರಿ ಶಾಲೆಗಳಿಗೆ ಸೇರಿಸಿದರೆ ನಿಮಗೆ ಏನೆಲ್ಲಾ ಅನುಕೂಲಗಳಿವೆ. ಮಕ್ಕಳ ಭವಿಷ್ಯ ರೂಪಿಸಲು ಹೇಗೆಲ್ಲಾ ನೆರವು ದೊರಯಲಿದೆ’ ಎಂಬುದರ ಬಗ್ಗೆ ಪೋಷಕರು ಹಾಗೂ ಮಕ್ಕಳಿಗೆ ನೀಡಲಾದ 15 ಅಂಶಗಳ ಟಿಪ್ಸ್ ಜಯಕುಮಾರ್ ಹೆಸರಿನಲ್ಲಿ ಸಂದೇಶದ ರೂಪದಲ್ಲಿ ವಾಟ್ಸ್‌ ಆ್ಯಪ್ ಹಾಗೂ ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ.

ಶೂನ್ಯ ಫಲತಾಂಶ ಇಲ್ಲ:

ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಗಳು ಉತ್ತಮ ಫಲಿತಾಂಶ ದಾಖಲಿಸಿವೆ. ಯಾವುದೇ ಶಾಲೆ ಶೂನ್ಯ ಫಲಿತಾಂಶ ದಾಖಲಿಸಿಲ್ಲ. ಇದೊಂದು ಹೆಮ್ಮೆಯ ಸಾಧನೆ. ಹೀಗಿದ್ದರೂ ದುಬಾರಿ ಶುಲ್ಕ ತೆತ್ತು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಅಗತ್ಯವಿದೆಯೇ ಎಂದು ಜಯಕುಮಾರ್ ಪೋಷಕರನ್ನು ಪ್ರಶ್ನಿಸಿದ್ದಾರೆ.

ಪೋಷಕರೂ ಭಾಗಿದಾರರು:

‘ನಮ್ಮಲ್ಲಿ (ಸರ್ಕಾರಿ ಶಾಲೆ) ಪೋಷಕರ ಮಾತಿಗೆ ಹೆಚ್ಚಿನ ಬೆಲೆ ಇದೆ. ನಿಮ್ಮನ್ನು ಹೆಚ್ಚು ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ. ಪೋಷಕರೇ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ, ಸದಸ್ಯರಾಗಿ ಶಾಲೆಯ ಅಭಿವೃದ್ಧಿಯಲ್ಲಿ ಕೈ ಜೋಡಿಸಬಹುದು. ನಿಮಗೆ ಕಾಲಾವಕಾಶ ಇದ್ದಾಗ ಶಾಲೆಗೆ ಹೋಗಿ ಮಗುವಿನ ಪ್ರಗತಿ ಬಗ್ಗೆ ವಿಚಾರಿಸಬಹುದು. ಜೊತೆಗೆ ಪ್ರತಿ ತಿಂಗಳು ಉಚಿತವಾಗಿ ಪ್ರಗತಿಪತ್ರ ಕಳುಹಿಸಿಕೊಡಲಾಗುವುದು’ ಎಂಬುದನ್ನು ಒತ್ತಿ ಹೇಳಿದ್ದಾರೆ.

ಡೊನೇಶನ್ ಹಾವಳಿ ಇಲ್ಲ:

‘ಶಾಲೆಗೆ ಸೇರಿಸಲು ಡೊನೇಶನ್ ಕೊಡುವ ಬದಲು ಅದೇ ಹಣದಿಂದ ಉತ್ತಮ ಪುಸ್ತಕಗಳನ್ನು ಕೊಂಡು ಮನೆಯಲ್ಲಿಯೇ ಪುಟ್ಟ ಗ್ರಂಥಾಲಯ ಸ್ಥಾಪಿಸಿ ನಿಮ್ಮ ಮುಂದಿನ ಪೀಳಿಗೆಗೂ ಜ್ಞಾನ ಹಂಚುವ ಕೈಂಕರ್ಯ ಮಾಡಿ. ಶಾಲೆಯಲ್ಲಿಯೇ ವಿಶೇಷ ತರಗತಿ ನಡೆಸುವುದರಿಂದ ದುಬಾರಿ ಹಣ ತೆತ್ತು ನಿಮ್ಮ ಮಗುವನ್ನು ಟ್ಯೂಶನ್‌ಗೆ (ಮನೆಪಾಠ) ಕಳಿಸುವ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ. 

ಅಮ್ಮಂದಿರಿಗೂ ಟಿಪ್ಸ್:

‘ಶಾಲೆಯಲ್ಲಿಯೇ ಬಿಸಿಯೂಟ ಕೊಡುವುದರಿಂದ ನಸುಕಿನಲ್ಲಿಯೇ ಎದ್ದು ಡಬ್ಬಿ ಸಿದ್ಧಪಡಿಸಲು ಅಮ್ಮಂದಿರು ಕಷ್ಟ ಪಡುವ ಅಗತ್ಯವಿಲ್ಲ. ನಿಮ್ಮ ಮಗು ಶಾಲೆಗೆ ಬರಲು ಉಚಿತ ಬಸ್‌ಪಾಸ್ ವ್ಯವಸ್ಥೆ ಮಾಡಲಾಗುತ್ತಿದೆ. ಮಕ್ಕಳನ್ನು ಶಾಲೆಗೆ ಸೇರಿಸಲು ಬೇರೆಡೆಯಂತೆ ಗಂಟೆಗಟ್ಟಲೇ ಕ್ಯೂ ನಿಲ್ಲುವ ಗೋಜು ಇಲ್ಲ. ಓದಿನ ಜೊತೆಗೆ ಕ್ರೀಡೆಗೂ ಹೆಚ್ಚಿನ ಆದ್ಯತೆ ಇರುವುದರಿಂದ ನಿಮ್ಮ ಮಕ್ಕಳನ್ನು ಸದೃಢವಾಗಿ ಬೆಳೆಸಲು ನಾವು ನೆರವಾಗಲಿದ್ದೇವೆ’ ಎಂಬ ಭರವಸೆಯನ್ನು ಅಮ್ಮಂದಿರಿಗೆ ಜಯಕುಮಾರ್ ಕೊಟ್ಟಿದ್ದಾರೆ.

ಮಕ್ಕಳಿಗೂ ಕಿವಿಮಾತು:

‘ಸ್ನೇಹಿತ ಯಾರೋ ಆ ಶಾಲೆಗೆ ಸೇರಿದ್ದಾನೆ. ನನಗೂ ಅಲ್ಲಿಗೆ ಸೇರಿಸಿ ಎಂದು ಪೋಷಕರಿಗೆ ಒತ್ತಾಯ ಮಾಡದಿರಿ. ಸರ್ಕಾರಿ ಶಾಲೆಗಳಲ್ಲಿ ನಿಮ್ಮ ತಂದೆ–ತಾಯಿಗೆ ಹೊರೆಯಾಗದಂತೆ ಖರ್ಚುಗಳೇ ಇಲ್ಲದೇ ಕಲಿತು ಉತ್ತಮ ದರ್ಜೆ ಗಳಿಸಿ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ’ ಎಂಬ ಕಿವಿಮಾತನ್ನು ಜಯಕುಮಾರ್ ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು