‘ಯುಕೆಸುದ್ದಿ ಡಾಟ್ ಇನ್’ ಜಾಲತಾಣದ ನಿರ್ವಾಹಕ ಸೇರಿ ಇಬ್ಬರ ಬಂಧನ

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ನಟಿ ರಾಧಿಕಾ ಅವರ ಫೋಟೊಗಳನ್ನು ಮಾರ್ಫಿಂಗ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಆರೋಪದಡಿ ‘ಯುಕೆಸುದ್ದಿ ಡಾಟ್ ಇನ್’ ಜಾಲತಾಣದ ನಿರ್ವಾಹಕ ಸೇರಿ ಇಬ್ಬರನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಗಂಗಾಧರ್ ಅಮ್ಮಲಜೇರಿ, ಅಜಿತ್ ಶೆಟ್ಟಿ ಹೆರಾಂಜೆ ಬಂಧಿತರು. ಮುಖ್ಯಮಂತ್ರಿಯ ಮಾಧ್ಯಮ ಕಾರ್ಯದರ್ಶಿ ಎಚ್.ಬಿ.ದಿನೇಶ್ ನೀಡಿದ್ದ ದೂರಿನಡಿ ಎಫ್ಐಆರ್ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಅಜಿತ್ ಶೆಟ್ಟಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇನ್ನೊಬ್ಬ ಆರೋಪಿ ಗಂಗಾಧರ್ ಅವರನ್ನು ಕಸ್ಟಡಿಗೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಸಾಫ್ಟ್ವೇರ್ ಎಂಜಿನಿಯರ್: ಬಾಗಲಕೋಟೆಯ ಗಂಗಾಧರ್, ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್. ‘ಯುಕೆಸುದ್ದಿ ಡಾಟ್ ಇನ್’ ಜಾಲತಾಣ ಹುಟ್ಟುಹಾಕಿ ನಿರ್ವಹಣೆ ಮಾಡುತ್ತಿದ್ದರು.
‘ಎಚ್.ಡಿ.ಕುಮಾರಸ್ವಾಮಿ ಪ್ರಕೃತಿ ಚಿಕಿತ್ಸೆ ಪಡೆಯಲು ಕಾಪುಗೆ ತೆರಳಿದ್ದಾರೆ. ಆದರೆ, ಅವರು ರಾಧಿಕಾ ಕುಮಾರಸ್ವಾಮಿ ಜೊತೆಯಲ್ಲಿ ರೆಸಾರ್ಟ್ಗೆ ಹೋಗಿದ್ದಾರೆಂದು ಹಳೇ ಫೋಟೊಗಳನ್ನು ಮಾರ್ಫೀಂಗ್ ಮಾಡಿ ಬಳಸಿಕೊಂಡು ಜಾಲತಾಣದಲ್ಲಿ ಸುಳ್ಳು ಸುದ್ದಿ ಪ್ರಕಟಿಸಲಾಗಿತ್ತು. ಆ ಮೂಲಕ ಮುಖ್ಯಮಂತ್ರಿ ತೇಜೋವಧೆ ಮಾಡಲಾಗಿತ್ತು. ಈ ಬಗ್ಗೆ ದಿನೇಶ್ ದೂರಿನಲ್ಲಿ ಆರೋಪಿಸಿದ್ದರು’ ಎಂದು ಪೊಲೀಸರು ವಿವರಿಸಿದರು.
‘ಚೌಕಿದಾರ್ ಅಜಿತ್ ಶೆಟ್ಟಿ ಹೆರಾಂಜೆ’: ಉಡುಪಿಯ ಅಜಿತ್, ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ‘ಚೌಕಿದಾರ್ ಅಜಿತ್ ಶೆಟ್ಟಿ ಹೆರಾಂಜೆ’ ಎಂದು ಫೇಸ್ಬುಕ್ ಹಾಗೂ ಟ್ವಿಟರ್ನಲ್ಲಿ ಖಾತೆ ತೆರೆದಿದ್ದಾರೆ. ‘ಯುಕೆಸುದ್ದಿ ಡಾಟ್ ಇನ್’ ಜಾಲತಾಣದಲ್ಲಿ ಪ್ರಕಟವಾಗಿದ್ದ ಸುದ್ದಿಯನ್ನು ಟ್ರೋಲ್ ಮಾಡಿದ್ದರು’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.