ಗುರುವಾರ , ಸೆಪ್ಟೆಂಬರ್ 23, 2021
24 °C

ನೋವಿದ್ದರೂ ವ್ಯಾಯಾಮ ಮಾಡಬೇಕೆ?

ಪೃಥ್ವಿರಾಜ್ Updated:

ಅಕ್ಷರ ಗಾತ್ರ : | |

Prajavani

ಸದಾ ಏನಾದರೊಂದು ಕೆಲಸದಲ್ಲಿ ತೊಡಗಿಸಿ ಕೊಳ್ಳುವವರಿಗೆ ಆಗೊಮ್ಮೆ, ಈಗೊಮ್ಮೆ ಸಣ್ಣ,ಪುಟ್ಟ ಪೆಟ್ಟು ಬೀಳುವುದು ಸಹಜ. ಕೈ–ಕಾಲುಗಳು ಬೆಣಕುವುದು, ಊತದಂತಹ ಸಮಸ್ಯೆಗಳು ಕಾಡುವುದು ಸಾಮಾನ್ಯ. ಇಂತಹ ಸಮಸ್ಯೆಗಳು ತಲೆದೋರಿದಾಗೆಲ್ಲಾ ತಕ್ಷಣ ಉಪಶಮನ ನೀಡುವಂತಹ ಔಷಧಿಗಳನ್ನು ಬಳಸಿಕೊಂಡು ಆ ಕ್ಷಣಕ್ಕೆ ನಿರಾಳರಾಗುತ್ತೇವೆ.

ಆದರೆ ಇಂತಹ ಸಮಸ್ಯೆಗಳು ಆ ಕ್ಷಣಕ್ಕೆ ಏನೂ ಸಮಸ್ಯೆ ತಂದೊಡ್ಡದಿದ್ದರೂ ವಯಸ್ಸಾದಂತೆಲ್ಲಾ ಕಾಡಲು ಆರಂಭಿಸುತ್ತವೆ. ಹೀಗಾಗಿ ನಮ್ಮ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳುವುದು ಅಗತ್ಯ.

ಪೆಟ್ಟು ಬಿದ್ದಾಗ ಆಗುವ ನೋವು 12 ವಾರಗಳವರೆಗೂ ಕಾಡುತ್ತಿದ್ದರೆ, ಅಂತಹ ನೋವನ್ನು ದೀರ್ಘಕಾಲದ ನೋವು ಎನ್ನುತ್ತಾರೆ. ಇದಕ್ಕೆ ನಿರ್ದಿಷ್ಟ ಕಾರಣ ಬೇಗ ತಿಳಿಯದೇ ಇರುವುದು ಮತ್ತೊಂದು ಸಮಸ್ಯೆ. ಹೀಗಾಗಿ ಇದಕ್ಕೆ ಸೂಕ್ತ ಚಿಕಿತ್ಸೆ ಸಿಗುವುದು ವಿಳಂಬವಾಗುತ್ತದೆ. ಇಂತಹ ಸಮಸ್ಯೆಗಳು ದೀರ್ಘಕಾಲದವರೆಗೆ ಕಾಡದೇ ಇರಬೇಕೆಂದರೆ ಫಿಟ್‌ನೆಸ್‌ ಮೇಲೆ ಕಣ್ಣು ಹಾಯಿಸಬೇಕು.

ವ್ಯಾಯಾಮ

ವಿವಿಧ ಬಗೆಯ ನೋವಿನಿಂದ ಬಳಲುತ್ತಿರುವವರು ವ್ಯಾಯಾಮ ಮಾಡುವುದು ಅಗತ್ಯವೆ ಎಂಬುದು ಹಲವರ ಪ್ರಶ್ನೆ. ನೋವಿದ್ದಾಗ ವಿಶ್ರಾಂತಿ ತೆಗೆದುಕೊಂಡರೆ ನೋವು ಬೇಗ ಕಡಿಮೆಯಾಗುತ್ತದೆ ಎಂದು ಹಲವರು ಸೂಚಿಸುತ್ತಾರೆ. ಇದು ನಿಜವೂ ಹೌದು. ಆದರೆ ಈ ನೋವು ದೀರ್ಘಕಾಲಿಕ ಸಮಸ್ಯೆಯಾಗಿ ಕಾಡದೇ ಇರಬೇಕೆಂದರೆ ನಿತ್ಯ ವ್ಯಾಯಾಮ ಮಾಡಿ ಮಾಂಸಖಂಡಗಳನ್ನು ದೃಢವಾಗಿ ಇಟ್ಟುಕೊಳ್ಳುವುದು ಅಗತ್ಯ. 

ವ್ಯಾಯಾಮ ಮಾಡಲೇಬೇಕು ಎಂದು, ಕಿಲೊಮೀಟರ್‌ಗಟ್ಟಲೇ ದೂರದವರೆಗೆ ಉಸಿರುಗಟ್ಟಿ ಓಡುವುದು, ಹೊರಲಾಗದಂತಹ ಭಾರವನ್ನು ಹೊರುವ ಅವಶ್ಯಕತೆ ಇಲ್ಲ. ಮನೆಯಲ್ಲಿ ಮಾಡಬಹುದಾದ ಸುಲಭ ವ್ಯಾಯಾಮಗಳನ್ನು ಮಾಡಿದರೆ ಸಾಕು.

ತೂಕ ಹೆಚ್ಚಾಗಬಾರದು

ದೇಹದ ತೂಕ ಹೆಚ್ಚಾದಂತೆಲ್ಲಾ ಶರೀರದ ಚಲನೆ ಕುಗ್ಗುತ್ತಾ ಹೋಗುತ್ತದೆ. ಆದ್ದರಿಂದ ದೇಹದ ತೂಕವನ್ನು ಸಮಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಸೂಕ್ತ. ಅಧಿಕ ತೂಕದಿಂದ ಕೀಲುಗಳು ಮತ್ತು ಮೂಳೆಗಳ ಮೇಲೆ ಒತ್ತಡ ಬೀಳುತ್ತದೆ. ದೇಹದಲ್ಲಿ ಬೊಜ್ಜು ಹೆಚ್ಚಾದಂತೆಲ್ಲಾ ವಾಯು ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಆರೋಗ್ಯಕರ ಆಹಾರ ಮತ್ತು ನಿತ್ಯ ವ್ಯಾಯಾಮ ಮಾಡುವುದರಿಂದ ತೂಕ ಹೆಚ್ಚಾಗದಂತೆ ನೋಡಿಕೊಳ್ಳಬಹುದು.

ತಾಜಾ ತರಕಾರಿ, ಸಿರಿಧಾನ್ಯಗಳು, ಕೆಲವು ಬಗೆಯ ಮೀನುಗಳು, ಆಲಿವ್ ಎಣ್ಣೆಯಂತಹ ಆಹಾರ ಪದಾರ್ಥಗಳು ವಾಯು ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಲು ನೆರವಾಗುತ್ತವೆ. ಕರಿದ ತಿಂಡಿ, ಕುರುಕಲು ತಿಂಡಿಗಳಿಂದ ದೂರವಿರುವುದು ಒಳ್ಳೆಯದು. 

40 ವರ್ಷ ಮೀರಿದರೆ ಕಷ್ಟ

40 ವರ್ಷ ಮೀರಿದ ಕೆಲವರು. ‘ಎಷ್ಟೇ ವ್ಯಾಯಾಮ ಮಾಡುತ್ತಿದ್ದರೂ ತೂಕ ಇಳಿಸಿಕೊಳ್ಳಲು ಆಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ. 30 ವರ್ಷ ದಾಟಿದ ನಂತರ, ಪ್ರತಿ 10 ವರ್ಷಕ್ಕೊಮ್ಮೆ ಮಾಂಸಖಂಡಗಳ ಕಾರ್ಯಕ್ಷಮತೆ ಶೇ 3ರಿಂದ 5ರಷ್ಟು ಕುಗ್ಗುತ್ತದೆ. ಮಾಂಸಂಖಂಡಗಳು ದೃಢವಾಗಿದ್ದರಷ್ಟೇ ಜೀವನ ನಿರ್ವಹಣೆ ಸುಲಭವಾಗಿರುತ್ತದೆ. ಹೀಗಾಗಿ ನಿತ್ಯ ವ್ಯಾಯಾಮ ಮಾಡಿ ಮಾಂಸಖಂಡಗಳನ್ನು ದೃಢವಾಗಿ ಇಟ್ಟುಕೊಳ್ಳಲು ಪ್ರಯತ್ನಿಸಬೇಕು.

ವ್ಯಾಯಾಮ ಮಾತ್ರ ಸಾಲದು

ಆರೋಗ್ಯವಾಗಿರಬೇಕೆಂದರೆ ನಿತ್ಯ ವ್ಯಾಯಾಮ ಮಾಡುವುದಷ್ಟೇ ಅಲ್ಲ, ಕುಳಿತುಕೊಳ್ಳುವುದನ್ನೂ ಕಡಿಮೆ ಮಾಡಬೇಕು. ಈಚೆಗಿನ ಅಧ್ಯಯನಗಳ ಪ್ರಕಾರ ನಗರ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಹಲವರು ನಿತ್ಯ 10 ಗಂಟೆ ಕುಳಿತುಕೊಂಡೆ ಕೆಲಸ ಮಾಡುತ್ತಿದ್ದಾರೆ. ಹೀಗೆ ಹೆಚ್ಚು ಹೊತ್ತು ಕೂರುವುದರಿಂದ, ಮಧುಮೇಹ, ಸ್ಥೂಲಕಾಯದಂತ ಸಮಸ್ಯೆಗಳು ಕಾಡುತ್ತವೆ. ಹೀಗಾಗಿ ದಿನದಲ್ಲಿ ಕನಿಷ್ಠ 5 ಗಂಟೆ ನಿಂತುಕೊಂಡಿರುವುದರ ಜತೆಗೆ ಓಡಾಡುತ್ತಿರಬೇಕು ಎಂದು ನೆದರ್ಲೆಂಡ್ಸ್‌ನ ಸಂಶೋಧಕರ ತಂಡವೊಂದು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು