ಶುಕ್ರವಾರ, ಜನವರಿ 27, 2023
18 °C
ಬಸವೇಶ್ವರ ಜಯಂತಿ ಕಾರ್ಯಕ್ರಮ

ಧಾರ್ಮಿಕ ಪ್ರಜ್ಞೆ ಅಧಃಪತನ ಆತಂಕಕಾರಿ: ಶಿವಜ್ಯೋತಿ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಇತ್ತೀಚಿನ ದಿನಗಳಲ್ಲಿ ಮೊಬೈಲ್, ಟಿವಿ, ಸಿನಿಮಾ, ಸಾಮಾಜಿಕ ಜಾಲತಾಣಗಳಿಂದಾಗಿ ಜನರಲ್ಲಿ ಧಾರ್ಮಿಕ ಪ್ರಜ್ಞೆ ಕಡಿಮೆಯಾಗುತ್ತಿದೆ. ಜನರು ಸಮಾಜ ಸುಧಾಕರ ಕೊಡುಗೆಗಳನ್ನು ಮರೆಯುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಪ್ರತಿಯೊಬ್ಬರು ವಚನ ಸಾಹಿತ್ಯವನ್ನು ಅರ್ಥಮಾಡಿಕೊಳ್ಳುವ ಮೂಲಕ ಸಮಾಜದ ಉನ್ನತಿಗೆ ಶ್ರಮಿಸಬೇಕಿದೆ’ ಎಂದು ಜಚನಿ ಕಾಲೇಜಿನ ಆಡಳಿತಾಧಿಕಾರಿ ಶಿವಜ್ಯೋತಿ ಅಭಿಪ್ರಾಯಪಟ್ಟರು.

ವೀರಶೈವ ಸೇವಾ ಸಮಾಜ ಮತ್ತು ಮಹಿಳಾ ಸಮಾಜದ ವತಿಯಿಂದ ನಗರದ ಬಸವನಗುಡಿ ರಸ್ತೆಯಲ್ಲಿರುವ ದೇವಸ್ಥಾನದಲ್ಲಿ ಮಂಗಳವಾರ ಆಯೋಜಿಸಿದ್ದ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇವತ್ತು ಹೆಣ್ಣು ಮಕ್ಕಳು ಸಮಾಜದಲ್ಲಿ ಬೇರೂರಿರುವ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಬೇಕು. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಶೋಷಿತ ಸಮಾಜಗಳು ಏಳಿಗೆಗಾಗಿ ಸಂಘಟಿತರಾಗಬೇಕು. ಸರ್ವಕಾಲಿಕವಾದ ಸಮಾಜ ಸುಧಾರಕ ಅಣ್ಣ ಬಸವಣ್ಣನವರ ವಚನ ಸಾಹಿತ್ಯದಲ್ಲಿರುವ ತತ್ವ, ಆದರ್ಶಗಳನ್ನು ಇಂದಿನ ಯುವಪೀಳಿಗೆ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

‘12 ನೇ ಶತಮಾನದಲ್ಲಿದ್ದ ಲಿಂಗ ತಾರತಮ್ಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಸಮಾನತೆ ಹೋಗಲಾಡಿಸಲು ಬಸವಾದಿ ಶರಣರು ಅಪಾರವಾಗಿ ಶರಮಿಸಿದರು. ಅಂದಿನ ಅನುಭವ ಮಂಟಪದಲ್ಲಿ ಪ್ರಸ್ತುತ ಪಡಿಸುತ್ತಿದ್ದ ಚಿಂತನೆಗಳು ಅಂದಿನ ಸಮಾಜದಲ್ಲಿನ ಬದಲಾವಣೆಗೆ ಕಾರಣವಾದವು. ಅವು ಮನುಕುಲ ಜೀವಿತದ ವರೆಗೆ ಪ್ರಸ್ತುತವಾಗಬೇಕು’ ಎಂದು ತಿಳಿಸಿದರು.

‘ಶರಣರು ತಮ್ಮ ವಚನ ಸಾಹಿತ್ಯದ ಮೂಲಕ ಶೋಷಿತ ಸಮಾಜದ ಏಳಿಗೆಗೆ ದುಡಿದರು. ಸಮಾಜದಲ್ಲಿ ಅತಿಯಾಗಿ ಬೇರೂರಿದ್ದ ಅಂಕು ಡೊಂಕುಗಳನ್ನು ತಿದ್ದಲು ಮುಂದಾದರು. ಬಸವಣ್ಣನವರು ವಚನ ಸಾಹಿತ್ಯದಲ್ಲಿ ಕುರುಡು ಆಚರಣೆಗಳಿಗೆ ಅವಕಾಶ ನೀಡಲಿಲ್ಲ. ಕಾಯಕ ತತ್ವ ಮತ್ತು ದಾಸೋಹದ ಮೂಲಕ ಸಮಾಜದ ಬೆಳವಣಿಗೆಗೆ ಶ್ರಮಿಸಿದರು. ಅವರ ದಾರಿಯಲ್ಲಿ ಪ್ರತಿಯೊಬ್ಬರು ಸಾಗಬೇಕು’ ಎಂದರು.

ತಹಶೀಲ್ದಾರ್ ಕೆ.ನರಸಿಂಹಮೂರ್ತಿ ಮಾತನಾಡಿ, ‘ವಚನಗಳು ಕಲ್ಪನೆಯಿಂದ ಮೂಡಿಬರಲಿಲ್ಲ. ಬದಲು ನುಡಿದಂತೆ ನಡೆದ 12 ನೇ ಶತಮಾನದ ಶರಣರು ತಮ್ಮ ಅನುಭಾವದಿಂದ ವಚನಗಳನ್ನು ರಚಿಸಿದ್ದಾರೆ. ಸಮಾಜದಲ್ಲಿ ಸಮಾನತೆ ಸಾಧಿಸಲು ಬಸವಣ್ಣನವರ ತತ್ವವನ್ನು ಅಳವಡಿಸಿಕೊಳ್ಳಬೇಕು. ಸಮಾಜದ ಎಲ್ಲ ಜನಾಂಗದವರಿಗೆ ಸಮಾನ ಅವಕಾಶಗಳು ದೊರೆತು ಸಮಾನತೆ ಸಾಧಿಸಿದಾಗ ಸಮಾಜ ಅಭಿವೃದ್ಧಿಯಾಗಲಿದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವೀರಶೈವ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಪತ್ರಕರ್ತ ಪುಟ್ಟರಾಜು ಅವರನ್ನು ಸನ್ಮಾನಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೆಂಕಟಾಚಲಪತಿ, ವೀರಶೈವ ಸಮಾಜದ ಅಧ್ಯಕ್ಷ ಬಿ.ಗೀರಿಶ್, ಕಾರ್ಯದರ್ಶಿ ಪರಶಿವಮೂರ್ತಿ, ಸಮುದಾಯದ ಮುಖಂಡರಾದ ಡಿ.ಎಂ.ಶ್ರೀನಿವಾಸ್ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು