ನಾಯಕರ ಕಚ್ಚಾಟದಿಂದಾಗಿಯೇ ಸರ್ಕಾರ ಬೀಳಲಿದೆ

ಭಾನುವಾರ, ಮೇ 26, 2019
26 °C
ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಹೇಳಿಕೆ

ನಾಯಕರ ಕಚ್ಚಾಟದಿಂದಾಗಿಯೇ ಸರ್ಕಾರ ಬೀಳಲಿದೆ

Published:
Updated:
Prajavani

ಬೀದರ್: ‘ಸಮ್ಮಿಶ್ರ ಸರ್ಕಾರ ಬೀಳಿಸುವಂತೆ ನಾವು ಎಲ್ಲೂ ಹೇಳಿಲ್ಲ. ಹೇಳುವುದೂ ಇಲ್ಲ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರ ಕಚ್ಚಾಟದಿಂದಾಗಿಯೇ ಸರ್ಕಾರ ಬೀಳಲಿದೆ’ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಹೇಳಿದರು.

ನಗರದ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಗುರುವಾರ ನಡೆದ ಲೋಕಸಭೆ ಚುನಾವಣೆ ಅವಲೋಕನ ಸಭೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ರಾಜ್ಯದ ಜನತೆ ಭೀಕರ ಬರ ಎದುರಿಸುತ್ತಿದ್ದಾರೆ. ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಆರೋಗ್ಯ ಮಾತ್ರ ನೋಡಿಕೊಳ್ಳುತ್ತಿದ್ದಾರೆ. ಜನರು ಪರಿವು ಅವರಿಗೆ ಇಲ್ಲ. ಹೀಗಾಗಿ ಜನರಿಗೆ ಸರ್ಕಾರದ ಮೇಲಿನ ನಂಬಿಕೆ ಹೊರಟು ಹೋಗಿದೆ’ ಎಂದು ಹೇಳಿದರು.

‘ಹಾವಿನ ದ್ವೇಷ ಹನ್ನೆರಡು ವರ್ಷ. ಅಂದರಂತೆ ಸಿದ್ದರಾಮಯ್ಯ ಹಾಗೂ ದೇವೇಗೌಡರ ಕುಟುಂಬದ ಮಧ್ಯೆ ದ್ವೇಷ ಇದೆ.
ಸಿದ್ದರಾಮಯ್ಯ ಅವರನ್ನು ಕೇಳದೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಲೋಕಸಭಾ ಚುನಾವಣೆ ಮುಗಿದ ನಂತರ ನಿಮ್ಮ ಇಷ್ಟದಂತೆ ಮಾಡಿಕೊಳ್ಳಿ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಈಗ ಅದೇ ನಡೆಯುತ್ತಿದೆ’ ಎಂದು ಹೇಳಿದರು.

‘ಸಮ್ಮಿಶ್ರ ಸರ್ಕಾರದಲ್ಲಿನ ಗೊಂದಲಕ್ಕೆ ಸಿದ್ದರಾಮಯ್ಯ ಅವರೇ ಸೂತ್ರದಾರ. ಈಗ ಮಾತನಾಡುತ್ತಿರುವರೆಲ್ಲರೂ ಸಿದ್ದರಾಮಯ್ಯ ಅವರ ಚೇಲಾಗಳು’ ಎಂದು ಟೀಕಿಸಿದರು.

ಬಿಜೆಪಿ ಅವಲೋಕನ: ಇಲ್ಲಿಯ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಗುರುವಾರ ಲೋಕಸಭೆ ಚುನಾವಣೆಯ ಅವಲೋಕನ ಸಭೆ ನಡೆಯಿತು.

ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಅವರು ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ಸುಮಾರು ಮೂರು ತಾಸು ಲೋಕಸಭೆ ಚುನಾವಣೆ ಕುರಿತ ಸುದೀರ್ಘ ಚರ್ಚೆ ನಡೆಸಿದರು.

ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಪಕ್ಷಕ್ಕೆ ಎಲ್ಲೆಲ್ಲಿ, ಎಷ್ಟು ಲೀಡ್ ಬರಲಿದೆ, ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಹಾಗೂ ಈಗಿನ ಚುನಾವಣೆಯಲ್ಲಿನ ಮತದಾರರ ಸಂಖ್ಯೆ, ಹೊಸದಾಗಿ ಸೇರ್ಪಡೆಯಾದ ಮತದಾರರ ಸಂಖ್ಯೆ, ಚುನಾವಣೆಯಲ್ಲಿನ ಪ್ಲಸ್ ಪಾಯಿಂಟ್‌ಗಳು, ಅನಾಕೂಲ ಮತ್ತಿತರ ವಿಷಯಗಳ ಕುರಿತು ಮಾಹಿತಿ ಪಡೆದರು.

ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಆಳಂದದಲ್ಲಿ ಸಮಬಲ ಇದೆ. ಉಳಿದ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಲೀಡ್ ಬರಲಿದೆ ಎಂದು ಆಯಾ ಕ್ಷೇತ್ರಗಳ ಕಾರ್ಯಕರ್ತರು ಮಾಹಿತಿ ನೀಡಿದರು ಎಂದು ಸಭೆಯಲ್ಲಿದ್ದ ಮುಖಂಡರು ತಿಳಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ, ಶಾಸಕ ಸುಭಾಷ ಗುತ್ತೆದಾರ, ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ, ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ, ಮುಖಂಡ ಡಿ.ಕೆ. ಸಿದ್ರಾಮ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !