ಶನಿವಾರ, ಸೆಪ್ಟೆಂಬರ್ 25, 2021
24 °C

ನಿಖಿಲ್ ಸೋಲಿಸಲು, ಸಮ್ಮಿಶ್ರ ಸರ್ಕಾರ ಉರುಳಿಸಲು ಶ್ರೀಲಂಕಾದಲ್ಲಿ ಸಭೆ: ಸುರೇಶ್‌ಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಸಮ್ಮಿಶ್ರ ಸರ್ಕಾರ ಉರುಳಿಸಲು, ಮೈತ್ರಿ ಅಭ್ಯರ್ಥಿ ಕೆ.ನಿಖಿಲ್‌ ಅವರನ್ನು ಸೋಲಿಸಲು ಚಲುವರಾಯಸ್ವಾಮಿ ಹಾಗೂ ಬಿಜೆಪಿ ಮುಖಂಡರು ಶ್ರೀಲಂಕಾದಲ್ಲಿ ಸಭೆ ನಡೆಸುತ್ತಿದ್ದರು. ಬಾಂಬ್‌ ಸ್ಫೋಟದ ನಂತರ ಅಲ್ಲಿ ಸಭೆ ನಡೆಸುವುದನ್ನು ನಿಲ್ಲಿಸಿದರು’ ಎಂದು ನಾಗಮಂಗಲ ಶಾಸಕ ಸುರೇಶ್‌ಗೌಡ ಶುಕ್ರವಾರ ವಾಗ್ದಾಳಿ ನಡೆಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಮೈತ್ರಿ ಅಭ್ಯರ್ಥಿ ಗೆದ್ದರೆ ರಾಹುಲ್‌ ಗಾಂಧಿ ಅವರನ್ನು ಪ್ರಧಾನಮಂತ್ರಿ ಮಾಡುತ್ತಿದ್ದೆವು. ಆದರೆ ಇವರು ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ಸುಮಲತಾ ಅವರಿಗೆ ಬಂಬಲ ನೀಡಿದ್ದಾರೆ. ಕಾಂಗ್ರೆಸ್‌ ಮುಖಂಡ ಎಂದು ಹೇಳಿಕೊಳ್ಳಲು ಇವರಿಗೆ ಯಾವ ನೈತಿಕತೆ ಇದೆ. ಸುಮಲತಾರನ್ನು ಬಿ.ಎಸ್‌.ಯಡಿಯೂರಪ್ಪ ಮನೆಗೆ ಕಳುಹಿಸಿದವರು ಯಾರು, ಶ್ರೀಲಂಕಾದಲ್ಲಿ ಸಭೆ ನಡೆಸಿದ್ದು, ನಂತರ ಮೈಸೂರಿನ ಸಂದೇಶ್‌ ದಿ ಪ್ರಿನ್ಸ್‌ ಹೋಟೆಲ್‌ಗೆ ಸ್ಥಳಾಂತರ ಮಾಡಿದ್ದು ಯಾರು, ಹಳ್ಳಿಗಳಲ್ಲಿ ಜನರಿಗೆ ಹಣ ಹಂಚಿದ್ದು ಯಾರು’ ಎಂದು ಪ್ರಶ್ನಿಸಿದರು.

‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಇವರಿಂದ ಪಾಠ ಕಲಿಯುವ ಅಗತ್ಯ ಇಲ್ಲ. ಐದು ವರ್ಷ ವಿಶ್ರಾಂತಿ ಪಡೆಯಲಿ ಎಂದು ಜನರು ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿದ್ದಾರೆ. ಅದನ್ನು ಅರಿತು ಚೇಷ್ಠೆ ಮಾಡುವುದನ್ನು ನಿಲ್ಲಿಸಬೇಕು. ಈ ಹಿಂದೆ ಜೆಡಿಎಸ್‌ನಲ್ಲಿ ಇದ್ದುಕೊಂಡು ರಮ್ಯಾಗೆ ಬೆಂಬಲ ನೀಡಿ ಪುಟ್ಟರಾಜು ಅವರನ್ನು ಸೋಲಿಸಿದ್ದರು. ಇವರ ರಾಜಕೀಯ ವ್ಯಭಿಚಾರ ಎಲ್ಲರಿಗೂ ಗೊತ್ತಿದೆ’ ಎಂದು ಆರೋಪಿಸಿದರು.

ಗಂಡಸ್ಥನ ಅಲ್ಲ

‘ಸುಮಲತಾ ಅವರಿಗೆ ಬೆಂಬಲ ನೀಡುತ್ತೇನೆ ಎಂದು ನೇರವಾಗಿ ಹೇಳಿದ್ದರೆ ಅದನ್ನು ಗಂಡಸ್ಥನ ಎನ್ನಬಹುದಾಗಿತ್ತು, ಆದರೆ ಹೆಂಗಸನ್ನು ಮುಂದಿಟ್ಟುಕೊಂಡು ಕಳ್ಳತನದಿಂದ ಬೆಂಬಲ ನೀಡುವುದು ಗಂಡಸ್ಥನ ಅಲ್ಲ. ತಾನು ಸುಮಲತಾ ಅವರಿಗೆ ಬೆಂಬಲ ನೀಡಿಲ್ಲ ಎಂದು ಮಂಜುನಾಥಸ್ವಾಮಿ ಅಥವಾ ಕಾಲಭೈರವೇಶ್ವರ ಸ್ವಾಮಿ ಮುಂದೆ ಪ್ರಮಾಣ ಮಾಡಲಿ’ ಎಂದು ಸವಾಲು ಹಾಕಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂದು ನಾನು ಕೂಡ ಹೋರಾಟ ಮಾಡಿದ್ದೆ. ಆದರೆ ಸದ್ಯ ಐದು ವರ್ಷ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಐದು ವರ್ಷದ ನಂತರ ಅವರು ಮುಖ್ಯಮಂತ್ರಿ ಆಗಬಹುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು