ಶುಕ್ರವಾರ, ಸೆಪ್ಟೆಂಬರ್ 24, 2021
24 °C

‘ಮಗು ಸತ್ತಿದೆ’ ಎಂದು ಸುಳ್ಳು ಹೇಳಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗೊರಗುಂಟೆಪಾಳ್ಯ ಮೇಲ್ಸೇತುವೆಯಿಂದ ಹಾರಿ ನರಸಿಂಹಮೂರ್ತಿ (28) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅನಂತಪುರ ಜಿಲ್ಲೆಯವರಾದ ಅವರು, ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಿಕೊಂಡು ಕುಟುಂಬ ಸದಸ್ಯರ ಜತೆ ಕಾಮಾಕ್ಷಿಪಾಳ್ಯದಲ್ಲಿ ನೆಲೆಸಿದ್ದರು. ಶುಕ್ರವಾರ ಬೆಳಿಗ್ಗೆ 11.30ರ ಸುಮಾರಿಗೆ ಗೊರಗುಂಟೆಪಾಳ್ಯಕ್ಕೆ ಬಂದು ಮೇಲ್ಸೇತುವೆಯಿಂದ ಹಾರಿದ್ದಾರೆ. ವಾಹನ ಸವಾರರು ತಕ್ಷಣ ಆಸ್ಪತ್ರೆಗೆ ಕರೆದೊಯ್ದರಾದರೂ, ಮಾರ್ಗಮಧ್ಯೆಯೇ ಕೊನೆಯುಸಿರೆಳೆದರು ಎಂದು ಪೊಲೀಸರು ಹೇಳಿದ್ದಾರೆ.

15 ದಿನಗಳ ಹಿಂದಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದ ನರಸಿಂಹಮೂರ್ತಿ ಅವರ ಪತ್ನಿ, ಆಂಧ್ರಪ್ರದೇಶದ ತವರು ಮನೆಯಲ್ಲಿದ್ದರು. ಮೇ 6ರ ಮಧ್ಯಾಹ್ನ ಕಾರ್ಖಾನೆಯಲ್ಲಿ ದುಃಖತಪ್ತರಾಗಿ ಕುಳಿತಿದ್ದ ನರಸಿಂಹಮೂರ್ತಿ ಅವರನ್ನು ಸಹ ಕಾರ್ಮಿಕರು ವಿಚಾರಿಸಿದ್ದರು. ಆಗ, ‘ನನ್ನ ಮಗು ಸತ್ತು ಹೋಯಿತು’ ಎಂದು ಸುಳ್ಳು ಹೇಳಿ ಬಿಕ್ಕಿ ಬಿಕ್ಕಿ ಅತ್ತಿದ್ದರು. ಆನಂತರ ಊರಿಗೆ ಹೋಗಬೇಕೆಂದು ಮೂರು ದಿನ ರಜೆ ಪಡೆದಿದ್ದರು.

ಅವರು ಮೇಲ್ಸೇತುವೆಯಿಂದ ಹಾರಿದ ವಿಚಾರ ತಿಳಿದು ಕಾರ್ಖಾನೆ ನೌಕರರು ಶುಕ್ರವಾರ ಮಧ್ಯಾಹ್ನ ಆಸ್ಪತ್ರೆ ಬಳಿ ಜಮಾಯಿಸಿದ್ದರು. ಪೊಲೀಸರು ವಿಚಾರಿಸಿದಾಗ, ‘ಮಗು ಸತ್ತಿದ್ದಕ್ಕೆ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು’ ಎಂದು ಅವರೂ ಹೇಳಿಕೆ ಕೊಟ್ಟಿದ್ದರು.

ಆದರೆ, ಮಧ್ಯಾಹ್ನ ಪೊಲೀಸರ ಸಂಪರ್ಕಕ್ಕೆ ಸಿಕ್ಕ ನರಸಿಂಹಮೂರ್ತಿ ಅಕ್ಕ ರತ್ನಮ್ಮ, ‘ಮಗು ಆರೋಗ್ಯವಾಗಿಯೇ ಇದೆ. ಯಾಕೆ ಈ ರೀತಿ ಸುಳ್ಳು ಸುದ್ದಿ ಹಬ್ಬಿದೆ ಎಂಬುದು ತಿಳಿಯುತ್ತಿಲ್ಲ’ ಎಂದು ಹೇಳಿದ್ದರು. ಅಲ್ಲದೇ, ತಾಯಿ–ಮಗುವಿನ ಫೋಟೊವನ್ನೂ ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ್ದರು.

‘ನರಸಿಂಹಮೂರ್ತಿ ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ಕುಟುಂಬ ಸದಸ್ಯರೂ ಆಘಾತಕ್ಕೆ ಒಳಗಾಗಿದ್ದಾರೆ. ಅಂತ್ಯಕ್ರಿಯೆ ಮುಗಿದ ಬಳಿಕ ವಿಚಾರಣೆ ನಡೆಸಲಾಗುವುದು. ರಜೆ ಬೇಕೆಂಬ ಕಾರಣಕ್ಕೆ ‘ಮಗು ಸತ್ತಿದೆ’ ಎಂದು ಸುಳ್ಳು ಹೇಳಿರಬಹುದು. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು’ ಎಂದು ಪೀಣ್ಯ ಪೊಲೀಸರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು