ಸೋಮವಾರ, ಮಾರ್ಚ್ 8, 2021
20 °C
ಕೇಂದ್ರ– ರಾಜ್ಯ ಸರ್ಕಾರಗಳ ಹಗ್ಗ ಜಗ್ಗಾಟದಲ್ಲಿ ನಡೆಯದ ಶಾಶ್ವತ ಕಾಮಗಾರಿ

ಭೂಕುಸಿತದ ಭೀತಿಯಲ್ಲೇ ಇದೆ ಸಂಪಾಜೆ ಘಾಟಿ

ವಿ.ಎಸ್‌.ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕಳೆದ ಮಳೆಗಾಲದಲ್ಲಿ ಭೂಕುಸಿತದಿಂದ ಬಹುಭಾಗ ನಾಮಾವಶೇಷವಾಗಿದ್ದ ರಾಷ್ಟ್ರೀಯ ಹೆದ್ದಾರಿ 275ರ ಸಂಪಾಜೆ ಘಾಟಿಯಲ್ಲಿ ಈ ಬಾರಿ ಮಳೆಗಾಲ ಆರಂಭಕ್ಕೂ ಮುನ್ನವೇ ಭೂಕುಸಿತದ ಭೀತಿ ಆವರಿಸಿಕೊಂಡಿದೆ. ಕಳೆದ ಮಳೆಗಾಲದಲ್ಲಿ ಕುಸಿದು ಕುಳಿತಿರುವ ಬೃಹದಾಕಾರದ ಮಣ್ಣಿನ ಗುಡ್ಡಗಳು ಹೆದ್ದಾರಿಯ ಮೇಲೆ ಉರುಳಿ ಬೀಳಲು ಕ್ಷಣಗಣನೆಯಲ್ಲಿ ಇರುವಂತೆ ಗೋಚರಿಸುತ್ತಿದೆ ಅಲ್ಲಿನ ಸದ್ಯದ ಚಿತ್ರಣ.

ಕರಾವಳಿಯನ್ನು ಕೊಡಗು, ಮೈಸೂರು, ಬೆಂಗಳೂರು ನಗರ ಸೇರಿದಂತೆ ಘಟ್ಟ ಪ್ರದೇಶಗಳ ಜೊತೆ ಬೆಸೆಯುವ ಪ್ರಮುಖ ಮಾರ್ಗ ರಾಷ್ಟ್ರೀಯ ಹೆದ್ದಾರಿ 275. ಈ ಹೆದ್ದಾರಿಯಲ್ಲಿರುವ 14 ಕಿಲೋ ಮೀಟರ್‌ ಉದ್ದದ ಸಂಪಾಜೆ ಘಾಟಿಯಲ್ಲಿ 2018ರ ಜುಲೈನಿಂದ ಆಗಸ್ಟ್‌ ತಿಂಗಳ ಅಂತ್ಯದವರೆಗಿನ ಅವಧಿಯಲ್ಲಿ 14 ಸ್ಥಳಗಳಲ್ಲಿ ಭೀಕರ ಭೂಕುಸಿತ ಸಂಭವಿಸಿತ್ತು. ಇದರಿಂದ ರಾಷ್ಟ್ರೀಯ ಹೆದ್ದಾರಿಯ ಕುರುಹೇ ನಾಪತ್ತೆ ಆದಂತಾಗಿತ್ತು.

ಮೂರು ತಿಂಗಳ ಕಾಲ ಈ ಮಾರ್ಗದಲ್ಲಿ ವಾಹನ ಸಂಚಾರವನ್ನೇ ಬಂದ್‌ ಮಾಡಲಾಗಿತ್ತು. ₹10 ಕೋಟಿ ವೆಚ್ಚದಲ್ಲಿ ತಾತ್ಕಾಲಿಕ ದುರಸ್ತಿ ಕಾಮಗಾರಿ ಕೈಗೊಂಡಿದ್ದ ರಾಜ್ಯದ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗ, ನವೆಂಬರ್‌ ಮೂರನೇ ವಾರದಿಂದ ಬಸ್‌ ಘನ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿತ್ತು.

ಜೋಡುಪಾಲದಿಂದ ಭಾಗಮಂಡಲ ರಾಜ್ಯ ಹೆದ್ದಾರಿಯ ತಿರುವಿನವರೆಗೆ ಹಲವು ಸ್ಥಳಗಳಲ್ಲಿ ಮಳೆಗಾಲದಲ್ಲಿ ಕುಸಿದಿರುವ ಮಣ್ಣಿನ ಬೃಹದಾಕಾರದ ರಾಶಿಗಳು ಈಗಲೋ, ಆಗಲೋ ಕೆಳಕ್ಕೆ ಉರುಳುತ್ತವೆ ಎಂದೆನಿಸುತ್ತಿದೆ.

ಮೊಣ್ಣಂಗೇರಿ, ಎರಡನೇ ಮೊಣ್ಣಂಗೇರಿ, ಮದೆ, ಮದೆನಾಡು, ಕಾಟಿಕೇರಿ ಹೀಗೆ ಸಂಪಾಜೆ ಘಾಟಿಯುದ್ದಕ್ಕೂ ಸಿಗುವ ಹಳ್ಳಿಗಳ ನಡುವೆಯೇ ಭಾರಿ ಭೂಕುಸಿತ ಸಂಭವಿಸಿತ್ತು. ಬಹುತೇಕ ಆ ಎಲ್ಲ ಪ್ರದೇಶಗಳಲ್ಲೂ ಈ ಬಾರಿಯೂ ಮಳೆ ಸುರಿಯಲಾರಂಭಿಸುತ್ತಿದ್ದಂತೆಯೇ ಮಣ್ಣಿನ ಗುಡ್ಡಗಳು ಕುಸಿದು ಹೆದ್ದಾರಿ ಬಂದ್‌ ಆಗುವ ಭೀತಿ ಸ್ಥಳೀಯರನ್ನು ಆವರಿಸಿದೆ.

ಒಡೆಯುತ್ತಿವೆ ಮರಳಿನ ಚೀಲ: ಭೂಕುಸಿತ ಸಂಭವಿಸಿರುವ ಬಹುತೇಕ ಸ್ಥಳಗಳಲ್ಲಿ ಕಡಿದಾದ ಕಣಿವೆಗಳು ನಿರ್ಮಾಣವಾಗಿದ್ದವು. ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗ ಸಹಸ್ರಾರು ಸಂಖ್ಯೆಯಲ್ಲಿ ಮರಳು ಮತ್ತು ಎಂ– ಸ್ಯಾಂಡ್‌ ಚೀಲಗಳನ್ನು ಜೋಡಿಸಿ ಭೂಕುಸಿತ ತಡೆಗೆ ತಾತ್ಕಾಲಿಕ ಕ್ರಮ ಕೈಗೊಂಡಿತ್ತು. ಅದರ ಬದಿಯಲ್ಲೇ ತಾತ್ಕಾಲಿಕ ರಸ್ತೆಯೂ ನಿರ್ಮಾಣವಾಗಿತ್ತು.

ಕೆಲವು ಕಡೆಗಳಲ್ಲಿ ಹತ್ತರಿಂದ ಐವತ್ತು ಅಡಿಗಳಷ್ಟು ಎತ್ತರಕ್ಕೆ ಮರಳು ಮತ್ತು ಎಂ– ಸ್ಯಾಂಡ್‌ ಚೀಲಗಳನ್ನು ಜೋಡಿಸಲಾಗಿದೆ. ಬಿಸಿಲಿನ ಹೊಡೆತಕ್ಕೆ ಸುಟ್ಟು ಹೋಗಿರುವ ಪ್ಲಾಸ್ಟಿಕ್‌ ಚೀಲಗಳು ಮೊದಲ ಮಳೆ ಸುರಿಯುತ್ತಿದ್ದಂತೆಯೇ ಒಡೆಯಲಾರಂಭಿಸಿವೆ. ಮುಂಗಾರು ಮಳೆಯ ಅಬ್ಬರಕ್ಕೆ ಮರಳಿನ ಚೀಲಗಳ ರಾಶಿ ಕೊಚ್ಚಿಕೊಂಡು ಹೋಗಿ ಮತ್ತೆ ಹೆದ್ದಾರಿಯೇ ಕುಸಿದುಹೋಗುವ ಅಪಾಯದ ಸ್ಥಿತಿ ಇದೆ.

ಸಣ್ಣ ಮಳೆಗೆ ಕುಸಿತ: 2018ರ ಜುಲೈ ತಿಂಗಳಲ್ಲಿ ಮದೆನಾಡು ಬಳಿ ಸಂಪಾಜೆ ಘಾಟಿ ಮಾರ್ಗದಲ್ಲಿನ ಮೊದಲ ಭೂಕುಸಿತ ಸಂಭವಿಸಿತ್ತು. ನಂತರ ನಡೆದ ಸರಣಿ ಭೂಕುಸಿತದಿಂದ ಸುಮಾರು ಅರ್ಧ ಕಿ.ಮೀ.ಗೂ ಹೆಚ್ಚು ಉದ್ದಕ್ಕೆ 100ರಿಂದ 150 ಅಡಿ ಎತ್ತರದಿಂದ ಗುಡ್ಡ ಕುಸಿದು ಹೆದ್ದಾರಿಯ ಮೇಲೆ ಉರುಳಿ ಬಿದ್ದಿತ್ತು. ಬಳಿಕ ಪಯಸ್ವಿನಿ ನದಿಯ ಹರಿವನ್ನೂ ಮುಚ್ಚಿ ಹಾಕಿತ್ತು.

ಇದೇ ಪ್ರದೇಶದಲ್ಲಿ ಇತ್ತೀಚೆಗೆ ಸುರಿದ ಮೊದಲ ಮಳೆಗೆ ಸಣ್ಣ ಪ್ರಮಾಣದಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. ರಸ್ತೆಯ ಕೆಳಭಾಗದಿಂದ ಪಯಸ್ವಿನಿ ನದಿಯವರೆಗಿನ ಭಾಗದಲ್ಲಿ ಮಣ್ಣು ಕುಸಿದಿದೆ. ಇದರಿಂದ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ನಾಲ್ಕು ದಿನಗಳಿಂದ ತುರ್ತು ಕಾಮಗಾರಿ ಆರಂಭಿಸಿದೆ.

‘ತಾತ್ಕಾಲಿಕ ರಸ್ತೆ ನಿರ್ಮಾಣದ ಬಳಿಕ ಯಾವ ಕೆಲಸವೂ ಆಗಿಲ್ಲ. ಇತ್ತೀಚೆಗೆ ಮಳೆ ಸುರಿದಾಗ ಇಲ್ಲಿ ಮತ್ತೆ ಮಣ್ಣು ಕುಸಿದಿದೆ. ಈಗ ಕಾಂಕ್ರೀಟ್‌ ತಡೆಗೋಡೆ ಕಟ್ಟಲು ಕೆಲಸ ಆರಂಭಿಸಿದ್ದಾರೆ. ಆದರೆ, ಮಳೆಗಾಲದ ಆರಂಭಕ್ಕೂ ಮೊದಲು ಕೆಲಸ ಮುಗಿಸುವುದು ಕಷ್ಟ. ಈ ಬಾರಿಯೂ ಹೆದ್ದಾರಿ ಬಂದ್‌ ಆಗುವುದು ಖಚಿತ ಅನಿಸುತ್ತಿದೆ’ ಎಂದು ಕಾಮಗಾರಿ ಸ್ಥಳದಲ್ಲಿದ್ದ ಮದೆನಾಡು ನಿವಾಸಿ ಕಿಶನ್‌ ಆತಂಕ ಹಂಚಿಕೊಂಡರು.

ಅನುದಾನದ ಕೊರತೆ: ಈ ಮಾರ್ಗದಲ್ಲಿ ಹೆದ್ದಾರಿ ಮೇಲೆ ಗುಡ್ಡ ಕುಸಿಯುವುದನ್ನು ಶಾಶ್ವತವಾಗಿ ತಡೆಯುವ ಸಂಬಂಧ ಭಾರತೀಯ ವಿಜ್ಞಾನ ಸಂಸ್ಥೆಯ ಮಣ್ಣು ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕ ಪ್ರೊ.ಬಿ.ಆರ್‌. ಶ್ರೀನಿವಾಸಮೂರ್ತಿ ಮತ್ತು ಜಿಯೋಟೆಕ್ನಿಕಲ್‌ ಎಂಜಿನಿಯರಿಂಗ್‌ ವಿಭಾಗದ ಡಾ.ಜಿ.ಎಲ್‌. ಶಿವಕುಮಾರ್‌ ಬಾಬು ನೇತೃತ್ವದ ಎರಡು ಪ್ರತ್ಯೇಕ ಸಮಿತಿಗಳು ಅಧ್ಯಯನ ನಡೆಸಿದ್ದವು. ಸುರತ್ಕಲ್‌ನ ಎಐಟಿಕೆಯ ತಂಡವೂ ಅಧ್ಯಯನ ನಡೆಸಿತ್ತು.

ಹೆಚ್ಚು ಎತ್ತರದ ಗುಡ್ಡಗಳು ಇರುವಲ್ಲಿ ಸಾಯಿಲ್‌ ನೇಲಿಂಗ್‌, ಕಡಿಮೆ ಎತ್ತರದ ಗುಡ್ಡಗಳಿರುವಲ್ಲಿ ಗೇಬಿಯನ್‌ ವಾಲ್‌ ಮತ್ತು ಕಡಿಮೆ ಅಗಲವಿರುವ ಕಡೆಗಳಲ್ಲಿ ಮೈಕ್ರೋಫಿಲ್ಲಿಂಗ್‌ ತಂತ್ರಜ್ಞಾನ ಬಳಸಿ ಶಾಶ್ವತವಾಗಿ ಗುಡ್ಡ ಕುಸಿತ ತಡೆಯಲು ಈ ಸಮಿತಿಗಳು ಶಿಫಾರಸು ಮಾಡಿದ್ದವು.

ಘಾಟಿಯುದ್ದಕ್ಕೂ ಶಾಶ್ವತ ಗುಡ್ಡ ಕುಸಿತ ತಡೆ ಮತ್ತು ಹೊಸ ರಸ್ತೆ ನಿರ್ಮಾಣಕ್ಕೆ ಕೇಂದ್ರದಿಂದ ₹ 500 ಕೋಟಿ ಅನುದಾನ ಕೋರಲು ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗ ಪ್ರಸ್ತಾವ ಸಿದ್ಧಪಡಿಸಿತ್ತು. ತುರ್ತು ಕ್ರಮವಾಗಿ ಕಳೆದ ಭಾರಿ ಭೂಕುಸಿತ ಸಂಭವಿಸಿರುವ ಸ್ಥಳಗಳಲ್ಲಿ ಕಾಮಗಾರಿಗೆ ಅನುದಾನ ಕೋರಿತ್ತು. ಆದರೆ, ಯಾವ ಕೆಲಸವೂ ಆಗಿಲ್ಲ.

ಅನುದಾನ ಕೊರತೆಯಿಂದ ವಿಳಂಬ’

‘ಸಂಪಾಜೆ ಘಾಟಿ ಮಾರ್ಗದಲ್ಲಿ ಭೂಕುಸಿತ ಸಂಭವಿಸಿರುವ ಸ್ಥಳಗಳಲ್ಲಿ ಶಾಶ್ವತವಾಗಿ ಸಮಸ್ಯೆ ಬಾರದಂತೆ ತಡೆಯಲು ₹ 47 ಕೋಟಿ ಅನುದಾನ ಕೋರಿ ಕೇಂದ್ರ ಹೆದ್ದಾರಿ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ತಾತ್ಕಾಲಿಕ ರಸ್ತೆ ನಿರ್ಮಾಣ ಕಾಮಗಾರಿಯ ಜೊತೆ ಹೊಂದಿಸಿಕೊಂಡು ಕೆಲಸ ಮಾಡುವಂತೆ ನಿರ್ದೇಶನ ಬಂತು. ಅನುದಾನ ಕೋರಿ ಮತ್ತೆ ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದು ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಮುಖ್ಯ ಎಂಜಿನಿಯರ್‌ ಗಣೇಶ್‌ ತಿಳಿಸಿದರು.

‘ಕೇಂದ್ರದಿಂದ ಅನುದಾನ ದೊರಕುವುದು ವಿಳಂಬವಾಗಿದೆ. ರಾಜ್ಯ ಸರ್ಕಾರದಿಂದ ಅನುದಾನ ಪಡೆದು ತುರ್ತು ಕಾಮಗಾರಿ ಕೈಗೊಳ್ಳಲು ಸಿದ್ಧತೆ ಮಾಡಿಕೊಂಡಿದ್ದೇವೆ. ಈ ವರ್ಷದ ಮಳೆಗಾಲದ ಅವಧಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳುತ್ತಿದ್ದೇವೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು