ಭಾನುವಾರ, ಸೆಪ್ಟೆಂಬರ್ 19, 2021
23 °C
ಸುಪ್ರೀಂ ಕೋರ್ಟ್‌ ಅಮಿಕಸ್ ಕ್ಯೂರಿ ನರಸಿಂಹ ಹೇಳಿಕೆ

ಬಿಸಿಸಿಐಗೆ ಚುನಾಯಿತ ಆಡಳಿತ ಸಮಿತಿ ಬರಲಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ  ಆಡಳಿತ ಸಮಿತಿಯನ್ನು ಸುಪ್ರೀಂ ಕೋರ್ಟ್ ಅಥವಾ ಕ್ರಿಕೆಟ್ ಆಡಳಿತ ಸಮಿತಿ (ಸಿಒಎ) ಮಾಡುವುದಿಲ್ಲ. ಚುನಾಯಿತ ಸಮಿತಿಯ ನೇಮಕವಾಗಲಿದೆ ಎಂದು ಸುಪ್ರೀಂ ಕೋರ್ಟ್‌ನ ಅಮಿಕಸ್ ಕ್ಯೂರಿ ಪಿ.ಎಸ್. ನರಸಿಂಹ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯ ಕ್ರಿಕೆಟ್‌ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ನಂತರ ನರಸಿಂಹ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಿದ್ದಾರೆ.

‘ಕ್ರಿಕೆಟ್ ಆಡಳಿತವನ್ನು ಅದರ ಪದಾಧಿಕಾರಿಗಳೇ ನೋಡಿಕೊಳ್ಳುವುದು ಉಚಿತ.  ಆಟದ ಬೆಳವಣಿಗೆಯ ಹೊಣೆ ಅವರದ್ದು. ಕೋರ್ಟ್ ಅಥವಾ ವಕೀಲರು ಆಟದ ಆಡಳಿತ ನೋಡಿಕೊಳ್ಳಲು ಸಾಧ್ಯವಿಲ್ಲ. ಕ್ರಿಕೆಟ್ ಆಡಳಿತದ ಹೊಣೆಯು ಕೋರ್ಟ್‌ ನೇಮಕ ಮಾಡಿರುವ ಸಮಿತಿಗಳದ್ದೂ ಅಲ್ಲ’ ಎಂದಿದ್ದಾರೆ.

‘ಪ್ರಜಾಪ್ರಭುತ್ವದ ಮಾದರಿಯಲ್ಲಿ ಚುನಾಯಿತರಾದ ಪದಾಧಿಕಾರಿಗಳೇ ಆಡಳಿತ ನೋಡಿಕೊಳ್ಳುವುದು ಸೂಕ್ತ. ಆಡಳಿತದ ಸುಧಾರಣೆಯಲ್ಲಿ ಕ್ರಿಕೆಟಿಗರೂ ಸಹಭಾಗಿಗಳಾಗಿದ್ದಾರೆ. ಈ ನಿಟ್ಟಿನಲ್ಲಿ ಆಶಾದಾಯಕ ಸಿದ್ಧತೆಗಳು ನಡೆಯುತ್ತಿವೆ. ಸುಧಾರಣೆ ಕ್ರಮಗಳ ಪಟ್ಟಿಯನ್ನು ಅಂತಿಮಗೊಳಿಸಲು ಬಹಳಷ್ಟು ಸಮಯ ತೆಗೆದುಕೊಂಡಿತು. ಇದೀಗ ಅದನ್ನು ಜಾರಿಗೊಳಿಸುವ  ಕಾಲ’ ಎಂದು ನರಸಿಂಹ ಹೇಳಿದರು.

‘ರಾಜ್ಯ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸುಮಾರು 135 ಗಂಟೆಗಳ ಕಾಲ ವಿಚಾರ ವಿನಿಮಯ ನಡೆಸಲಾಯಿತು. ಅದರಿಂದ ಉತ್ತಮ ಫಲ ಸಿಕ್ಕಂತಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಆಡಳಿತ ಸಮಿತಿ ಸದಸ್ಯರು ಮತ್ತು ಪದಾಧಿಕಾರಿಗಳ ಚುನಾವಣೆಗೆ ದಾರಿ ಸಿಕ್ಕಂತಾಗಿದೆ. ಎಲ್ಲ ರಾಜ್ಯ ಸಂಸ್ಥೆಗಳೂ ಸುಧಾರಣೆಗಳನ್ನು ಮಾಡಲು ಉತ್ಸುಕವಾಗಿವೆ’ ಎಂದು ತಿಳಿಸಿದರು.

‘ಕ್ರಿಕೆಟ್  ಆಡಳಿತ ಸಮಿತಿ (ಸಿಒಎ) ಚುನಾವಣೆ ದಿನಾಂಕಗಳನ್ನು ನಿರ್ಧರಿಸಬೇಕಿದೆ. ಚುನಾವಣೆಯ ನಂತರ ಪ್ರತಿನಿಧಿಗಳು ಆಯ್ಕೆಯಾಗುತ್ತಾರೆ. ಮಂಡಳಿಯ ಸರ್ವಸಾಧಾರಣ ಸಭೆಗಳಿಗೆ ಪ್ರತಿನಿಧಿಗಳು ಹಾಜರಾಗುತ್ತಾರೆ. ಚುನಾವಣೆ ದಿನಾಂಕಗಳನ್ನು ನಿರ್ಧರಿಸುವಲ್ಲಿ ನಾನು ಯಾವುದೇ ಪಾತ್ರ ವಹಿಸುವುದಿಲ್ಲ. ಒಬ್ಬ ಹಿರಿಯ ವಕೀಲನಾಗಿ ಕೋರ್ಟ್ ಸೂಚಿಸುವ ಕಾರ್ಯಗಳನ್ನು ಮಾಡುವುದಷ್ಟೇ ನನ್ನ ಕೆಲಸ’ ಎಂದು ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು