ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಅಮಾನತು

ಮಂಗಳವಾರ, ಜೂನ್ 18, 2019
23 °C
ಬರ ಪರಿಸ್ಥಿತಿ ನಿರ್ವಹಣೆ ಸಭೆಯಲ್ಲಿ ಸಚಿವ ಜಿ.ಟಿ.ದೇವೇಗೌಡ ಎಚ್ಚರಿಕೆ

ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಅಮಾನತು

Published:
Updated:
Prajavani

ಮೈಸೂರು: ‘ಲೋಕಸಭಾ ಚುನಾವಣೆಯ ಮತ ಎಣಿಕೆ ಮುಗಿದ ಬಳಿಕ ಮತ್ತೆ ಅಧಿಕಾರಿಗಳ ಸಭೆ ನಡೆಸಲಾಗುವುದು. ಅಷ್ಟರಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳದಲ್ಲೇ ಅಮಾನತು ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಬರ ಪರಿಸ್ಥಿತಿ ನಿರ್ವಹಣೆ ಮತ್ತು ಮಳೆ ಮುನ್ನೆಚ್ಚರಿಕೆ ಕ್ರಮಗಳ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿದರು.

ಟಾಸ್ಕ್‌ಫೋರ್ಸ್‌ನಡಿ ಬಿಡುಗಡೆಯಾಗಿರುವ ಅನುದಾನವನ್ನು ಸರಿಯಾಗಿ ಬಳಸದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹೆಚ್ಚಿನ ತಾಲ್ಲೂಕುಗಳಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ, ಹಣ ಬಳಕೆ ಆಗಿಲ್ಲ. ಪ್ರಮುಖವಾಗಿ ಜಿಲ್ಲಾ ಪಂಚಾಯಿತಿಯ ಕುಡಿಯುವ ನೀರು ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅವರನ್ನು ಬದಲಾವಣೆ ಮಾಡುವುದಾಗಿ ಹೇಳಿದರು. ‘ನಿಮಗೆ ಹೇಳುವವರು, ಕೇಳುವವರು ಯಾರೂ ಇಲ್ಲವೇ? ಅಮಾನತು ಶಿಕ್ಷೆ ಒಂದೇ ನಿಮಗೆ ಬಾಕಿ’ ಎಂದರು.

‘ಕುಡಿಯುವ ನೀರು ಪೂರೈಸಲು ಹಣದ ಸಮಸ್ಯೆ ಇಲ್ಲ. ಹೀಗಾಗಿ, ಜಿಲ್ಲೆಯಲ್ಲಿ ನೀರು ಸರಬರಾಜು ತೊಂದರೆ ಇರುವ ಕಡೆಗಳಲ್ಲಿ ಅಧಿಕಾರಿಗಳು ಹೆಚ್ಚಿನ ಗಮನ ವಹಿಸಬೇಕು. ಯಾವುದೇ ಭಾಗದಲ್ಲಿ ಸಮಸ್ಯೆ ಕಂಡುಬಂದಲ್ಲಿ 24 ಗಂಟೆಯೊಳಗೆ ಕುಡಿಯುವ ನೀರು ಸರಬರಾಜು ಮಾಡಬೇಕು’ ಎಂದು ಸೂಚನೆ ನೀಡಿದರು.

‘ಚುನಾವಣಾ ಗುಂಗಿನಿಂದ ಅಧಿಕಾರಿಗಳು ಮೊದಲು ಹೊರಬರಬೇಕು. ಹಳ್ಳಿಗಳು, ತಾಲ್ಲೂಕು ಕೇಂದ್ರಗಳಿಗೆ ಹೋಗಿ ಸಮಸ್ಯೆ ಆಲಿಸಿ ಪರಿಹರಿಸಬೇಕು’ ಎಂದು ತಾಕೀತು ಮಾಡಿದರು.

‘ಟ್ಯಾಂಕರ್‌ ನೀರು ಪೂರೈಸಿದ್ದಕ್ಕೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಬಿಲ್‌ ನೀಡದೆ ಬಾಕಿ ಉಳಿಸಿಕೊಂಡಿದ್ದಾರೆ. ವಾರದಲ್ಲಿ ಬಾಕಿ ಹಣ ಪಾವತಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಹಿನಕಲ್‌ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ದೂರುಗಳಿದ್ದು, ಪಿಡಿಒಗಳು, ವಾಟರ್‌ಮನ್‌ಗಳನ್ನು ಬದಲಾಯಿಸಲಾಗುವುದು’ ಎಂದರು.

‘ಪ್ರಮುಖವಾಗಿ ವಿಜಯನಗರ 3, 4ನೇ ಹಂತ, ಹಿನಕಲ್, ಬೋಗಾದಿ, ಆಲನಹಳ್ಳಿ, ರೈಲ್ವೆ ಬಡಾವಣೆ, ಕೆಎಚ್‌ಬಿ ಕಾಲೊನಿಯಲ್ಲಿ ನೀರಿನ ಸಮಸ್ಯೆ ಅಧಿಕವಾಗಿದ್ದು, ಅದನ್ನು ಆದಷ್ಟು ಬೇಗ ಸರಿಪಡಿಸಬೇಕು. ವಿಜಯನಗರ 3 ಮತ್ತು 4ನೇ ಹಂತದಲ್ಲಿ ನೀರು ಸರಬರಾಜಿನಲ್ಲಿ ತೊಂದರೆಯಾಗುತ್ತಿದೆ ಎಂದು ನಿವಾಸಿಗಳು ದೂರುತ್ತಿದ್ದಾರೆ. ಅಲ್ಲಿಗೆ ಸಮರ್ಪಕವಾಗಿ ನೀರು ಪೂರೈಸಬೇಕು’ ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಹೆಚ್ಚುವರಿ ನೀರು ಅಗತ್ಯ: ವಿಜಯನಗರ ಮೂರನೇ ಹಂತ, ಹೂಟಗಳ್ಳಿಗೆ ವಾರಕ್ಕೆ ಎರಡು ದಿನ, ಪಾಲಿಕೆ ವ್ಯಾಪ್ತಿಯ 42 ವಾರ್ಡ್‌ಗಳಿಗೆ ನಿತ್ಯ ಹಾಗೂ 23 ವಾರ್ಡ್‌ಗಳಿಗೆ ಎರಡು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ನಗರ ವ್ಯಾಪ್ತಿಗೆ ಹೆಚ್ಚುವರಿಯಾಗಿ 40 ಎಂಎಲ್‌ಡಿ ನೀರಿನ ಅಗತ್ಯವಿದೆ. ಮುಡಾದಿಂದ ಪಾಲಿಕೆಗೆ ಹಸ್ತಾಂತರವಾಗಿರುವ ಬಡಾವಣೆಗಳಿಗೆ ಹೆಚ್ಚುವರಿಯಾಗಿ 27 ಎಂಎಲ್‌ಡಿ ನೀರು ಬೇಕು ಎಂದು ಅಧಿಕಾರಿಗಳು ಹೇಳಿದರು. 

ಆಯುಕ್ತರಿಗೆ ತರಾಟೆ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಆಯುಕ್ತ ಪಿ.ಎಸ್‌.ಕಾಂತರಾಜ್‌ ಅವರನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಬಡಾವಣೆ ವ್ಯಾಪ್ತಿಯ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜನ್ನು ಪ್ರಾಧಿಕಾರವೇ ವಹಿಸಿಕೊಳ್ಳಬೇಕು ಎಂದು ತಾಕೀತು ಮಾಡಿದರು.

ಆಗ ಕಾಂತರಾಜ್‌, ‘ಮುಡಾ ಬಡಾವಣೆಗಳಿಗೆ ಕಬಿನಿ ನೀರನ್ನು ಸರಿಯಾಗಿ ಪೂರೈಕೆ ಮಾಡುತ್ತಿಲ್ಲ’ ಎಂದು ದೂರಿದರು.

ಇದಕ್ಕೆ ದನಿಗೂಡಿಸಿದ ಪಾಲಿಕೆ ಆಯುಕ್ತರಾದ ಶಿಲ್ಪಾನಾಗ್‌, ‘ನಗರದೊಳಗೆ ಕಬಿನಿ ನೀರು ಪೂರೈಕೆ ಆಗುತ್ತಿದೆ. ಆದರೆ, ಹೊರವಲಯದಲ್ಲಿ ಸಮಸ್ಯೆ ಇದೆ’ ಎಂದರು.

ಎಲ್ಲಾ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಿದರೆ ಆರು ತಿಂಗಳೊಳಗೆ ಹೆಚ್ಚುವರಿಯಾಗಿ 60 ಎಂಎಲ್‌ಡಿ ನೀರು ತರಬಹುದು ಎಂದು ಮಾಹಿತಿ ನೀಡಿದರು.

ಮೇವಿಗೆ ಸಮಸ್ಯೆ: 15 ವಾರಗಳಿಗೆ ಆಗುವಷ್ಟು ಮೇವು ಇದೆ. ಮೈಸೂರು ಹಾಗೂ ಎಚ್‌.ಡಿ.ಕೋಟೆ ತಾಲ್ಲೂಕುಗಳಲ್ಲಿ ಮೇವಿಗೆ ಸಮಸ್ಯೆ ಇರುವ ವಿಚಾರವನ್ನು ಪಶು ಇಲಾಖೆ ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜ್ಯೋತಿ, ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾಧಾ ಇದ್ದರು.

ಮೈಸೂರು ಜಿಲ್ಲೆಯಲ್ಲಿ ಮೇವಿನ ಲಭ್ಯತೆ

ತಾಲ್ಲೂಕು; ಲಭ್ಯ ಮೇವು (ಟನ್‌); ಸಾಕಾಗುವ ವಾರ

ಮೈಸೂರು; 23,077; 9

ನಂಜನಗೂಡು; 52,755; 17

ಕೆ.ಆರ್‌.ನಗರ; 51,617; 17

ಹುಣಸೂರು; 67,846; 21

ಪಿರಿಯಾಪಟ್ಟಣ; 46,608; 13

ತಿ.ನರಸೀಪುರ; 34,944; 17

ಎಚ್‌.ಡಿ.ಕೋಟೆ; 34,044; 10

ಒಟ್ಟು; 3,10,891; 15

ಟ್ಯಾಂಕರ್‌ನಲ್ಲಿ ನೀರು ಪೂರೈಸುತ್ತಿರುವ ತಾಲ್ಲೂಕುಗಳು (ಗ್ರಾಮಾಂತರ)

ತಾಲ್ಲೂಕು; ಟ್ಯಾಂಕರ್‌; ಟ್ರಿಪ್‌

ಮೈಸೂರು; 8; 20

ನಂಜನಗೂಡು; 5; 8

ಎಚ್‌.ಡಿ.ಕೋಟೆ; 2; 5

ಕುಡಿಯುವ ನೀರಿಗೆ ಸಂಬಂಧಿಸಿದಂತೆ ಬಿಡುಗಡೆಯಾಗಿರುವ ಅನುದಾನ

ತಾಲ್ಲೂಕು; ಅನುದಾನ; ವೆಚ್ಚ

ಎಚ್‌.ಡಿ.ಕೋಟೆ; 35; 20.10

ಹುಣಸೂರು; 35; 15.99

ಕೆ.ಆರ್‌.ನಗರ; 50; 23.27

ಮೈಸೂರು; 35; 18.33

ನಂಜನಗೂಡು;‌ 35; 19.74

ಪಿರಿಯಾಪಟ್ಟಣ; 50; 7.57

ತಿ.ನರಸೀಪುರ; 35; 14.99

ಒಟ್ಟು; 275; 119.99

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !