ಡಿಜಿಟಲೀಕರಣಗೊಳ್ಳಲಿವೆ ಆಸ್ತಿ ದಾಖಲೆಗಳು

ಸೋಮವಾರ, ಮೇ 20, 2019
30 °C
ಬೆಂಗಳೂರು ನಗರ ಜಿಲ್ಲೆಯಲ್ಲಿ ಪ್ರಾಯೋಗಿಕ ಅನುಷ್ಠಾನ

ಡಿಜಿಟಲೀಕರಣಗೊಳ್ಳಲಿವೆ ಆಸ್ತಿ ದಾಖಲೆಗಳು

Published:
Updated:

ಬೆಂಗಳೂರು: ರಿಯಲ್‌ ಎಸ್ಟೇಟ್‌ ಮೌಲ್ಯ ಹೆಚ್ಚು ಇರುವ ನಗರದ ಹೊರವಲಯದಲ್ಲಿ ಆಸ್ತಿಗಳ ಮಾಲೀಕತ್ವವನ್ನು ಖಚಿತಪಡಿಸಿಕೊಂಡು ಅವುಗಳನ್ನು ತೆರಿಗೆ ವ್ಯಾಪ್ತಿಗೆ ತರುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಸಮೀಕ್ಷೆ ನಡೆಸಲಾಗುತ್ತಿದೆ.

ಕೃಷಿಯೇತರ ಜಮೀನುಗಳ ಸುಳ್ಳು ದಾಖಲೆ ಸೃಷ್ಟಿಸಿ, ಒಂದೇ ಜಮೀನನ್ನು ಅನೇಕರಿಗೆ ಮಾರಾಟ ಮಾಡಿ ಗ್ರಾಹಕರನ್ನು ವಂಚಿಸಿರುವ ಅನೇಕ ಪ್ರಕರಣಗಳು ಬೆಳಕಿಗೆ ಬಂದ ಮೂರು ವರ್ಷಗಳ ಬಳಿಕ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ನಗರದ ಹೊರವಲಯದಲ್ಲಿ ಆಸ್ತಿಗಳ ನೋಂದಣಿಯಲ್ಲಿ ಸುಮಾರು ₹ 300 ಕೋಟಿಗಳಷ್ಟು ಅವ್ಯವಹಾರ ನಡೆದಿರುವುದನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ 2016ರಲ್ಲಿ ಪತ್ತೆಹಚ್ಚಿತ್ತು. ಆಸ್ತಿ ನೋಂದಣಿಯಲ್ಲಿ ಅವ್ಯವಹಾರ ನಡೆದಿರುವುದು ನಿವೃತ್ತ ಐಎಎಸ್‌ ಅಧಿಕಾರಿ ಆರ್.ಬಿ.ಅಗವಾನೆ ಸಮಿತಿಯ ತನಿಖೆಯಿಂದ ದೃಢಪಟ್ಟಿತ್ತು. 

ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿ ಕೃಷಿಯೇತರ ಜಮೀನುಗಳಿಗೆ ಮನಸೋ ಇಚ್ಛೆ ನಮೂನೆ 9 (ಖಾತಾ ದಾಖಲೆ) ಮತ್ತು ನಮೂನೆ 11 (ತೆರಿಗೆ ದಾಖಲೆ) ವಿತರಿಸಿದ್ದರು. ಬಿಲ್ಡರ್‌ಗಳು ಈ ಆಸ್ತಿಗಳನ್ನು ಮಾರಾಟ ಮಾಡಿ ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ನೋಂದಾಯಿಸಿದ್ದರು. ಈ ಆಸ್ತಿ ಮಾರಾಟ ಮಾಡಿದ ಬಳಿಕ, ಅದೇ ಆಸ್ತಿಯನ್ನು ಬೇರೊಬ್ಬರಿಗೆ ಮಾರಾಟ ಮಾಡುವ ಸಲುವಾಗಿ ಈ ನಮೂನೆಗಳನ್ನು ರದ್ದುಪಡಿಸುತ್ತಿದ್ದರು. ಈ ಬಗ್ಗೆ ತಿಳಿವಳಿಕೆ ಇಲ್ಲದ ಗ್ರಾಹಕರು ಬಲಿಪಶುಗಳಾಗುತ್ತಿದ್ದರು.

ಈ ಬೆಳವಣಿಗೆ ಬಳಿಕ ಎಚ್ಚೆತ್ತುಕೊಂಡಿರುವ ಇಲಾಖೆಯು ಬೆಂಗಳೂರು ನಗರ ಜಿಲ್ಲೆಯ 95 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಸಮಗ್ರ ಆಸ್ತಿಗಳ ಮಾಹಿತಿಯನ್ನು ಡಿಜಿಟಲೀಕರಣಗೊಳಿಸುವ ಉದ್ದೇಶದಿಂದ ಸಮೀಕ್ಷೆ ನಡೆಸಲು ಮುಂದಾಗಿದೆ. 

‘ಜುಲೈ ತಿಂಗಳಿನಲ್ಲಿ ಸರ್ವೆ ಆರಂಭವಾಗಲಿದೆ’ ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್‌.ಕೆ.ಅತೀಕ್‌ ತಿಳಿಸಿದರು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದಿಂದ (ಇಸ್ರೊ) ನಗರದ ಇತ್ತೀಚಿನ ಭೂ–ನಕ್ಷೆಗಳನ್ನು ಪಡೆಯುವಂತೆ ಇಲಾಖೆಯು ‘ಕರ್ನಾಟಕ ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರ’ವನ್ನು (ಕೆಎಸ್‌ಆರ್‌ಎಸ್‌ಎಸಿ) ಕೋರಿದೆ. ಈ ನಕ್ಷೆಗಳನ್ನು ಬಳಸಿ ನಿರ್ದಿಷ್ಟ ಆಸ್ತಿಗಳ ವಿವರಗಳನ್ನು ಗುರುತಿಸಲಾಗುತ್ತದೆ. ಜೊತೆಗೆ ಮನೆ ಮನೆಗೆ ತೆರಳಿಯೂ ಸಮೀಕ್ಷೆ ನಡೆಸಲಾಗುತ್ತದೆ’ ಎಂದು ಅವರು ವಿವರಿಸಿದರು.

‘ಮನೆ ಮನೆ ಸರ್ವೆ ವೇಳೆ ಆಸ್ತಿ ಕುರಿತ ಅಧಿಕೃತ ದಾಖಲೆಗಳನ್ನು ಹಾಗೂ ಭೂಪರಿವರ್ತನೆಯ (ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸಿದ್ದರೆ) ಆದೇಶಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸುವಂತೆ ಮಾಲೀಕರಿಗೆ ಸೂಚಿಸುತ್ತೇವೆ. ವಸತಿ ಬಡಾವಣೆಗಳನ್ನು ನಿರ್ಮಿಸಿದ್ದರೆ, ಅದಕ್ಕೆ ಪಡೆದಿರುವ ಮಂಜೂರಾತಿಯ ದಾಖಲೆಗಳನ್ನು ಕೇಳುತ್ತೇವೆ. ಈ ಕ್ರಮದಿಂದ ಆಸ್ತಿ ಮಾರಾಟದಲ್ಲಿ ನಡೆಯುವ ಅಕ್ರಮಗಳಿಗೆ ಕಡಿವಾಣ ಹಾಕಲಿದ್ದೇವೆ’ ಎಂದು ಅವರು ತಿಳಿಸಿದರು.

‘ಈ ಕಾರ್ಯಕ್ರಮದ ಬಳಿಕ ಇನ್ನಷ್ಟು ಆಸ್ತಿಗಳು ಇಲಾಖೆಯ ‘ಇ–ಸ್ವತ್ತು’ ಪೋರ್ಟಲ್‌ ವ್ಯಾಪ್ತಿಗೆ ಸೇರ್ಪಡೆಯಾಗಲಿವೆ. ಪ್ರಸ್ತುತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಖಲೆಗಳು ಪಂಚತಂತ್ರ ಪೋರ್ಟಲ್‌ನ ವ್ಯಾಪ್ತಿಯಲ್ಲಿವೆ. ಪಂಚತಂತ್ರದಲ್ಲಿ ಸ್ವತ್ತುಗಳ ಪಟ್ಟಿ ಮಾತ್ರ ಇರುತ್ತದೆ. ಆಸ್ತಿಯ ವಿವರಗಳನ್ನು ಇ–ಸ್ವತ್ತುವಿನ ವ್ಯಾಪ್ತಿಗೆ ತಂದರೆ ನಮೂನೆ 9 ಮತ್ತು 11ರಲ್ಲಿ ಆಸ್ತಿಯ ಇತ್ತೀಚಿನ ಮಾಲೀಕರು ಯಾರು, ಅವರು ಎಷ್ಟು ತೆರಿಗೆ ಪಾವತಿಸಿದ್ದಾರೆ ಎಂಬುದೂ ದಾಖಲಾಗುತ್ತವೆ. ಇದರಿಂದ ಆಸ್ತಿ ಮಾರಾಟ ಪ್ರಕ್ರಿಯೆ ಸುಲಭವಾಗಲಿದೆ’ ಎಂದು ಅವರು ತಿಳಿಸಿದರು.

ಈ ಪ್ರಕ್ರಿಯೆ ಗ್ರಾಮಪಂಚಾಯಿತಿಗಳು ತೆರಿಗೆ ಸಂಗ್ರಹ ಸುಧಾರಣೆಗೂ ನೆರವಾಗಲಿದೆ. ವಸತಿ, ವಾಣಿಜ್ಯ, ಕೈಗಾರಿಕೆಗಳ ಆಸ್ತಿಗಳಿಗೆ, ಖಾಲಿ ನಿವೇಶನಗಳಿಗೆ, ಹೋರ್ಡಿಂಗ್‌ ಹಾಗೂ ಮೊಬೈಲ್‌ ಗೋಪುರಗಳಿಗೆ ತೆರಿಗೆ ವಿಧಿಸುವ ಅಧಿಕಾರ ಪಂಚಾಯಿತಿಗಳಿಗೆ ಇದೆ. ಇದುವರೆಗೆ ಗ್ರಾ.ಪಂ.ಗಳು ₹ 474 ಕೋಟಿ ತೆರಿಗೆಯನ್ನು ಮಾತ್ರ ಸಂಗ್ರಹಿಸಿವೆ. ₹ 1,895 ಕೋಟಿಗೂ ಅಧಿಕ ತೆರಿಗೆ ವಸೂಲಿ ಬಾಕಿ ಇದೆ. ರಾಜ್ಯದ 6,024 ಗ್ರಾಮಪಂಚಾಯಿತಿಗಳಲ್ಲಿ ಒಟ್ಟು 1.22 ಕೋಟಿ ಆಸ್ತಿಗಳಿವೆ. 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !