ಜರುಗಹಳ್ಳಿ: ಸಂಭ್ರಮದ ಉಟ್ಲು ಜಾತ್ರೆ

ಸೋಮವಾರ, ಜೂನ್ 17, 2019
28 °C

ಜರುಗಹಳ್ಳಿ: ಸಂಭ್ರಮದ ಉಟ್ಲು ಜಾತ್ರೆ

Published:
Updated:
Prajavani

ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ತಾಲ್ಲೂಕಿನ ಜರುಗಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ನಾಲ್ಕು ಗ್ರಾಮಗಳ ಐತಿಹಾಸಿಕ ತೆಂಗಿನ ಕಾಯಿ ಉಟ್ಲು ಜಾತ್ರೆ ಹಾಗೂ 6ನೇ ವಾರ್ಷಿಕೋತ್ಸವ ಅದ್ಧೂರಿಯಾಗಿ ಆಚರಿಸಲಾಯಿತು.

ಜಾತ್ರೆ ಪ್ರಯುಕ್ತ ದೇವಾಲಯ ಮತ್ತು ವಿಗ್ರಹಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆ 5 ಗಂಟೆ ಸುಪ್ರಭಾತ ಸೇವೆ, ಅಭಿಷೇಕ, ಉತ್ಸವ ಸೇರಿದಂತೆ ಹಲವು ಧಾರ್ಮಿಕ ಕೈಂಕರ್ಯಗಳು ನಡೆದವು. ಬೆಳಗ್ಗೆಯಿಂದ ಸಂಜೆಯವರೆಗೆ ಭಕ್ತರಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜರುಗಹಳ್ಳಿ, ವೆಂಕಟಕೃಷ್ಣಪ್ಪನಹಳ್ಳಿ, ಜರುಗಹಳ್ಳಿ ಕಾಲೋನಿ, ಕೊಂಡಪ್ಪಗಾರಹಳ್ಳಿಯ ನೂರಾರು ಭಕ್ತರು ಹಾಗೂ ಸುತ್ತಮುತಯ್ತಲಿನ ಗ್ರಾಮಸ್ಥರು ಜಾತ್ರೆಯಲ್ಲಿ ಭಾಗವಹಿಸಿ, ದೇವರ ದರ್ಶನ ಪಡೆದರು.

ಜಾತ್ರೆ ಪ್ರಯುಕ್ತ ಮಹಿಳೆಯರು ಮುಂಜಾನೆಯಿಂದಲೇ ಮನೆ ಶುಭ್ರಗೊಳಿಸಿ, ಉಪವಾಸವಿದ್ದು ಹಿಂದಿನ ದಿನ ಅಕ್ಕಿ ನೆನೆಸಿ ತಂಬಿಟ್ಟು ಮಾಡಿ ಬೆಲ್ಲದ ಪಾಕದಲ್ಲಿ ಹಸಿಟ್ಟು ಸೇರಿಸಿ ಅದರಲ್ಲಿ ದೀಪಗಳನ್ನು ಮಾಡಿ ವಿವಿಧ ಬಗೆಯ ಹೂವುಗಳಿಂದ ಅಲಂಕಾರ ಮಾಡಿ ತಲೆಯ ಮೇಲೆ ಹೊತ್ತು ಶ್ರೀಲಕ್ಷ್ಮೀ ನರಸಿಂಹಸ್ವಾಮಿಗೆ ಬೆಳಗುವ ಮೂಲಕ ದೀಪೋತ್ಸವ ಆಚರಿಸಿದರು.

ಉಟ್ಲು ಆಚರಣೆಗೆ ದೇವಾಲಯ ಮುಂಭಾಗದಲ್ಲಿರುವ ಸುಮಾರು 20 ಅಡಿ ಎತ್ತರದ ಕಂಬದ ಮೇಲೆ ಚೌಕಾಕಾರದ ಉಟ್ಲು ಮಂಟಪಕ್ಕೆ ವಸ್ತ್ರ, ಹೂವಿನಿಂದ ಅಲಂಕರಿಸಲಾಗಿತ್ತು. ಕೆಳ ಭಾಗದ ಮೂರು ಸಣ್ಣ ಗಾತ್ರದ ಗೋಣಿ ಚೀಲಗಳಲ್ಲಿ ಮೂರು ದಿಕ್ಕಿಗೂ ತೆಂಗಿನಕಾಯಿಗಳನ್ನು ಹಗ್ಗದಿಂದ ಕಟ್ಟಲಾಗಿತ್ತು.

ಕಂಬದ ಮೇಲೆ ಉಟ್ಲುವಿನಲ್ಲಿ ಇಬ್ಬರು ಯುವಕರು ಕುಳಿತು ಜೋರಾಗಿ ಕಾಯಿಗಳನ್ನು ತಿರುಗಿಸಿದರು. ಜಾತ್ರೆಗೆ ಸೇರಿದ ಜನರಲ್ಲಿ ಅನೇಕರು ತೆಂಗಿನಕಾಯಿಗಳನ್ನು ಉದನೇಯ ಕೋಲಿನಿಂದ ಒಡೆಯಲು ಪ್ರಯತ್ನಿಸಿ ಸುಸ್ತಾಗುತ್ತಿದ್ದ ಪರಿ ಮನರಂಜಿಸಿ, ನಗೆಗಡಲನ್ನೇ ಸೃಷ್ಟಿಸಿತ್ತು.

ಭರ್ಜರಿ ವ್ಯಾಪಾರ: ದೇಗುಲದ ಮುಂಬಾಗದಲ್ಲಿ ತಲೆ ಎತ್ತಿದ್ದ ಪೂಜಾ ಸಾಮಗ್ರಿ, ತಿಂಡಿ ತಿನಿಸು, ಆಟಿಕೆ ವಸ್ತುಗಳು, ಗೃಹೋಪಯೋಗಿ ವಸ್ತುಗಳು, ಆಲಂಕಾರಿಕ ವಸ್ತುಗಳು, ಹಣ್ಣು, ತಂಪುಪಾನಿಯ ಸೇರಿದಂತೆ ವಿವಿಧ ಬಗೆಯ ಮಳಿಗೆಗಳಲ್ಲಿ ವ್ಯಾಪಾರ ಜೋರಾಗಿ ಕಂಡುಬಂತು.

ಬುರಗು, ಬತಾಸು, ಸಿಹಿ ಮತ್ತು ಕುರುಕಲು ತಿಂಡಿ ತಿನಿಸುಗಳ ವ್ಯಾಪಾರ ಜೋರಾಗಿ ಕಂಡುಬಂತು. ಬಿಸಿಲ ಧಗೆಯಿಂದ ಹೊಟ್ಟೆ ತಣ್ಣನೆ ಮಾಡಲು ಭಕ್ತರು ಐಸ್‌ಕ್ರಿಂ, ಜ್ಯೂಸ್‌ಗೆ ಮೊರೆ ಹೋದರು ಹೀಗಾಗಿ ಅವುಗಳ ಮಾರಾಟಗಾರರ ನಡುವೆ ಪೈಪೋಟಿಯ ವ್ಯಾಪಾರ ನಡೆದಿತ್ತು.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !