‘ಕ್ಯಾಪ್ಟನ್ ಕೊಹ್ಲಿ’ ಕನಸಿನ ಪಯಣ

ಬುಧವಾರ, ಜೂನ್ 19, 2019
26 °C
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಲು ಇಂದು ಲಂಡನ್‌ಗೆ ತೆರಳಲಿರುವ ಭಾರತ ತಂಡ

‘ಕ್ಯಾಪ್ಟನ್ ಕೊಹ್ಲಿ’ ಕನಸಿನ ಪಯಣ

Published:
Updated:

ಮುಂಬೈ: ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್ ತಂಡದ ಐಸಿಸಿ ವಿಶ್ವಕಪ್ ಗೆಲುವಿನ ಪಯಣ ಬುಧವಾರ ಆರಂಭವಾಗಲಿದೆ.

ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳ ನಿರೀಕ್ಷೆಯ ಮೂಟೆಯನ್ನು ಹೊತ್ತು, ಕಂಗಳ ತುಂಬ ಕನಸು ತುಂಬಿಕೊಂಡ ತಂಡವು ಇಲ್ಲಿನ ಸಾಂತಾಕ್ರೂಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಪ್ರಯಾಣ ಬೆಳೆಸಲಿದೆ. 2015ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಉಪನಾಯಕರಾಗಿದ್ದ ವಿರಾಟ್ ಈಗ ‘ಕ್ಯಾಪ್ಟನ್‌ ಕೊಹ್ಲಿ’ ಆಗಿದ್ದಾರೆ.

ಮೂರು ಮಾದರಿಗಳಲ್ಲಿ ಮಿಂಚುತ್ತಿರುವ ಬ್ಯಾಟ್ಸ್‌ಮನ್‌ ಕೊಹ್ಲಿಗೆ ಇದು ಮೂರನೇ ವಿಶ್ವಕಪ್ ಟೂರ್ನಿ. ಕಳೆದ ನಾಲ್ಕು ವರ್ಷಗಳಿಂದ ಅಳೆದು, ಸುರಿದು, ಸೋಸಿ ತೆಗೆದ ಆಟಗಾರರು ಅವರೊಂದಿಗೆ ಇದ್ದಾರೆ.

ಟೂರ್ನಿಯಲ್ಲಿ ಭಾರತವು ತನ್ನ ಮೊದಲ ಪಂದ್ಯವನ್ನು ಜೂನ್ 5ರಂದು ದಕ್ಷಿಣ ಆಫ್ರಿಕಾ ಎದುರು ಆಡಲಿದೆ. 9ರಂದು ಆಸ್ಟ್ರೇಲಿಯಾ, 13ರಿಂದ ನ್ಯೂಜಿಲೆಂಡ್ ಮತ್ತು 16ರಂದು ಪಾಕಿಸ್ತಾನ ತಂಡಗಳ ಎದುರು ಸೆಣಸಲಿದೆ.

‘ಈ ಬಾರಿಯದ್ದು ಬಹಳ ಕಠಿಣ ಸವಾಲಿನ ವಿಶ್ವಕಪ್ ಟೂರ್ನಿಯಾಗಿದೆ. ಎಲ್ಲ ತಂಡಗಳೂ ಉತ್ತಮವಾದ ಆಟಗಾರರನ್ನು ಹೊಂದಿವೆ. 2015ರ ನಂತರ ಅಫ್ಗಾನಿಸ್ತಾನ ತಂಡವು ಸಾಧಿಸಿರುವ ಪ್ರಗತಿಯನ್ನು ನೋಡಿ. ಎಲ್ಲ ತಂಡಗಳಿಗೂ ಸವಾಲೊಡ್ಡಬಲ್ಲ ಶಕ್ತಿ ವೃದ್ಧಿಸಿಕೊಂಡಿದೆ. ರೌಂಡ್‌ ರಾಬಿನ್ ಮಾದರಿಯೂ ಸವಾಲಿನದ್ದಾಗಿದೆ’ ಎಂದು ವಿರಾಟ್ ಕೊಹ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಯಾವುದೇ ತಂಡವೂ ಮೇಲುಗೈ ಸಾಧಿಸಬಹುದು. ಆದರೆ, ಉತ್ತಮ ಗುಣಮಟ್ಟದ ಆಟದ ಮೇಲಷ್ಟೇ ನಮ್ಮ ಗಮನವಿದೆ. ನಮ್ಮಲ್ಲಿರುವ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪಣಕ್ಕೊಡ್ಡುತ್ತೇವೆ. ಪ್ರತಿಯೊಂದು ಪಂದ್ಯವೂ ವಿಭಿನ್ನ ಸವಾಲು ಒಡ್ಡಲಿದೆ’ ಎಂದು ವಿರಾಟ್ ಹೇಳಿದರು.

‘ಪಿಚ್‌ಗಳು ಚೆನ್ನಾಗಿರುವ ನಿರೀಕ್ಷೆ ಇದೆ. ಬೇಸಿಗೆಯಲ್ಲಿ ಅಲ್ಲಿ ಉತ್ತಮ ವಾತಾವರಣ ಇರುತ್ತದೆ.  ಪಂದ್ಯಗಳಲ್ಲಿ ದೊಡ್ಡ ಮೊತ್ತಗಳು ದಾಖಲಾಗುವ ನಿರೀಕ್ಷೆ ಇದೆ. ಸದ್ಯ ಅಲ್ಲಿನಡೆದ ‌ದ್ವಿಪಕ್ಷೀಯ ಸರಣಿ (ಇಂಗ್ಲೆಂಡ್ –ಪಾಕಿಸ್ತಾನ) ಯಲ್ಲಿ ದಾಖಲಾದ ಮೊತ್ತಗಳನ್ನು ನೋಡಿ ಏನೂ ಹೇಳಲಾಗದು. 250 ರಿಂದ 270 ರನ್‌ಗಳ ಮೊತ್ತಗಳೂ ದಾಖಲಾಗಬಹುದು’ ಎಂದು ವಿರಾಟ್ ಅಭಿಪ್ರಾಯಪಟ್ಟರು.

‘ಇಂತಹ ದೀರ್ಘ ಪ್ರವಾಸಕ್ಕೆ ಹೋಗುವಾಗ ಬಹಳಷ್ಟು ಮುನ್ನವೇ ತೆರಳುವುದು ಒಳ್ಳೆಯದು. ಇಂಗ್ಲೆಂಡ್‌ನಲ್ಲಿ ಟೆಸ್ಟ್ ಪಂದ್ಯಗಳನ್ನು ಆಡುವಾಗಿನ ಕ್ಲಿಷ್ಟ ಸವಾಲುಗಳು ಏಕದಿನ ಮಾದರಿ ಆಡುವಾಗ ಇರುವುದಿಲ್ಲ. ಅದರಲ್ಲೂ ಐಸಿಸಿ ಆಯೋಜಿತ ಟೂರ್ನಿಯಲ್ಲಿ ಇನ್ನೂ ಉತ್ತಮವಾದ ಸೌಲಭ್ಯಗಳು ಇರುತ್ತವೆ. ಮನೋಬಲವನ್ನು ಕಾಪಾಡಿಕೊಂಡು ಆಡುವುದೇ ದೊಡ್ಡ ಸವಾಲು’ ಎಂದರು.

‘ನಮ್ಮ ಬೌಲರ್‌ಗಳು 50–50 ಓವರ್‌ಗಳ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡಲು ಸಂಪೂರ್ಣ ಸಿದ್ಧರಾಗಿದ್ದಾರೆ. ಮನೋದೈಹಿಕವಾಗಿ ಉತ್ತಮವಾಗಿದ್ದಾರೆ. ಈಚೆಗೆ ನಡೆದ ಐಪಿಎಲ್‌ನಲ್ಲಿ ನಮ್ಮ ಎಲ್ಲ ಬೌಲರ್‌ಗಳೂ ಆಡಿದ್ದರು. ತಮ್ಮ ಸ್ಪೆಲ್‌ಗಳನ್ನು ಸಂಪೂರ್ಣಗೊಳಿಸಿದ ನಂತರವೂ ಅವರಲ್ಲಿ ದಣಿವು ಕಾಣಿಸಲಿಲ್ಲ. ಫೀಲ್ಡಿಂಗ್ ಕೂಡ ಉತ್ತಮವಾಗಿಯೇ ನಿರ್ವಹಿಸಿದ್ದರು’ ಎಂದು ಭರವಸೆ ವ್ಯಕ್ತಪಡಿಸಿದರು.

ಸಾಯಿಬಾಬಾ ದರ್ಶನ ಪಡೆದ ಶಾಸ್ತ್ರಿ

ವಿಶ್ವಕಪ್ ಟೂರ್ನಿಗೆ ತೆರಳುವ ಮುನ್ನಾದಿನವಾದ ಮಂಗಳವಾರ ಭಾರತ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಅವರು ಶಿರಡಿಗೆ ತೆರಳಿ ಸಾಯಿಬಾಬಾಗೆ ಪೂಜೆ ಸಲ್ಲಿಸಿದರು.

ಬೆಳಿಗ್ಗೆ ಮುಂಬೈನಿಂದ ಖಾಸಗಿ ಹೆಲಿಕಾಫ್ಟರ್‌ನಲ್ಲಿ ತೆರಳಿದ ಅವರೊಂದಿಗೆ ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಆರ್‌ ಶ್ರೀಧರ್ ಅವರಿದ್ದರು. ‌ಮಧ್ಯಾಹ್ನ ಮುಂಬೈಗೆ ಮರಳಿದ ಶಾಸ್ತ್ರಿಯವರು ವಿರಾಟ್ ಜೊತೆಗೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು.

‘ಈ ಟೂರ್ನಿಯಲ್ಲಿ ಭಾರತದ ಗೆಲುವಿನಲ್ಲಿ ಮಹೇಂದ್ರಸಿಂಗ್ ಧೋನಿ ಮಹತ್ವದ ಪಾತ್ರ ವಹಿಸಲಿದ್ದಾರೆ. ಅವರ ಅನುಭವದ ಆಟವು ತಂಡದ ಯಶಸ್ಸಿಗೆ ಕಾರಣವಾಗುವ ಸಾಧ್ಯತೆ ಇದೆ’ ಎಂದರು.

‘ಹೋದ ಕೆಲವು ವರ್ಷಗಳಿಂದ ಅವರು ವಿಕೆಟ್‌ಕೀಪಿಂಗ್‌ನಲ್ಲಿ ಮಾಡುತ್ತಿರುವ ಸಾಧನೆಯು ಅನನ್ಯವಾಗಿದೆ. ಅವರು ಮಾಡುವ ಸ್ಟಂಪಿಂಗ್, ರನ್‌ಔಟ್‌ಗಳು ತಂಡಕ್ಕೆ ಮುನ್ನಡೆ ನೀಡುತ್ತವೆ.  ಅಂಗಣದಲ್ಲಿ ಸಹ ಆಟಗಾರರೊಂದಿಗೆ ಅವರು ನಡೆಸುವ ಸಂವಹನವು ಪ್ರೇರಣಾದಾಯಕವಾಗಿದೆ’ ಎಂದರು.

ಧೋನಿಯವರು ಐಪಿಎಲ್ ಟೂರ್ನಿಯಲ್ಲಿ  416 ರನ್‌ ಗಳಿಸಿದ್ದರು.  ಅವರ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಈ ಬಾರಿ ರನ್ನರ್ಸ್‌ ಅಪ್ ಆಯಿತು. ‌

‘ಹೋದ ಐಪಿಎಲ್‌ನಲ್ಲಿ ಅವರ ಬ್ಯಾಟಿಂಗ್  ಆಕರ್ಷಕವಾಗಿತ್ತು. ಅವರ ಪಾದಚಲನೆಯು ಚುರುಕುತನ ಮತ್ತು ಶಿಸ್ತಿನಿಂದ ಕೂಡಿತ್ತು. ಅವರ ಹೊಡೆತಗಳು ಆತ್ಮವಿಶ್ವಾಸಭರಿತವಾಗಿದ್ದವು’ ಎಂದು ಶಾಸ್ತ್ರಿ ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !