ಗುರುವಾರ , ನವೆಂಬರ್ 14, 2019
19 °C

ಶಾಂತಿ ಕದಡದಂತೆ ಕಟ್ಟೆಚ್ಚರ ವಹಿಸಲು ಕೇಂದ್ರ ಗೃಹ ಇಲಾಖೆ ಸೂಚನೆ

Published:
Updated:
Prajavani

ನವದೆಹಲಿ: ಲೋಕಸಭಾ ಚುನಾವಣೆಯ ಅಂತಿಮ ಹಂತದ ಪ್ರಕ್ರಿಯೆ ದಿನವಾದ ಮತ ಎಣಿಕೆ ದಿನ ಕಾನೂನು, ಸುವ್ಯವಸ್ಥೆ ಬಗ್ಗೆ ತೀವ್ರ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಗೃಹ ಸಚಿವಾಲಯ ದೇಶದ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ.

ಕೆಲ ಸಮಾಜಘಾತಕ ಶಕ್ತಿಗಳು ಶಾಂತಿ ಕದಡುವ ಸೂಚನೆ ಇದ್ದು, ಈ ಕುರಿತು ಪೊಲೀಸರು ಬಿಗಿ ಭದ್ರತೆ ಕೈಗೊಳ್ಳುವಂತೆ ತಿಳಿಸಲಾಗಿದೆ. ಜನರ ಪವಿತ್ರವಾದ ಮತಗಳನ್ನು ಕಳವು ಮಾಡಲು ಪ್ರಯತ್ನಿಸುವುದು ಕಂಡು ಬಂದಲ್ಲಿ ಬಿಹಾರದಲ್ಲಿ ರಕ್ತಪಾತವಾಗುತ್ತದೆ ಎಂದು ಕೇಂದ್ರದ ಮಾಜಿ ಸಚಿವ ಉಪೇಂದ್ರ ಕುಶ್ವಾಹ ಹೇಳಿಕೆ ನೀಡಿದ್ದರು. ಕುಶ್ವಾಹ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್, ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ ಎಂದು ಹೇಳಿದ್ದರು. ಈ ಹೇಳಿಕೆಗಳ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ.

ಯಾರದ್ದೇ ಹೇಳಿಕೆಗಳನ್ನು ಪ್ರಸ್ತಾಪಿಸದ ಗೃಹ ಇಲಾಖೆ ಬಿಹಾರ ಸೇರಿದಂತೆ ಉತ್ತರ ರಾಜ್ಯಗಳು, ದಕ್ಷಿಣ ಭಾರತದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮಾಹಿತಿ ನೀಡುತ್ತಿದ್ದಂತೆ ಎಲ್ಲಾ ರಾಜ್ಯಗಳ ಗೃಹ ಇಲಾಖೆಗಳು ಮತಎಣಿಕೆ ಕೇಂದ್ರಗಳೂ ಸೇರಿದಂತೆ ಸೂಕ್ಷ್ಮಪ್ರದೇಶಗಳಲ್ಲಿ ಬಿಗಿ ಭದ್ರತೆ ಕೈಗೊಂಡಿವೆ.‌

ಮತಎಣಿಕೆ ದಿನ ರಾಷ್ಟ್ರದ ಎಲ್ಲಾ ಪಕ್ಷಗಳ ಮುಖಂಡರು, ಹಿರಿಯ ರಾಜಕಾರಣಿಗಳು ನಾನಾ ಬಗೆಯ ಹೇಳಿಕೆಗಳನ್ನು ನೀಡುವುದು, ಈ ಹೇಳಿಕೆಗಳಿಂದ ಪ್ರೇರೇಪಿತರಾಗುವ ಜನರು ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರಬಹುದು. ಅಲ್ಲದೆ, ಎಲ್ಲಾ ರಾಜ್ಯಗಳಲ್ಲಿ ಇರಿಸಲಾಗಿರುವ ಇವಿಎಂ ಯಂತ್ರಗಳ ಕೊಠಡಿಗಳಿಗೆ ಸೂಕ್ತ ಭದ್ರತೆ ನೀಡುವಂತೆ ತಿಳಿಸಲಾಗಿದೆ.

ಬಿಜೆಪಿ ಪಕ್ಷದ ಕುರಿತು ಚುನಾವಣಾ ಆಯೋಗ ಮೃದು ಧೋರಣೆ ಅನುಸರಿಸುತ್ತಿದೆ ಎಂದು ಆಯೋಗದ ವಿರುದ್ಧ ವಿರೋಧ ಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿದ್ದವು. ಅಲ್ಲದೆ, ಮತಯಂತ್ರಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋ ಕುರಿತು ಸಾರ್ವಜನಿಕರು ಹಾಗೂ ರಾಜಕಾರಣಿಗಳು ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.  ಈ ಎಲ್ಲಾ ಘಟನೆಗಳಿಂದಾಗಿ ಕೇಂದ್ರ ಗೃಹಇಲಾಖೆ ಮೇಲಿನಂತೆ ಎಚ್ಚರಿಕೆ ನೀಡಿದೆ.

ಪ್ರತಿಕ್ರಿಯಿಸಿ (+)