ಪ್ರಧಾನಿ ಬದುಕಿನ ಕೌಶಲರಹಿತ ಸಿನಿಮಾ

ಸೋಮವಾರ, ಜೂನ್ 17, 2019
29 °C

ಪ್ರಧಾನಿ ಬದುಕಿನ ಕೌಶಲರಹಿತ ಸಿನಿಮಾ

Published:
Updated:
Prajavani

ಚಿತ್ರ: ಪಿಎಂ ನರೇಂದ್ರ ಮೋದಿ (ಹಿಂದಿ)
ನಿರ್ಮಾಣ: ಸುರೇಶ್‌ ಒಬೆರಾಯ್, ಸಂದೀಪ್‌ ಸಿಂಗ್, ಆನಂದ್‌ ಪಂಡಿತ್‌, ಆಚಾರ್ಯ ಮನಿಷ್‌, ಜಫರ್‌ ಮೆಹೆದಿ
ನಿರ್ದೇಶನ: ಒಮಂಗ್ ಕುಮಾರ್
ತಾರಾಗಣ: ವಿವೇಕ್‌ ಒಬೆರಾಯ್, ಮನೋಜ್‌ ಜೋಷಿ, ಜರೀನಾ ವಹಾಬ್, ರಾಜೇಂದ್ರ ಗುಪ್ತ, ಬೊಮನ್ ಇರಾನಿ

ಗಮನಾರ್ಹ ವ್ಯಕ್ತಿಗಳ ಬದುಕಿನ ಕಥೆಗಳನ್ನು ಸಿನಿಮಾ ಮಾಡುವಾಗ ಎರಡು ಅಂಶಗಳು ತುಂಬಾ ಮುಖ್ಯವಾಗುತ್ತವೆ. ಒಂದು–ಚಿತ್ರಕಥೆ ಕಟ್ಟುವ ಕ್ರಮ ಹಾಗೂ ಅದು ತಿಳಿದಿರುವ ವ್ಯಕ್ತಿಯನ್ನೇ ಹೇಗೆ ಭಿನ್ನವಾಗಿ ಪರಿಚಯಿಸುತ್ತದೆ ಎನ್ನುವುದು. ಇನ್ನೊಂದು–ದರ್ಶನ ಕೌಶಲ. ‘ಪಿಎಂ ನರೇಂದ್ರ ಮೋದಿ’ ಸಿನಿಮಾದಲ್ಲಿ ಇವೆರಡೂ ಇಲ್ಲ.

‘ಮೇರಿ ಕೋಮ್’ ಹಾಗೂ ‘ಸರಬ್ಜಿತ್‌’ ತರಹದ ಮಾನವೀಯ ಕಥಾನಕಗಳ ಸಿನಿಮಾ ಮಾಡಿ ಗೆದ್ದಿದ್ದ ನಿರ್ದೇಶಕ ಒಮಂಗ್‌ ಕುಮಾರ್‌. ಈ ಚಲನಚಿತ್ರದ ಪ್ರಾರಂಭದಲ್ಲೇ ಉದ್ದದ ಒಕ್ಕಣೆಯೊಂದನ್ನು ನಿರ್ಮಾಪಕರಲ್ಲಿ ಒಬ್ಬರಾದ ಸುರೇಶ್‌ ಒಬೆರಾಯ್‌ ಕಂಠ ಓದಿ ಹೇಳುತ್ತದೆ. ಅದರಲ್ಲಿ ‘ಇದು ವ್ಯಕ್ತಿಯೊಬ್ಬನ ಕಥೆಯಲ್ಲ, ದೇಶದ ಕಥೆ’ ಎಂಬ ಮಾತು ಬರುತ್ತದೆ. ‘ಸಿನಿಮಾ ಆಗಿಲು ಬೇಕಾದ ಕಾಲ್ಪನಿಕ ಅಂಶಗಳನ್ನೂ ಸೇರಿಸಲಾಗಿದೆ. ಐತಿಹಾಸಿಕವಾಗಿ ಅನೇಕ ಸಂಗತಿಗಳು ಸತ್ಯವಾಗಿರಲೇಬೇಕು ಎಂದೇನೂ ಇಲ್ಲ’ ಎಂಬ ಇನ್ನೊಂದು ನುಡಿ ಚಿತ್ರದ ಉದ್ದೇಶ ಹಾಗೂ ಅದಕ್ಕೆ ಇರುವ ಮಿತಿಯನ್ನು ಮೊದಲೇ ದಾಟಿಸುತ್ತದೆ.

ಚಹಾ ಮಾರುವ ಹುಡುಗನೊಬ್ಬ ಪ್ರಧಾನಿ ಗಾದಿಯವರೆಗೆ ಸಾಗುವುದು ಸಿನಿಮಾದ ‘ಒನ್‌ಲೈನರ್‌’. ಇದನ್ನು ಕಾಡುವ ಪ್ರೇರಣಾಕಥನವನ್ನಾಗಿ ಹೆಣೆಯುವ ಸಾಧ್ಯತೆ ಇತ್ತು. ಆದರೆ, ನರೇಂದ್ರ ಮೋದಿ ಅವರ ಬಾಲ್ಯದ ದೃಶ್ಯಗಳನ್ನು ಹತ್ತು ನಿಮಿಷಗಳಿಗಷ್ಟೇ ಸೀಮಿತಗೊಳಿಸುವ ನಿರ್ದೇಶಕರು, ಆಮೇಲೆ ಅವರ ‘ಉಘೇ’ ಹೇಳಲಷ್ಟೇ ಪೂರಕವಾದ ಘಟನೆಗಳನ್ನು ಕಲ್ಪನೆಗಳ ಮಸಾಲೆ ಬೆರೆಸಿ ಹೇಳತೊಡಗುತ್ತಾರೆ. ಮೋದಿ ಅವರನ್ನು ಆರ್‌ಎಸ್‌ಎಸ್‌ ಗುರುತಿಸುವುದು, ಕಾಶ್ಮೀರಕ್ಕೆ ಹೋಗಿ ಆತಂಕದ ವಾತಾವರಣದ ನಡುವೆಯೂ ರಾಷ್ಟ್ರಧ್ವಜವನ್ನು ಮೋದಿ ಗಾಳಿಯಲ್ಲಿ ಆಡಿಸುವುದು, ಸನ್ಯಾಸಿ ಆಗುವುದಾಗಿ ಹೇಳಿ ಅವರು ಹಿಮಾಲಯಕ್ಕೆ ಹೋಗುವುದು, ದೇಶಸೇವೆಯ ಉಮೇದಿನಿಂದ ಮತ್ತೆ ಗುಜರಾತ್‌ಗೆ ಮರಳುವುದು, ರಥಯಾತ್ರೆಯ ರೂವಾರಿಯಾಗುವುದು, ಗುಜರಾತ್‌ನಲ್ಲಿ ನಾಲೆ ಮಾಡಲು ಖುದ್ದು ಗುಂಡಿ ತೋಡಿ ಅನೇಕರಿಗೆ ಪ್ರೇರಣೆಯಾಗುವುದು, ಅದನ್ನೇ ಮತಗಳನ್ನಾಗಿ ಪರಿವರ್ತನೆ ಮಾಡಿಸುವುದು... ಹೀಗೆ ಸಿನಿಮಾದ ಮೊದಲರ್ಧದಲ್ಲಿ ಬಿಡಿ ಬಿಡಿಯಾಗಿ ಮೋದಿ ಬದುಕಿನ ಪಲ್ಲಟಗಳನ್ನು ನಿರ್ದೇಶಕರು ತೋರಿಸಿದ್ದಾರೆ.

ಗುಜರಾತ್‌ ಮುಖ್ಯಮಂತ್ರಿ ಆದಮೇಲೆ ಗೋಧ್ರಾ ಹತ್ಯಾಕಾಂಡ ನಡೆಯುವುದು ಕಾಂಗ್ರೆಸ್‌ ಬೆಂಬಲಿತ ಉದ್ಯಮಿ ಹಾಗೂ ಒಂದು ಮಾಧ್ಯಮದ ಪಿತೂರಿಯಿಂದ ಎಂದು ಚಿತ್ರ ಬಿಂಬಿಸುತ್ತದೆ. ಮೋದಿ ಎಲ್ಲ ಧರ್ಮೀಯರನ್ನೂ ಏಕರೀತಿಯಲ್ಲಿ ನೋಡುವವರು ಎಂದು ಪ್ರತಿಪಾದಿಸಲು ಕೆಲವು ಭಾವುಕ ದೃಶ್ಯಗಳನ್ನು ಹೆಣೆಯಲಾಗಿದ್ದರೂ ಅವು ಅತಿ ನಾಟಕೀಯ ಎನಿಸಿಬಿಡುತ್ತವೆ. ಗುಜರಾತ್‌ ಮಾದರಿಯ ಅಭಿವೃದ್ಧಿಯನ್ನು ತೋರಿಸಲು ಬಳಸಿರುವ ದೃಶ್ಯಗಳಲ್ಲೂ ಕಸುವಿಲ್ಲ. ಮೋದಿ ಅವರ ಎಷ್ಟೋ ಭಾಷಣಗಳಲ್ಲಿ ಇರುವ ರಾಜಕೀಯ ಜಾಣ್ಮೆ, ತಂತ್ರಗಾರಿಕೆ ಕೂಡ ಸಿನಿಮಾದಲ್ಲಿ ಕಾಣುವುದಿಲ್ಲ.

ಅನಿರುದ್ಧ್‌ ಚಾವ್ಲಾ ಜತೆಗೂಡಿ ಖುದ್ದು ವಿವೇಕ್‌ ಒಬೆರಾಯ್ ದುರ್ಬಲವಾದ ಚಿತ್ರಕಥೆಯನ್ನು ಬರೆದಿದ್ದಾರೆ. ಹಿನ್ನೆಲೆ ಸಂಗೀತದಲ್ಲಿ ಎ.ಆರ್. ರೆಹಮಾನ್‌ ಅಸ್ಮಿತೆಗಾಗಿಯೂ ಹುಡುಕಬೇಕು.

ವಿವೇಕ್‌ ಒಬೆರಾಯ್‌ ಎಲ್ಲಿಯೂ ಮೋದಿ ಅವರನ್ನು ಅನುಕರಿಸಲು ಹೋಗಿಲ್ಲ. ಹಾಗಿದ್ದೂ ಸಹಜವಾಗಿಯೇ ಅವರೊಡನೆ ಹೋಲಿಸಿದರೆ, ಇವರು ಮಂಕೆನಿಸುತ್ತಾರೆ. ಮೋದಿ ತಾಯಿಯ ಪಾತ್ರದಲ್ಲಿ ಜರೀನಾ ವಹಾಬ್‌ ಚೆನ್ನಾಗಿ ಅಭಿನಯಿಸಿದ್ದಾರೆ. ಅವರ ಪಾತ್ರಕ್ಕೆ ಇನ್ನಷ್ಟು ಆದ್ಯತೆ ಸಿಗಬೇಕಿತ್ತು. ಅಮಿತ್‌ ಷಾ ಪಾತ್ರದಲ್ಲಿ ಮನೋಜ್‌ ಜೋಷಿ ತಣ್ಣಗೆ ಕಾಣುವುದು ಅಚ್ಚರಿ. ರಾಜಕೀಯ ವಲಯದಲ್ಲಿ ಚಾಣಕ್ಯ ಎಂದೇ ಅಮಿತ್‌ ಷಾ ಬಿಂಬಿತರಾಗಿರುವುದರಿಂದ ಚಿತ್ರದಲ್ಲಿ ಆ ಪಾತ್ರಕ್ಕೂ ಅಂಥ ಕಸುವು ತುಂಬಬೇಕಿತ್ತು. ಸುನಿತಾ ರಾಡಿಯಾ ಸಿನಿಮಾಟೊಗ್ರಫಿಯಲ್ಲಿ ವೃತ್ತಿಪರತೆ ಇದೆ.

ಒಮಂಗ್‌ ಕುಮಾರ್‌ ಮೂಲತಃ ಕಲಾ ನಿರ್ದೇಶಕರು. ಹೀಗಾಗಿ ದೃಶ್ಯಗಳನ್ನು ಕಣ್ಸೆಳೆಯುವಂತೆ ಮಾಡಬಲ್ಲ ಜಾಣ್ಮೆ ಅವರಿಗಿದೆ. ಆದರೆ, ಈ ಹೊತ್ತಿನಲ್ಲಿ ಇಡೀ ವಿಶ್ವದಲ್ಲೇ ಸುದ್ದಿಯಲ್ಲಿರುವ ಮೋದಿ ಅವರ ಬದುಕಿನ ಇನ್ನಷ್ಟು ಪುಟಗಳನ್ನು ಕಾಡುವಂತೆ ಪೋಣಿಸಬಹುದಾಗಿದ್ದ ದೊಡ್ಡ ಸಾಧ್ಯತೆಗೆ ಅವರು ಯಾಕೋ ಬೆನ್ನುಮಾಡಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 3

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !