ಫಲ ನೀಡುವುದೇ ಯೋಯೊ ಟೆಸ್ಟ್?

ಗುರುವಾರ , ಜೂನ್ 27, 2019
25 °C

ಫಲ ನೀಡುವುದೇ ಯೋಯೊ ಟೆಸ್ಟ್?

Published:
Updated:
Prajavani

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಸುರೇಶ್ ರೈನಾ ಮತ್ತು ಅಂಬಟಿ ರಾಯುಡು ಮಾಡಿದ ಸಾಧನೆಯನ್ನು ಯಾರೂ ಮರೆಯಲಾರರು. 17 ಪಂದ್ಯಗಳಲ್ಲಿ 383 ರನ್ ಕಲೆ ಹಾಕಿದ್ದ ರೈನಾ ಹೆಚ್ಚು ರನ್ ಪಡೆದವರ ಪಟ್ಟಿಯಲ್ಲಿ 20ನೇ ಸ್ಥಾನ ಗಳಿಸಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರ ಪೈಕಿ ನಾಲ್ಕನೇ ಸ್ಥಾನದಲ್ಲಿದ್ದರು.

ಅಂಬಟಿ ರಾಯುಡು ಕೂಡ 17 ಪಂದ್ಯಗಳನ್ನು ಆಡಿದ್ದು 282 ರನ್ ಗಳಿಸಿದ್ದರು. ತಂಡ ಆಡಿದ ಎಲ್ಲ ಪಂದ್ಯಗಳಲ್ಲೂ ಕಣಕ್ಕೆ ಇಳಿದ ಇವರಿಬ್ಬರ ಫಿಟ್‌ನೆಸ್ ಬಗ್ಗೆ ಕೆಲವರಿಗಾದರೂ ಅಚ್ಚರಿ ಮೂಡಿರಬಹುದು. ಕಾರಣವಿಷ್ಟೆ; ಕಳೆದ ವರ್ಷ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ಎದುರಿನ ಸರಣಿಗಳ ಸಂದರ್ಭದಲ್ಲಿ ಕ್ರಮವಾಗಿ ಸುರೇಶ್ ರೈನಾ ಮತ್ತು ಅಂಬಟಿ ರಾಯುಡು ಅವರನ್ನು ಫಿಟ್‌ನೆಸ್ ಹೆಸರಿನಲ್ಲಿ ಕೈಬಿಡಲಾಗಿತ್ತು. ಆದರೆ ಐಪಿಎಲ್‌ನಲ್ಲಿ ಅವರು ಫಿಟ್ ಆಗಿ ಆಡಿದ್ದಾದರೂ ಹೇಗೆ…?

ಈ ಪ್ರಶ್ನೆಯು ಯೋಯೊ ಟೆಸ್ಟ್ ಕುರಿತು ಸಂದೇಹ ಏಳುವಂತೆ ಮಾಡಿದೆ. ಇದೀಗ ವಿಶ್ವಕಪ್ ಟೂರ್ನಿ ಸಮೀಪಿಸುತ್ತಿರುವಾಗ ಮತ್ತೆ ಯೋಯೊ ಟೆಸ್ಟ್ ಬಗ್ಗೆ ಮಾತು ಕೇಳಿಬರುತ್ತಿದೆ. ಕ್ರಿಕೆಟ್‌ನಂಥ ಕೌಶಲ ಮತ್ತು ಚಾಕಚಕ್ಯತೆಯ ಆಟದಲ್ಲಿ ಯೋಯೊ ಟೆಸ್ಟ್ ಅಗತ್ಯವಿದೆಯೇ ಎಂಬ ಪ್ರಶ್ನೆ ಅನೇಕ ಬಾರಿ ಚರ್ಚೆಗೆ ಬಂದಿದೆ. ಆದರೆ ಫಿಟ್‌ನೆಸ್‌ಗೆ ಆದ್ಯತೆ ನೀಡುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಜೊತೆ ‘ಫಿಟ್’ ಇಲ್ಲದವರು ಆಡುವುದಾದರೂ ಹೇಗೆ?

ಭಾರತ ತಂಡಕ್ಕೆ ಹೇಗೆ ಬಂತು…? ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಯೋಯೊ ಟೆಸ್ಟ್ ಅಳವಡಿಸಿದ್ದು 2016ರ ಮಧ್ಯ ಭಾಗದಲ್ಲಿ. ತಂಡದ ಸ್ಟ್ರೆಂಥ್ ಆ್ಯಂಡ್ ಕಂಡೀಷನಿಂಗ್ ಕೋಚ್ ಶಂಕರ್ ಬಸು ಇದರ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಿದ್ದರು. ಇದು ಜಾರಿಗೆ ಬಂದ ನಂತರ ಮೊದಲ ಬಾರಿ ಸುದ್ದಿಯಾದವರು ರೈನಾ. ಭಾರತದಲ್ಲೇ ನಡೆದಿದ್ದ ನ್ಯೂಜಿಲೆಂಡ್ ಎದುರಿನ ಸರಣಿಗೆ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಯೋಯೊ ಟೆಸ್ಟ್‌ನಲ್ಲಿ ನಿಗದಿತ ಮಾನದಂಡ ತಲುಪಲು ವಿಫಲವಾದ ಕಾರಣ ಕೈಬಿಡಲಾಗಿತ್ತು.

ಯೋ ಯೊ ಟೆಸ್ಟ್ ಎಂದರೇನು?

ಆಟಗಾರನ ದೈಹಿಕ ಕ್ಷಮತೆಯನ್ನು ಪರೀಕ್ಷಿಸಲು ಇದನ್ನು ಬಳಸಲಾಗುತ್ತದೆ. 20 ಮೀಟರ್ಸ್ ಅಂತರದಲ್ಲಿ ಇರಿಸುವ ಕೋನ್‌ಗಳ ಮಧ್ಯೆ ಓಡಬೇಕಾಗುತ್ತದೆ. ಎರಡು ಬೀಪ್ ಸದ್ದಿನ ನಡುವೆ ನಿರ್ದಿಷ್ಟ ಅಂತರವನ್ನು ತಲುಪಬೇಕು. ಸಮಯ ಕಳೆದಂತೆ ಓಟದ ವೇಗವನ್ನು ಹೆಚ್ಚಿಸಬೇಕಾಗುತ್ತದೆ. ಇದು, ಬಹುತೇಕ ಥ್ರೆಡ್ ಮಿಲ್ ಟೆಸ್ಟ್‌ನಲ್ಲಿ ದೈಹಿಕ ಸಾಮರ್ಥ್ಯವನ್ನು ಅಳೆದಂತೆಯೇ. ಆದರೆ ಕ್ರೀಡಾಪಟುಗಳ ಸಾಮರ್ಥ್ಯ ಅಳೆಯಲು ಹೆಚ್ಚು ಉಪಯೋಗಿ.

ಕ್ರಿಕೆಟ್‌ನಲ್ಲಿ ಎರಡು ಎಸೆತಗಳ ನಡುವೆ ಬಹಳಷ್ಟು ಕ್ರಿಯೆಗಳು ನಡೆಯುತ್ತವೆ. ಬೌಲಿಂಗ್, ಬ್ಯಾಟಿಂಗ್, ಥ್ರೋ, ರನ್ ಇತ್ಯಾದಿಗಳಿಗೆ ಆಟಗಾರ ಸಜ್ಜಾಗಬೇಕಾಗುತ್ತದೆ. ಇದಕ್ಕೆ ದೈಹಿಕ ಕ್ಷಮತೆ ಅತ್ಯಗತ್ಯ. ಹೀಗಾಗಿ ಕ್ರಿಕೆಟ್‌ನಲ್ಲಿ ಈ ಟೆಸ್ಟ್ ಅಗತ್ಯ ಎಂಬುದು ತಜ್ಞರ ಅಭಿಪ್ರಾಯ.

ಭಾರತ ತಂಡದಲ್ಲಿ ಆದ್ಯತೆ: ಭಾರತ ಕ್ರಿಕೆಟ್ ತಂಡದಲ್ಲಿ ಯೋಯೊ ಟೆಸ್ಟ್‌ಗೆ ಹೆಚ್ಚು ಒತ್ತು ನೀಡಲಾಗುತ್ತದೆ. 2016ರ ಜೂನ್‌ನಲ್ಲಿ ತಂಡದ ಕೋಚ್ ಆಗಿ ನೇಮಕಗೊಂಡ ಅನಿಲ್ ಕುಂಬ್ಳೆ ಅವರು ಫಿಟ್‌ನೆಸ್‌ಗೆ ಆದ್ಯತೆ ನೀಡಿದ್ದರು. ನಾಯಕ ವಿರಾಟ್ ಕೊಹ್ಲಿ ಹಾಗೂ ಹಿರಿಯ ಆಟಗಾರ ಮಹೇಂದ್ರ ಸಿಂಗ್ ಧೋನಿ ಕೂಡ ಫಿಟ್‌ನೆಸ್‌ ಮುಖ್ಯ ಎಂದು ವಾದಿಸಿದ್ದರು. ಹೀಗಾಗಿ ಟ್ರೇನರ್ ಶಂಕರ್‌ ಬಸು ಕಾರ್ಯ ಸುಲಭವಾಯಿತು.

ಯುವ ಸ್ಪಿನ್ನರ್‌ ವಾಷಿಂಗ್ಟನ್ ಸುಂದರ್ ಅವರಂಥ ಆಟಗಾರರು ಕೂಡ ಈ ಪರೀಕ್ಷೆಯ ಬಿಸಿ ಅನುಭವಿಸಿದ್ದಾರೆ. ಲಖನೌದಲ್ಲಿ ದುಲೀಪ್ ಟ್ರೋಫಿ ಪಂದ್ಯ ಆಡುತ್ತಿದ್ದ ಅವರನ್ನು ನ್ಯೂಜಿಲೆಂಡ್ ಎದುರಿನ ಸರಣಿಗೆ ಆಯ್ಕೆ ಮಾಡಲು ಬಯಸಿದ್ದ ತಂಡದ ಆಡಳಿತ ಟೆಸ್ಟ್‌ಗೆ ಒಳಗಾಗುವಂತೆ ಹೇಳಿ ಬೆಂಗಳೂರಿಗೆ ತೆರಳಲು ಸೂಚಿಸಿತ್ತು. ಟೆಸ್ಟ್‌ನಲ್ಲಿ ಅವರು ನಿಗದಿತ ಮಟ್ಟ ತಲುಪಲು ವಿಫಲರಾಗಿದ್ದರು.

ಪಾಕಿಸ್ತಾನವೂ ಈ ಟೆಸ್ಟ್‌ಗೆ ಮಹತ್ವ ನೀಡಿದೆ. ಆದರೆ ಹೆಚ್ಚು ಸಮರ್ಥವಾಗಿ ಇದನ್ನು ಬಳಸಿರುವುದು ನ್ಯೂಜಿಲೆಂಡ್ ತಂಡ. ಅಲ್ಲಿನ ಆಟಗಾರರು ಸದಾ ಫಿಟ್ ಆಗಿರಲು ಇದು ತುಂಬ ನೆರವಾಗಿದೆ ಎಂದು ಹೇಳಲಾಗುತ್ತಿದೆ. ದೇಶಿ ಕ್ರಿಕೆಟ್‌ನಲ್ಲೂ ನ್ಯೂಜಿಲೆಂಡ್ ಯೋಯೊವನ್ನು ಪರಿಣಾಮಕಾರಿಯಾಗಿ ಬಳಸುತ್ತಿದೆ.

ವಿಶ್ವಕಪ್ ಟೂರ್ನಿಗೆ ಸಜ್ಜಾಗಿರುವ ರಾಷ್ಟ್ರಗಳು ಈಗ ಅತ್ಯಂತ ಫಿಟ್ ಆಗಿರುವ ಆಟಗಾರರನ್ನು ಒಳಗೊಂಡ ತಂಡ ಕಟ್ಟಿವೆ. ಅವರ ಪೈಕಿ ಯಾರು ಸಫಲರಾಗುತ್ತಾರೆ ಎಂಬುದು ಕುತೂಹಲದ ವಿಷಯ. ಕಪ್ ಗೆಲ್ಲುವವರು ಯಾರು…? ಫಿಟ್ ಆಗಿರುವ ತಂಡವೇ ಅಥವಾ ತಂತ್ರಗಾರಿಕೆ ಇರುವ ತಂಡವೇ…?

ಉತ್ತರಕ್ಕೆ ಕಾಯಬೇಕಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !