ಮೋದಿ 2.0: ಮುಂದಿನ ದಾರಿ...

ಗುರುವಾರ , ಜೂನ್ 27, 2019
26 °C
ಬಿಜೆಪಿಯಿಂದ ಜನ ನಿರೀಕ್ಷಿಸುವುದು, ವಿರೋಧ ಪಕ್ಷಗಳಿಂದ ಬಯಸುವುದು ಏನನ್ನು?

ಮೋದಿ 2.0: ಮುಂದಿನ ದಾರಿ...

Published:
Updated:
Prajavani

ಲೋಕಸಭಾ ಚುನಾವಣೆಯ ಫಲಿತಾಂಶವು ಬಿಜೆಪಿ ಹಾಗೂ ಕಾಂಗ್ರೆಸ್ಸನ್ನು, ಅವುಗಳ ಬೆಂಬಲಿಗರು ಮತ್ತು ವಿರೋಧಿಗಳನ್ನು ಆಶ್ಚರ್ಯಕ್ಕೆ, ಆಘಾತಕ್ಕೆ ನೂಕಿದೆ. ಒಂದು ಕಡೆಯವರು ತಮಗೆ ಸಿಕ್ಕ ಭಾರಿ ಪ್ರಮಾಣದ ಗೆಲುವಿನಿಂದ ಅಚ್ಚರಿಗೆ ಒಳಗಾಗಿದ್ದರೆ, ಇನ್ನೊಂದು ಕಡೆಯವರು ತಾವು ಎದುರಿಸಿದ ಸೋಲಿನಿಂದಾಗಿ ವಿಚಲಿತರಾಗಿದ್ದಾರೆ.

ಬಿಜೆಪಿಗೆ ಬಹುಮತ ಸಿಗುವುದಿಲ್ಲ ಅಥವಾ ಸಿಕ್ಕರೂ ತೀರಾ ಸಣ್ಣ ಪ್ರಮಾಣದ ಬಹುಮತ ಸಿಗಬಹುದು ಎಂದು ಬಹುತೇಕ ವಿಶ್ಲೇಷಕರು, ಮತಗಟ್ಟೆ ಸಮೀಕ್ಷೆಗಳು ಬಹಿರಂಗ ಆಗುವವರೆಗೂ ಹೇಳುತ್ತಿದ್ದರು. ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವೊಂದು ಸರ್ಕಾರ ರಚನೆಗೆ ಹಕ್ಕು ಮಂಡಿಸಬಹುದು ಎಂದು ಹೇಳಿದವರೂ ಇದ್ದರು. ಇನ್ನು ಕೆಲವರು ಅತಂತ್ರ ಸಂಸತ್ ರಚನೆಯಾಗುವ ಮಾತನಾಡಿದ್ದರು.

ದೇಶದಲ್ಲಿ ಬಿಜೆಪಿ ಪರ ಅಲೆಯನ್ನು ಸೃಷ್ಟಿಸಿದ್ದು ಪಾಕಿಸ್ತಾನದ ಬಾಲಾಕೋಟ್‌ ಮೇಲೆ ನಡೆಸಿದ ವಾಯು ದಾಳಿಯೇ? ಹಿಂದೂ ರಾಷ್ಟ್ರವನ್ನು ನಿರ್ಮಿಸುವುದಾಗಿ ಬಹಿರಂಗವಾಗಿ ಹೇಳಿದ್ದು ಅಥವಾ ಮುಸ್ಲಿಮರ ವಿರುದ್ಧ ಹಿಂದೂ ಮತಗಳನ್ನು ಧ್ರುವೀಕರಿಸಿದ್ದು ಕಾರಣವೇ? ಹತ್ತೆಂಟು ಅಡ್ಡಿಗಳನ್ನು ಮೀರಿ, ಈಗ ನಿಸ್ವಾರ್ಥವಾಗಿ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿರುವ, ಹಿಂದುಳಿದ ಜಾತಿಗೆ ಸೇರಿದ ವ್ಯಕ್ತಿ ತಾವು ಎಂದು ನರೇಂದ್ರ ಮೋದಿ ಅವರು ನಡೆಸಿದ ಪ್ರಚಾರ ಕಾರಣವೇ? ಅಥವಾ, ಇದಕ್ಕೆ ಕಾರಣ ಗಟ್ಟಿ ನಾಯಕತ್ವ ಇಲ್ಲದ ಕಾಂಗ್ರೆಸ್ ಪಕ್ಷವೇ?

ಮುಂದೆ ಆಗಲಿರುವುದನ್ನು ಹೇಳುವುದಕ್ಕಿಂತ ಹಿಂದೆ ಆಗಿರುವುದನ್ನು ವಿಶ್ಲೇಷಿಸುವುದು ಚುನಾವಣಾ ತಜ್ಞರಿಗೂ ಜ್ಯೋತಿಷಿಗಳಿಗೂ ಸುಲಭದ ಕೆಲಸ. ಬಿಜೆಪಿ ಶೂನ್ಯ ಸಾಧನೆ ತೋರಿರುವ ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡಿನಲ್ಲಿ ಮೋದಿ ಅವರ ಮಾಯೆ ಏಕೆ ಕೆಲಸ ಮಾಡಲಿಲ್ಲ? ಶಬರಿಮಲೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಬಂದ ನಂತರ ಕೇರಳದಲ್ಲಿ ಹಿಂದೂ ಮತಗಳ ಧ್ರುವೀಕರಣಕ್ಕೆ ದೊಡ್ಡ ಅವಕಾಶವಿತ್ತು. ಪರಿಸ್ಥಿತಿಯ ಲಾಭ ಪಡೆಯಲು ಬಿಜೆಪಿ ಯತ್ನಿಸಿದ್ದು ನಿಜ. ದೇಶದ ಅತ್ಯುನ್ನತ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯುವ ಪ್ರಮಾಣ ಸ್ವೀಕರಿಸಿರುವ ಆಡಳಿತಾರೂಢ ಪಕ್ಷ ತಾನು ಎಂಬುದನ್ನೂ ಮರೆತು ಬಿಜೆಪಿ ಅಲ್ಲಿ ಹಿಂಸಾತ್ಮಕ ಪ್ರತಿ
ಭಟನೆಯನ್ನು ಪ್ರೋತ್ಸಾಹಿಸಿತು. ಆದರೆ, ಕೇರಳವು ಅತ್ಯಂತ ಧಾರ್ಮಿಕ ರಾಜ್ಯವಾದರೂ ಧರ್ಮ ಮತ್ತು ರಾಜಕೀಯದ ನಡುವೆ ಸೂಕ್ಷ್ಮ ಸಮತೋಲನ ಸಾಧಿಸಿತು. ಬಿಜೆಪಿಗೆ ಹೆಜ್ಜೆಯೂರಲು ಅವಕಾಶ ಕೊಡಲಿಲ್ಲ.

ತಮಿಳುನಾಡು ರಾಜ್ಯ ಎಲ್ಲ ತರ್ಕಗಳಿಗೂ ಮೀರಿ ನಿಂತುಕೊಂಡಿತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಎಐಎಡಿಎಂಕೆ ಜೊತೆ ಮೊದಲೇ ಮೈತ್ರಿ ಸಾಧಿಸಿದ್ದರೂ, ತಮಿಳು ಮತದಾರರ ಮೇಲೆ ಪ್ರಭಾವ ಬೀರುವಲ್ಲಿ ಯಶಸ್ಸು ಕಾಣಲಿಲ್ಲ. ಆಂಧ್ರದಲ್ಲಿ ಜಗನ್‌ಮೋಹನ್ ರೆಡ್ಡಿ ಅವರನ್ನು ಅವರದೇ ಪಕ್ಷವಾದ ಕಾಂಗ್ರೆಸ್ ಜೈಲಿಗೆ ನೂಕಿತ್ತು, ಅವರ ಆಸ್ತಿ ಮುಟ್ಟುಗೋಲು ಹಾಕಿಕೊಂಡಿತ್ತು. ಅವರ ವಿರುದ್ಧ ಹಲವು ಸಂಸ್ಥೆಗಳಿಂದ ತನಿಖೆಗಳೂ ನಡೆದವು. ಆದರೆ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲೂ ಸಂಸತ್ ಚುನಾವಣೆಯಲ್ಲೂ ಅವರು ಟಿಡಿಪಿ, ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ಭರ್ಜರಿ ಜಯ ಸಾಧಿಸಿದರು.

ಹಿಂದೂ ಮತಗಳನ್ನು ಧ್ರುವೀಕರಿಸುವ ಮೋದಿ ಹಾಗೂ ಶಾ ಅವರ ತಂತ್ರಗಾರಿಕೆಗಳು ಇಲ್ಲಿ ಕೆಲಸ ಮಾಡಬೇಕಿತ್ತು. ಏಕೆಂದರೆ, ಆಂಧ್ರದ ಜೊತೆ ಬಿಜೆಪಿ ಮೊದಲಿನಿಂದಲೂ ಸಂಬಂಧ ಹೊಂದಿದೆ. ಅದಕ್ಕಿಂತಲೂ ಹೆಚ್ಚಾಗಿ, ಹಲವು ಜಾತಿಗಳ ನಡುವೆ ಸಂಘರ್ಷ ಇರುವ, ‍ಪ್ರಬಲ ರೆಡ್ಡಿ ಹಾಗೂ ಕಮ್ಮ ಸಮುದಾಯಗಳ ನಡುವೆ ಸಂಘರ್ಷ ಇರುವ ರಾಜ್ಯದಲ್ಲಿ ಶೇಕಡ 2 ಅಥವಾ 3ರಷ್ಟು ಮಾತ್ರ ಇರುವ ಕ್ರೈಸ್ತ ಸಮುದಾಯಕ್ಕೆ ಸೇರಿದವರು ಜಗನ್. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪರ ಕೆಲಸ ಮಾಡಿದ ಅಂಶವು ದಕ್ಷಿಣದಲ್ಲಿ ಕೆಲಸ ಮಾಡಿಲ್ಲ ಎಂಬುದು ಸ್ಪಷ್ಟ. ಪಾಕಿಸ್ತಾನದ ಜೊತೆ ಗಡಿ ಹಂಚಿಕೊಂಡಿರುವ ಪಂಜಾಬ್ ರಾಜ್ಯವು ಭಯೋತ್ಪಾದನೆಗೆ ತುತ್ತಾಗುವ ಸಾಧ್ಯತೆಯೂ ಇದೆ. ಬಾಲಾಕೋಟ್ ವಾಯುದಾಳಿಯ ನಂತರ ಆ ರಾಜ್ಯವು ಬಿಜೆಪಿ ಪರ ವಾಲಬೇಕಿತ್ತು.

ಮುಂದಿನ ಹೆಜ್ಜೆ: ಈಗ ದೃಷ್ಟಿಯು ಮುಂದಿನ ಐದು ವರ್ಷಗಳತ್ತ ಇರಬೇಕು. ಮೋದಿ ಮತ್ತು ಅವರ ಪಕ್ಷದಿಂದ ಜನ ನಿರೀಕ್ಷಿಸುವುದು ಏನನ್ನು, ವಿರೋಧ ಪಕ್ಷಗಳಿಂದ ಬಯಸುವುದು ಏನನ್ನು ಎಂಬುದಷ್ಟೇ ಈಗ ಮುಖ್ಯ. ಸೋಲು ಕಂಡವರು ಸೋಲನ್ನು ಕಹಿ ಭಾವ ಇಲ್ಲದೆ ಒಪ್ಪಿಕೊಳ್ಳಬೇಕು. ಗೆದ್ದವರು ತಮ್ಮ ಕ್ರಿಯೆಯಲ್ಲಿ ಹೃದಯ ವೈಶಾಲ್ಯ ತೋರಬೇಕು. ಮೋದಿ ಅವರು ಈಗ ಭಾರತದ ಎಲ್ಲ ಸಮುದಾಯಗಳ, ಜಾತಿಗಳ, ಧರ್ಮಗಳ ಜನರ ಪ್ರಧಾನಿ. ಜಯ ಸಾಧಿಸಿದ ನಂತರದ ಅವರ ಮೊದಲ ಭಾಷಣದಲ್ಲಿ ಈ ಭಾವನೆ ಸ್ಪಷ್ಟವಾಗಿ ವ್ಯಕ್ತವಾಗಿದೆ.

‘ಸರ್ಕಾರ ಎಲ್ಲರ ಜೊತೆಗಿದೆ. ಅಭಿವೃದ್ಧಿ ಎಲ್ಲರಿಗಾಗಿ. ಎಲ್ಲರ ಜೊತೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು...’ ಎಂಬ ಒಂದೇ ಒಂದು ಮಾತಿನಲ್ಲಿ ತಮಗೆ ನಂಬಿಕೆ ಇರುವುದಾಗಿ ಮೋದಿ ಅವರು ಹೇಳಿದ್ದಾರೆ. ದೇಶಕ್ಕೆ ಸಂವಿಧಾನವೇ ಪವಿತ್ರ ಗ್ರಂಥ ಎಂದು ಅವರು ಪ್ರಮಾಣ ಮಾಡಿದ್ದಾರೆ. ಇದನ್ನು ಮೆಚ್ಚಬೇಕು.

ಮೋದಿ ಅವರ ಇತಿಹಾಸ ಉಲ್ಲೇಖಿಸಿ ಅನುಮಾನದಿಂದ ನೋಡುವುದು ದಾಕ್ಷಿಣ್ಯವಿಲ್ಲದ ನಡೆಯಾಗುತ್ತದೆ. ಅವರ ಮಾತನ್ನು ನಾವು ನಂಬಬೇಕು. ಹಾಗೆಯೇ, ಅವರು ತಮ್ಮ ಮಾತಿಗೆ ತಪ್ಪಿದರೆ ಅದಕ್ಕೆ ಕನ್ನಡಿ ಹಿಡಿದು ತೋರಿಸಬೇಕು. ಕೋಮು ಸೌಹಾರ್ದವು ಅಭಿವೃದ್ಧಿಗೆ ಅತ್ಯಗತ್ಯವಾದ ಸ್ಥಿತಿ ಎಂಬುದು ಸಾಮಾನ್ಯನಿಗೂ ಗೊತ್ತು. ಸ್ವಾತಂತ್ರ್ಯಾನಂತರ ನಾವು ಸಮಾನತೆಯ ಅಭಿವೃದ್ಧಿ ಸಾಧಿಸಿದ್ದಿದ್ದರೆ ನಮ್ಮಲ್ಲಿ ನಕ್ಸಲೀಯರು, ಮಾವೊವಾದಿಗಳು, ಪ್ರತ್ಯೇಕತಾವಾದಿಗಳು ಮತ್ತು ಭಯೋತ್ಪಾದಕರು ಇರುತ್ತಿರಲಿಲ್ಲ.

ಯಾವುದೇ ರಾಜಕೀಯ ಪಕ್ಷದ ಸಂಕುಚಿತ ರಾಷ್ಟ್ರೀಯತೆಯ ವ್ಯಾಖ್ಯಾನವನ್ನು ಎಲ್ಲರೂ ಒಪ್ಪುವುದಿಲ್ಲ. ಕುರುಡು ‘ರಾಷ್ಟ್ರೀಯತೆ’ಯು ಆತ್ಮಘಾತುಕ ಹಾಗೂ ಯುದ್ಧದ ಕಡೆ ಒಯ್ಯುವ ದಾರಿ. ನಾವು ಪ್ರಶ್ನೆ ಮಾಡುವುದು, ಭಾರತೀಯ ನಾಗರಿಕತೆ ಸಾಧಿಸಿದ ಅತ್ಯುನ್ನತ ಮೌಲ್ಯಗಳನ್ನು ರಾಷ್ಟ್ರವಾಗಿ ಈಗಲೂ ಪಾಲಿಸೋಣ ಎನ್ನುವುದು ದೇಶಪ್ರೇಮಕ್ಕೆ ವಿರುದ್ಧವಲ್ಲ. ಭಾರತದ ಬಗ್ಗೆ ಭಿನ್ನವಾದ ದೃಷ್ಟಿಕೋನ ಹೊಂದಿರುವವರ ಜೊತೆ ಚರ್ಚೆಗಳು, ಮಾತುಕತೆಗಳು ನಡೆದಾಗ ಮಾತ್ರ ಹೊಸ ಮೌಲ್ಯಸಂಚಯ ಸಾಧ್ಯ. ಗಾಂಧೀಜಿ, ವಿವೇಕಾನಂದ, ಟ್ಯಾಗೋರ್, ತಿಲಕ್, ಸರ್ದಾರ್ ಪಟೇಲ್, ಅರವಿಂದ... ಇವರೆಲ್ಲ ಹೇಳಿದ ದೇಶಪ್ರೇಮವು ವಿಶ್ವಪ್ರೇಮದ ಚೌಕಟ್ಟಿನಿಂದ ಹೊರತಾಗಿರುವುದೇನೂ ಅಲ್ಲ.

ಮೋದಿ ಅವರು ತಮ್ಮ ಸುತ್ತ ಹೌದಪ್ಪಗಳು ಇರಲು ಅವಕಾಶ ನೀಡಬಾರದು. ಅಂಥವರೇ ಮೋದಿ ಅವರಿಗೆ ಶತ್ರುಗಳಾಗುತ್ತಾರೆ, ಗುರಿ ಸಾಧಿಸಲು ಅಡ್ಡಿಯಾಗುತ್ತಾರೆ. ಭಾರತದಂತಹ ವಿಶಾಲವಾದ ರಾಷ್ಟ್ರದಲ್ಲಿ ಅಂದುಕೊಂಡಿದ್ದನ್ನು ಸಾಧಿಸಲು, ವ್ಯಕ್ತಿಯೊಬ್ಬನಲ್ಲಿ ಇರುವ ಒಳ್ಳೆಯ ಗುಣಗಳಷ್ಟೇ ಸಾಕಾಗುವುದಿಲ್ಲ. ಹಾಗಾಗಿ, ತುರ್ತಾಗಿ ಆಗಬೇಕಿರುವ ಕೆಲಸ ನಮ್ಮ ಹತ್ತು ಹಲವು ಸಂಸ್ಥೆಗಳನ್ನು ಬಲಪಡಿಸುವುದು. ಮೋದಿ ಅವರು 2014ರ ನಂತರ ಕಟ್ಟಿದ ತಂಡವು ಭರವಸೆಗಳನ್ನು ಈಡೇರಿಸುವ ಶಕ್ತಿ ಹೊಂದಿರಲಿಲ್ಲ. ಮೋದಿ ಅವರಿಗೆ ಈಗ ಎರಡನೆಯ ಅವಕಾಶ ಸಿಕ್ಕಿದೆ. ಅವರು ಜನರ ನಿರೀಕ್ಷೆಗಳನ್ನು ಈಡೇರಿಸಲು ಹಾಗೂ ಜನರ ಜೀವನಮಟ್ಟ ಸುಧಾರಿಸಲು ಆಡಳಿತಾತ್ಮಕ, ಆರ್ಥಿಕ ಸುಧಾರಣೆಗಳನ್ನು ತ್ವರಿತವಾಗಿ ತರಬೇಕು.

ವಿರೋಧ ಪಕ್ಷಗಳು ತಮ್ಮ ರಾಜಕಾರಣದ ಬಗ್ಗೆ ಆತ್ಮಾವಲೋಕನ ನಡೆಸಬೇಕು. ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಆದರೆ ಅವರು ಸಂಸತ್ತಿನಲ್ಲಿ ಹಾಗೂ ಪಕ್ಷದ ಒಳಗೆ ಕೆಲಸ ಮಾಡುವುದನ್ನು ಮುಂದುವರಿಸಬೇಕು. ಇಬ್ಬರು ಸಂಸದರನ್ನು ಮಾತ್ರ ಹೊಂದಿದ್ದ ಬಿಜೆಪಿಯಿಂದಲೇ ಹೊಸದೊಂದು ಪಾಠವನ್ನು ರಾಹುಲ್ ಕಲಿಯಬಹುದು. ಹಳೆಯ ಕಾಂಗ್ರೆಸ್ಸಿನ ಮೌಲ್ಯಗಳು ದೇಶಕ್ಕೆ ಬೇಕು. ಭಾರತಕ್ಕೆ ಒಂದು ಗಟ್ಟಿಯಾದ ವಿರೋಧ ಪಕ್ಷವೂ ಬೇಕು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 23

  Happy
 • 2

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !