ಭ್ರಮೆ ಕಳಚುವ ರಂಗದ ಬಣ್ಣ

ಶುಕ್ರವಾರ, ಜೂಲೈ 19, 2019
22 °C

ಭ್ರಮೆ ಕಳಚುವ ರಂಗದ ಬಣ್ಣ

Published:
Updated:
Prajavani

‘ನೀವು ಅಕ್ಕನ ಪಾತ್ರ ಮಾಡಬಾರದಾಗಿತ್ತು. ನೀವೇ ನಾಯಕಿಯ ಪಾತ್ರ ಮಾಡಬೇಕಿತ್ತು ಎಂದು ಕೆಲವರು ಈಗಲೂ ಹೇಳುತ್ತಾರೆ. ಆದಾವುದೂ ನನಗೆ ಮುಖ್ಯ ಅಲ್ಲವೇ ಅಲ್ಲ. ನನಗೊಂದು ಐಡೆಂಟಿಟಿಯನ್ನು ‘ಮಗಳು ಜಾನಕಿ’ ಧಾರಾವಾಹಿ ನೀಡಿದೆ. ಪಾತ್ರಕ್ಕೆ ಪ್ರಾಮುಖ್ಯತೆ ಮುಖ್ಯವೇ ವಿನಾ ನಾಯಕ– ನಾಯಕಿ ಎನ್ನುವುದಲ್ಲ’ ಇದು ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಟಿ.ಎನ್‌.ಸೀತಾರಾಂ ನಿರ್ದೇಶನದ ‘ಮಗಳು ಜಾನಕಿ’ಯ ಸಂಜನಾ ಪಾತ್ರ ನಿಭಾಯಿಸುತ್ತಿರುವ ಸುಪ್ರಿಯಾ ಮನದ ಮಾತು.

ತೆರೆಯ ಬಣ್ಣದ ಬದುಕಿನಲ್ಲಿ ಒಂದು ಭ್ರಮೆ ಮನೆ ಮಾಡಿರುತ್ತದೆ. ರಂಗದ ಮೇಲಿನ ಬಣ್ಣ ಕ್ಷಣದಲ್ಲೇ ಎಲ್ಲ ಭ್ರಮೆಗಳನ್ನು ಬಯಲು ಮಾಡುತ್ತದೆ. ಇಂತಹ ವ್ಯತಿರಿಕ್ತ ಪರಿಸ್ಥಿತಿಯಲ್ಲೂ ನಾವು ಬೆಳ್ಳಿತೆರೆ– ಕಿರುತೆರೆಯನ್ನು ಒಪ್ಪಿಕೊಳ್ಳುತ್ತೇವೆ, ಅಪ್ಪಿಕೊಳ್ಳುತ್ತೇವೆ ಎಂದರೆ ಅದಕ್ಕೆ ವ್ಯಾವಹಾರಿಕ ಕಾರಣಗಳಿರುತ್ತವೆ. ಕಲೆಯ ಕಾರಣಗಳ ವಿಷಯಕ್ಕೆ ಬಂದರೆ ರಂಗಭೂಮಿ ಎಂದೆಂದೂ ನನಗೆ ಆಪ್ಯಾಯ. ಏಕೆಂದರೆ ರಂಗ ವಿಮರ್ಶೆ ವೀಕ್ಷಕರ ಚಪ್ಪಾಳೆಯ ಮೂಲಕ ತಕ್ಷಣ ಗೊತ್ತಾಗುತ್ತದೆ. ಎಷ್ಟೋ ಸಂದರ್ಭದಲ್ಲಿ ನಾಟಕ ಮುಗಿದ ನಂತರ ಕಾದು ಕುಳಿತು ಚೆನ್ನಾಗಿ ಮಾಡಿದ್ರಿ ಎಂದು ಹೇಳುವ ವೀಕ್ಷಕರ ಸಹನೆಯ ಪ್ರೀತಿಗೆ ಏನು ಹೇಳಲು ಸಾಧ್ಯ. ನಾನು ರಾಜ್‌ಕುಮಾರ್‌ ಅಭಿಮಾನಿ. ಅವರ ಬಹುತೇಕ ಪಾತ್ರಗಳನ್ನು ಮನದುಂಬಿಕೊಂಡಿದ್ದೇನೆ. ಅವರನ್ನು ಪ್ರಜ್ಞಾಪೂರ್ವಕವಾಗಿ ಅನುಸರಿಸಬೇಕೆಂಬ ಬಯಕೆ ನನ್ನದು. 

ಶಿವಮೊಗ್ಗದ ಹೊಂಗಿರಣ ತಂಡ ‘ಮೃಗತೃಷ್ಣಾ’ ಎನ್ನುವ ನಾಟಕ ಆಡಿಸುತ್ತಿದೆ. ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಇತ್ತೀಚೆಗೆ  ಮೊದಲ ಪ್ರದರ್ಶನ ನಡೆಯಿತು. ಅದರಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ವಿದ್ಯಾರ್ಥಿದೆಸೆಯಿಂದಲೂ ನನಗೆ ವೇದಿಕೆಯತ್ತವೆ ಚಿತ್ತ. ಯಾವತ್ತೂ ನಾನು ರ‍್ಯಾಂಕ್‌ ವಿದ್ಯಾರ್ಥಿ ಆಗಲು ಸಾಧ್ಯವಾಗಲೇ ಇಲ್ಲ. ಪಿಯುಸಿ ಓದುತ್ತಿದ್ದ ದಿನಗಳಲ್ಲಿ ‘ಮುಂಗಾರು ಮಳೆ’ ಸಿನಿಮಾ ಆರ್ಭಟ ಜೋರಾಗಿತ್ತು. ನಮ್ಮ ಕಾಲೇಜಿಗೆ ಆ ಸಿನಿಮಾದ ನಾಯಕ ನಟ ಗಣೇಶ್‌ ಬಂದಿದ್ದರು. ಅಂದು ನನ್ನದೊಂದು ಡಾನ್ಸ್‌ ಮತ್ತು ಹಾಡು ಇತ್ತು. ಆ ದಿನ ಗಣೇಶ್‌ ಅವರ ದರ್ಶನಕ್ಕೆ ನೆರೆದ ಜನಸ್ತೋಮ ನೋಡಿ ನಾನೂ ಸೆಲೆಬ್ರಿಟಿಯಾಗಿ ಬೆಳೆಯಬೇಕು ಎನ್ನವ ಸಂಕಲ್ಪ ಮಾಡಿದೆ. ಅದೃಷ್ಟವಶಾತ್‌ ನನ್ನ ರಂಗ ಪ್ರೇಮ ನನ್ನನ್ನು ಕೈಹಿಡಿದು ಮುನ್ನಡೆಸಿತು. ಇತ್ತೀಚಿಗೆ ಅದೇ ಸಂಸ್ಥೆಯ ಮಹಿಳಾ ಕಾಲೇಜಿಗೆ ನನ್ನನ್ನು ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಆಗ ನನ್ನ ಹಿಂದಿನ ಸಂಕಲ್ಪ ಮನದಲ್ಲಿ ಗರಿ ಬಿಚ್ಚಿ ನಲಿದಾಡಿತ್ತು. ಏನೋ ಮಾಡಿದ್ದೇನೆಂಬ ಸಮಾಧಾನ ನನ್ನಲ್ಲಿ ಅಂದು ಕಾಣಿಸಿಕೊಂಡಿತು. ಎಲ್ಲೋ ನನ್ನ ಕನಸಿಗೆ ನಾನೇ ಏಣಿಯಾಗಿ ಏರಿದ ಸಾರ್ಥಕಭಾವ ಮೂಡಿತ್ತು.

ಕಷ್ಟಪಟ್ಟು ಓದಿದ್ದೇನೆ, ರಂಗದಲ್ಲಿ ದುಡಿದಿದ್ದೇನೆ. ರಂಗಭೂಮಿಯ ಅಗತ್ಯಕ್ಕೆ ಫ್ಯಾಶನ್‌ ಡಿಸೈನಿಂಗ್‌ ಮಾಡಿದೆ. ಬ್ಯೂಟಿಷಿಯನ್‌ ಕೋರ್ಸ್‌ ಮಾಡಿದೆ. ಅಂದರೆ ಯಾವುದರಲ್ಲೂ ಹಿಂದೆ ಬೀಳಬಾರದು. ರಂಗಭೂಮಿಯ ಎಲ್ಲ ಚಟುವಟಿಕೆಗಳನ್ನು ನಾನು ಮಾಡಬಲ್ಲೆ ಎನ್ನುವ ವಿಶ್ವಾಸವೇ ನಾಲ್ಕೈದು ಕಲಾತ್ಮಕ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಲು ಸಾಧ್ಯವಾಯಿತು. ಈಗ ಮಗಳು ಜಾನಕಿಯಲ್ಲಿಯೂ ಪ್ರಮುಖ ಪಾತ್ರ ಮಾಡುತ್ತಿದ್ದೇನೆ.

ಈಗ ಅನೇಕ ಶಾಲಾ– ಕಾಲೇಜುಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ. ಅಲ್ಲಿ ಮಕ್ಕಳು ನಮಗೆ ಸ್ಫೂರ್ತಿ ತುಂಬಿದ್ದೀರಿ ಎಂಬ ಮಾತನ್ನು ಹೇಳುತ್ತಾರೆ. ನಾನು ರಂಗಭೂಮಿಯಲ್ಲಿ ದಕ್ಕಿಸಿಕೊಂಡಿದ್ದನ್ನು ಅವರಿಗೆ ಹೇಳುತ್ತೇನೆ. ಬಣ್ಣದ ಲೋಕದಲ್ಲಿ ನನಗೆ ದೊಡ್ಡಮಟ್ಟದ ಅವಕಾಶ ಸಿಕ್ಕಿಲ್ಲ, ಹುಡುಕಿ ಬರುವ ಅವಕಾಶ ನನ್ನ ನಿರೀಕ್ಷೆಗೆ ತಕ್ಕುದಾಗಿಲ್ಲ ಎನ್ನುವ ಕೊರಗು ಮಾತ್ರ ಇದ್ದೇ ಇದೆ.

ನಿರೂಪಣೆ: ರಾಘವೇಂದ್ರ ಕೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !