ಬುಧವಾರ, ಏಪ್ರಿಲ್ 21, 2021
33 °C
ಡಿಡಿಪಿಐ ಕಚೇರಿ ಎದುರು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಪ್ರತಿಭಟನೆ

ಹೊಸ ನೇಮಕಾತಿಗೆ ಶಿಕ್ಷಕರ ವಿರೋಧ: ವೃಂದ ನೇಮಕಾತಿ ನಿಯಮಾವಳಿ ಹಿಂಪಡೆಯುವಂತೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಿಂಬಡ್ತಿ ನೀಡುತ್ತಿರುವುದನ್ನು ವಿರೋಧಿಸಿ ಹಾಗೂ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದ ಡಿಡಿಪಿಐ ಕಚೇರಿ ಎದುರು ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಪದಾಧಿಕಾರಿಗಳು ಶನಿವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಷಫೀವುಲ್ಲಾ ಸಾಬಿ ಮಾತನಾಡಿ, ‘ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಾರಕವಾಗಿರುವ ವೃಂದ ನೇಮಕಾತಿ ನಿಯಮಾವಳಿ ಹಿಂಪಡೆಯಬೇಕು. ಆ ನಿಯಮಾವಳಿಯಂತೆ 1 ರಿಂದ 7 ನೇ ತರಗತಿಗೆ ಶಿಕ್ಷಕರನ್ನು 5ನೇ ತರಗತಿ ಸೀಮಿತಗೊಳಿಸಿ ಹಿಂಬಡ್ತಿ ನೀಡಿ, ಹೊಸ ನೇಮಕಾತಿಯನ್ನು ಆರಂಭಿಸಿರುವುದು ಅನ್ಯಾಯ’ ಎಂದು ಹೇಳಿದರು.

‘ಈಗಾಗಲೇ ಬಡ್ತಿ ಪಡೆದು 8ನೇ ತರಗತಿಯವರೆಗೆ ಬೋಧಿಸುತ್ತಿರುವ ಶಿಕ್ಷಕರು, ಪದವೀಧರ ಶಿಕ್ಷಕರಿಗೆ (ಎಜಿಟಿ) ನೇಮಕಾತಿ ಪ್ರಕ್ರಿಯೆ ಆರಂಭವಾದ ಬಳಿಕ ಹಿಂಬಡ್ತಿ ನೀಡಲು ಮುಂದಾಗಿರುವ ಸರ್ಕಾರದ ನೀತಿಯು ಅವೈಜ್ಞಾನಿಕವಾಗಿದೆ. ಮಕ್ಕಳ ಭವಿಷ್ಯ ರೂಪಿಸುವವರ ಬಗ್ಗೆ ಸರ್ಕಾರ ಇಷ್ಟು ಕಟುವಾಗಿ ನಡೆದುಕೊಳ್ಳಬಾರದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಹೊಸ ನೇಮಕಾತಿ ಪ್ರಕ್ರಿಯೆ ಆರಂಭವಾದಲ್ಲಿ ರಾಜ್ಯದ ಹಿರಿಯ ಪ್ರಾಥಮಿಕ ಶಾಲೆಗಳ ಸುಮಾರು 52 ಸಾವಿರ ಸೇವಾ ನಿರತ ಶಿಕ್ಷಕರನ್ನು ಕಿರಿಯ ಪ್ರಾಥಮಿಕ ಶಾಲೆಗಳಿಗೆ ಹಿಂಬಡ್ತಿ ನೀಡಬೇಕಾಗುತ್ತದೆ. ಅಲ್ಲದೆ ಅಷ್ಟೇ ಪ್ರಮಾಣದ ಕಿರಿಯ ಪ್ರಾಥಮಿಕ ಶಿಕ್ಷಕರನ್ನು ಹೆಚ್ಚುವರಿಯಾಗಿ ವರ್ಗಾವಣೆ ಮಾಡಬೇಕಾಗುತ್ತದೆ. ಇದರಿಂದ ಶಿಕ್ಷಕರಿಗೆ ತೊಂದರೆ ಆಗುವ ಜತೆಗೆ ಸರ್ಕಾರದ ಬೊಕ್ಕಸಕ್ಕೂ ಹೊರೆಯಾಗಲಿದೆ’ ಎಂದು ತಿಳಿಸಿದರು.

‘ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಪೈಕಿ ಪದವಿ, ಬಿ.ಇಡಿ, ಎಂ.ಇಡಿ ಹಾಗೂ ಸ್ನಾತಕೋತ್ತರ ಪದವಿ, ಪಿಎಚ್‌ಡಿ ಪಡೆದಿರುವ 82 ಸಾವಿರ ಶಿಕ್ಷಕರಿದ್ದಾರೆ. ಇವರು 8ನೇ ತರಗತಿವರೆಗೆ ಬೋಧಿಸಲು ಅರ್ಹರಲ್ಲ ಎಂದು ಹೊಸ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಇಲಾಖೆ ಹೊರಟಿರುವುದು ಎಷ್ಟರ ಮಟ್ಟಿಗೆ ಸರಿ’ ಎಂದು ಖಾರವಾಗಿ ಪ್ರಶ್ನಿಸಿದರು.

‘ಶಿಕ್ಷಕರಿಗೆ ಉಂಟಾಗಲಿರುವ ತೊಂದರೆಯನ್ನು ತಡೆಯಲು ಸೇವೆಯಲ್ಲಿರುವ ಪದವೀಧರ ಶಿಕ್ಷಕರನ್ನು 6 ರಿಂದ 8ನೇ ತರಗತಿಗೆ ಎಂದು ಪರಿಗಣಿಸಬೇಕು. ಇಲ್ಲದಿದ್ದರೆ ನಾವು ಹೊಸ ವೃಂದ ನಿಯಮಾವಳಿಯಂತೆ 1 ರಿಂದ 5ನೇ ತರಗತಿವರೆಗೂ ಮಾತ್ರ ಬೋಧಿಸುತ್ತೇವೆ. ಉಳಿದ ತರಗತಿಗಳನ್ನು ಬಹಿಷ್ಕರಿಸುತ್ತೇವೆ. ಆಗಲೂ ಕೂಡ ಸರ್ಕಾರ ಎಚ್ಚೇತ್ತುಕೊಳ್ಳದಿದ್ದರೆ. ಉಗ್ರ ಪ್ರತಿಭಟನೆ ನಡೆಸುತ್ತೇವೆ’ ಎಂದರು.

ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಬಿ.ಪ್ರಕಾಶ್, ಉಪಾಧ್ಯಕ್ಷ ಎ.ಸನತ್ ಕುಮಾರ್, ಪದಾಧಿಕಾರಿಗಳಾದ ಸುವರ್ಣಮ್ಮ, ವಿ.ವಿ.ಮಂಜುನಾಥ್, ಸಹ ಕಾರ್ಯದರ್ಶಿಗಳಾದ ಆರ್.ಬಿ.ಗೋಪಾಲ್, ವೈ.ಎಸ್.ಪ್ರಮೀಳಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.