ಬುಧವಾರ, ಏಪ್ರಿಲ್ 14, 2021
31 °C

ತಿಮ್ಮಕ್ಕ ವೃಕ್ಷೋದ್ಯಾನದಲ್ಲಿ ಚಿಣ್ಣರ ಕಲರವ

ಎಸ್.ಎಂ. ಹಿರೇಮಠ Updated:

ಅಕ್ಷರ ಗಾತ್ರ : | |

Prajavani

ಬಾದಾಮಿ: ಇಲ್ಲಿನ ರೈಲ್ವೆ ಸ್ಟೇಶನ್ ರಸ್ತೆಯಿಂದ ಬಾದಾಮಿ ಪಟ್ಟಣಕ್ಕೆ ಬರುವಾಗ ಎಡಕ್ಕೆ  ಕೋಣಮ್ಮ ದೇವಾಲಯದ ಎದುರಿನ ಸಾಲುಬೆಟ್ಟಗಳ ಇಳಿಜಾರು ಪ್ರದೇಶದಲ್ಲಿ ಹಸಿರ ಸಿರಿ ಹೊದ್ದ ಸಾಲು ಮರದ ತಿಮ್ಮಕ್ಕನ ನೆನಪಿನ ವೃಕ್ಷೋದ್ಯಾನ ಕೈಬೀಸಿ ಕರೆಯುತ್ತದೆ. 

ಅರಣ್ಯ ಇಲಾಖೆ ಉದ್ಯಾನವನ ಆರಂಭಿಸಿ ಆರು ತಿಂಗಳು ಕಳೆದಿದೆ. ಕಳೆದ ಜೂನ್‌ನಲ್ಲಿ ಉದ್ಯಾನವನದಲ್ಲಿ ಸಾವಿರಕ್ಕೂ ಹೆಚ್ಚು ಆಲ, ಅರಳಿ, ಬೇವು, ಬಸರಿ ಸೇರಿದಂತೆ ವೈವಿಧ್ಯಮಯ ಗಿಡಗಳನ್ನು ನೆಡಲಾಗಿದೆ. ಅವೀಗ ಬೆಳೆದು ಹಸುರಿನಿಂದ ಕಂಗೊಳಿಸುತ್ತಿವೆ. ಇಲ್ಲಿ ಮಕ್ಕಳ ಉದ್ಯಾನವನ ಕೂಡ ರೂಪಿಸಲಾಗಿದೆ.  ಅವರನ್ನು ರಂಜಿಸಲು ವಿವಿಧ ಆಟದ ಸಾಮಗ್ರಿ ಅಳವಡಿಸಲಾಗಿದೆ. ಉದ್ಯಾನವನದಲ್ಲಿ ಜೋಕಾಲಿ, ಧಡಂ ಧಡಕಿ, ಜಾರುಗುಂಡೆ, ಕುದುರೆ ಆಟ, ತಿರುಗುವ ಚಕ್ರ, ಪಿರಾಮಿಡ್ ಕಾಣಬಹುದು.

ಸಂಜೆ 4ರಿಂದ 6 ಗಂಟೆಯವರೆಗೆ ಉದ್ಯಾನವನದಲ್ಲಿ ಚಿಣ್ಣರ ಕಲರವ ಕಾಣಸಿಗುತ್ತದೆ. ಜೊತೆಗೆ ಪಕ್ಷಿಗಳ ಇಂಚರವೂ ಸಾಥ್ ನೀಡುತ್ತದೆ. ಐದು ವರ್ಷದ ಒಳಗಿನ ಮಕ್ಕಳಿಗೆ ಆಟವಾಡುವ ಸೌಲಭ್ಯವಿದೆ.

‘ ಬಾದಾಮ್ಯಾಗ ಗುಡ್ಡದ ಸಮೀಪ ಉದ್ಯಾನವನ ಮಾಡಿದ್ದು ನಮಗ ಬಹಳಾ ಖುಷಿ ಆಗೈತ್ರಿ. ಆಟ ಆಡಲಿಕ್ಕೆ ಸಂಜಿಮುಂದ ದಿನಾ ಇಲ್ಲಿಗೇ ಬರತೇವ್ರೀ ‘ ಎಂದು ಉದ್ಯಾನವನದಲ್ಲಿದ್ದ ಆಟವಾಡುತ್ತಿದ್ದ ಅನುರಾಧಾ ವಾರಿ, ಚೇತನ ಹಿರೇಮಠ ಮತ್ತು ಪ್ರಭು ಸಾಸಳ್ಳಿ ಹೇಳಿದರು.

‘ಉದ್ಯಾನವನಕ್ಕೆ ಮಕ್ಕಳ ಜೊತೆಗೆ ಬಂದವರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ ಬೇಕು’ ಎಂದು ಸ್ಥಳೀಯರಾದ ಎನ್.ಬಿ. ಶೀಲವಂತರ ಹೇಳಿದರು.

40 ಎಕರೆ ವ್ಯಾಪ್ತಿಯಲ್ಲಿ ವೃಕ್ಷೋದ್ಯಾನ ಬೆಳೆಸಲಾಗುತ್ತಿದೆ. ಶೀಘ್ರ ಆಸನದ ವ್ಯವಸ್ಥೆ ಮತ್ತು ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಶ್ರೀಧರ ತೆಗ್ಗಿನಮನಿ ಹೇಳಿದರು.

ಚಾಲುಕ್ಯರ ನಾಡಿನಲ್ಲಿ ಸರ್ಕಾರ ವಿಶೇಷವಾದ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಯೋಜನೆ ಕೈಗೊಂಡಿದೆ. ಉದ್ಯಾನವನವನ್ನು ಇನ್ನೂ ಹೆಚ್ಚಿನ ಅಭಿವೃದ್ಧಿ ಮತ್ತು ಮೂಲ ಸೌಕರ್ಯ ಕೈಗೊಂಡರೆ ಇದೇ ರಸ್ತೆಯಿಂದ ಮಹಾಕೂಟ, ಪಟ್ಟದಕಲ್ಲು ಮತ್ತು ಐಹೊಳೆಗೆ ಹೋಗುವ ಪ್ರವಾಸಿಗರಿಗೆ ಆಕರ್ಷಣೆಯ ತಾಣವಾಗಲಿದೆ.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.