ಅನಾಯಾಸದ ಅಧಿಕಾರದ ಕೊನೆ

ಮಂಗಳವಾರ, ಜೂನ್ 25, 2019
25 °C

ಅನಾಯಾಸದ ಅಧಿಕಾರದ ಕೊನೆ

ಗುರುರಾಜ ಕರಜಗಿ
Published:
Updated:
Prajavani

ವಾರಾಣಸಿಯಲ್ಲಿ ಬ್ರಹ್ಮದತ್ತ ರಾಜ್ಯವಾಳುವಾಗ ಬೋಧಿಸತ್ವ ರಾಜನ ಪುರೋಹಿತನಾಗಿ ಹುಟ್ಟಿದ್ದ. ಅವನು ಮೂರು ವೇದ ಹಾಗೂ ಅನೇಕ ವಿದ್ಯೆಗಳಲ್ಲಿ ಪಾರಂಗತನಾಗಿದ್ದ. ಅವನಿಗೆ ಪೃಥ್ವೀಜಯವೆಂಬ ವಿಶೇಷ ಮಂತ್ರದ ಸಿದ್ಧಿಯಾಗಿತ್ತು. ಅದೊಂದು ಜಪಮಾಡಬಹುದಾದ ಮಂತ್ರ.

ಅವನು ಬಯಲಿನಲ್ಲಿ ಮರದ ಕೆಳಗೆ ಕುಳಿತು ಈ ಮಂತ್ರವನ್ನು ಜಪಮಾಡುತ್ತಿದ್ದ. ಅವನು ಹೀಗೆ ಜಪಮಾಡುತ್ತಿದ್ದಾಗ ಹತ್ತಿರದ ಬಿಲದಲ್ಲಿ ವಾಸವಾಗಿದ್ದ ನರಿಯೊಂದು ಈ ಮಂತ್ರವನ್ನು ಕೇಳಿಸಿಕೊಳ್ಳುತ್ತಿತ್ತು. ಅದು ಹಿಂದಿನ ಜನ್ಮದಲ್ಲಿ ಇದೇ ಮಂತ್ರವನ್ನು ಸಾಧಿಸಿಕೊಂಡಿದ್ದ ಬ್ರಾಹ್ಮಣನಾಗಿತ್ತು. ಕೆಟ್ಟ ಕರ್ಮಗಳನ್ನು ಮಾಡಿ ನರಿ ಜನ್ಮವನ್ನು ಪಡೆದಿತ್ತು. ಹಿಂದಿನ ಸಂಸ್ಕಾರದಿಂದ ಈ ಜನ್ಮದಲ್ಲಿ ಪೃಥ್ವಿಯ ಮಂತ್ರ ಅದಕ್ಕೆ ಒಲಿದು ಬಂದಿತ್ತು.

ಒಂದು ದಿನ ಬೋಧಿಸತ್ವ ಜಪ ಮುಗಿಸಿ ಹೊರಡುವಾಗ ನರಿ ಬಿಲದಿಂದ ಹೊರಗೆ ಬಂದು, ‘ನನಗೂ ಈ ಮಂತ್ರ ಸ್ವಾಧೀನವಾಗಿದೆ. ನಿನಗಿಂತ ನನಗೇ ಅದು ಹೆಚ್ಚು ಕರಗತವಾಗಿದೆ’ ಎಂದು ಓಡಿಹೋಯಿತು. ಅದು ಏನು ಅನಾಹುತ ಮಾಡಿಬಿಡುತ್ತದೋ ಎಂಬ ಆತಂಕದಿಂದ ಅದರ ಹಿಂದೆ ಅದನ್ನು ಹಿಡಿಯಲು ಓಡಿದ. ಆದರೆ ಅದು ಶೀಘ್ರವಾಗಿ ಓಡಿ ಕಾಡನ್ನು ಸೇರಿತು.

ಅದು ಅಹಂಕಾರದಿಂದ ಪೃಥ್ವೀಜಯ ಮಂತ್ರವನ್ನು ಪಠಿಸಿದಾಗ ಕಾಡಿನ ಎಲ್ಲ ಮೃಗಗಳು ಅದರ ಸೇವಕರಂತಾದವು. ನರಿ ಮತ್ತೊಂದು ಹೆಣ್ಣುನರಿಯನ್ನು ತನ್ನ ರಾಣಿಯನ್ನಾಗಿ ಮಾಡಿಕೊಂಡು ತಾನೇ ಕಾಡಿನ ರಾಜನಾಯಿತು. ದಿನವೂ ಅದು ಕಾಡಿನಲ್ಲಿ ಮೆರವಣಿಗೆ ಹೋಗುತ್ತಿತ್ತು. ಅದರ ಅಹಂಕಾರ ಮಿತಿಮೀರಿತ್ತು. ಎರಡು ಆನೆಗಳ ಬೆನ್ನ ಮೇಲೆ ಒಂದು ಪೀಠವನ್ನು ಸ್ಥಾಪಿಸಿ, ಆ ಪೀಠದ ಮೇಲೆ ಒಂದು ದೊಡ್ಡ ಸಿಂಹ ಕುಳಿತಿರಬೇಕು. ಅದರ ಬೆನ್ನ ಮೇಲೆ ಈ ನರಿ ತನ್ನ ಹೆಂಡತಿಯೊಂದಿಗೆ ಕುಳಿತುಕೊಳ್ಳುವುದು. ಎರಡೂ ಆನೆಗಳು ಒಂದೇ ವೇಗದಲ್ಲಿ ಚಲಿಸುತ್ತ ರಾಜನಿಗೆ ಒಂದಷ್ಟೂ ಕುಲುಕಾಟವಾಗದಂತೆ ನೋಡಿಕೊಳ್ಳಬೇಕಿತ್ತು. ಸ್ವಲ್ಪ ಕಡಿಮೆಯಾದರೂ ಅವುಗಳಿಗೆ ಮರಣದಂಡನೆ ಶಿಕ್ಷೆ.

ದಿನದಿನಕ್ಕೆ ಅದರ ಅಹಂಕಾರ ಹೆಚ್ಚಾಗಿ, ಅದು ಒಂದು ದಿನ ವಾರಣಾಸಿಯನ್ನೇ ಗೆಲ್ಲಬೇಕೆಂದು ತೀರ್ಮಾನಿಸಿ ಎಲ್ಲ ಕಾಡುಪ್ರಾಣಿಗಳನ್ನು ಕರೆದುಕೊಂಡು ವಾರಣಾಸಿಯ ಕೋಟೆಯ ಹೊರಗೆ ಬೀಡುಬಿಟ್ಟಿತು. ರಾಜನಿಗೆ ಈ ವಿಚಿತ್ರ ಗಾಬರಿಯನ್ನುಂಟು ಮಾಡಿತು. ಇದುವರೆಗೂ ಹೀಗೆ ಪ್ರಾಣಿಗಳು ನಗರಗಳ ಮೇಲೆ ದಾಳಿ ಮಾಡುವುದನ್ನು ಕಂಡಿರಲಿಲ್ಲ. ಕೇಳಿರಲಿಲ್ಲ. ಬೋಧಿಸತ್ವ ತಾನು ಈ ಸಮಸ್ಯೆಯನ್ನು ಪರಿಹರಿಸುವುದಾಗಿ ಹೇಳಿದ. ಕೋಟೆಯ ಮೇಲೆ ನಿಂತು ನರಿಗೆ ಜೋರಾಗಿ ಕೂಗಿದ, ‘ನೀನು ವಾರಣಾಸಿಯನ್ನು ಹೇಗೆ ಗೆಲ್ಲುತ್ತೀ?’

ನರಿ ಅಹಂಕಾರದಿಂದ ಹೇಳಿತು, ‘ನನ್ನ ಸಿಂಹದಿಂದ ಸಿಂಹನಾದ ಮಾಡಿಸುತ್ತೇನೆ. ನಿನ್ನ ಜನರೆಲ್ಲ ಹೆದರಿಕೆಯಿಂದ ಸತ್ತು ಹೋಗುತ್ತಾರೆ’

ಬೋಧಿಸತ್ವ ತನ್ನ ನಾಗರಿಕರಿಗೆಲ್ಲ ಉದ್ದಿನ ಹಿಟ್ಟಿನಿಂದ ಕಿವಿ ಮುಚ್ಚಿಕೊಳ್ಳಲು ಹೇಳಿ ನಂತರ ‘ನೋಡೋಣ, ನಿನ್ನನ್ನು ಹೊತ್ತಿರುವ ಸಿಂಹ ನಿನ್ನಂಥ ಹೇಡಿ ನಾಯಕನ ಮಾತು ಕೇಳುತ್ತದೆಯೋ?’ ಎಂದು ಕೆಣಕುವಂತೆ ಪ್ರಶ್ನಿಸಿದ. ನರಿ ಕೋಪದಿಂದ ಸಿಂಹಕ್ಕೆ ಜೋರಾಗಿ ಗರ್ಜಿಸುವಂತೆ ಹೇಳಿತು. ಸಿಂಹ ತನ್ನ ಉಗುರುಗಳನ್ನು ಆನೆಗಳ ತಲೆಯ ಮೇಲೆ ಊರಿ ಭಯಂಕರವಾಗಿ ಗರ್ಜಿಸಿತು. ಆ ಗರ್ಜನೆಗೆ ಹೆದರಿ ನರಿಯನ್ನು ಹೊತ್ತಿದ್ದ ಆನೆಗಳು ದಿಕ್ಕೆಟ್ಟು ಓಡಿದವು. ನರಿ ಕೆಳಗೆ ಬಿತ್ತು, ಆನೆಗಳು ಅದನ್ನು ತುಳಿದು ಹಾಕಿದವು.

ತನ್ನ ಸ್ವಂತ ಶಕ್ತಿಯಿಲ್ಲದೇ ಯಾರದೋ ಕೃಪೆಯಿಂದ ಪಡೆದ ಅಧಿಕಾರ ಶಾಶ್ವತವಾಗಿರಲಾರದು. ಅಧಿಕಾರ ಬಂದಾಗ ವಿನಯದಿಂದ ಬದುಕಬಹುದು. ಅಹಂಕಾರ ಬಂದರೆ ಇಂಥದೇ ಅಂತ್ಯ ಖಂಡಿತವಾಗಿಯೂ ಕಾದಿರುತ್ತದೆ.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !