ಧರ್ಮಸ್ಥಳ ಸ್ನಾನಘಟ್ಟಕ್ಕೆ ಮತ್ತೆ ಜೀವ ಕಳೆ

ಸೋಮವಾರ, ಜೂನ್ 24, 2019
26 °C
ಕರಾವಳಿ ಭಾಗದಲ್ಲಿ ಕಡಲ್ಕೊರತದಿಂದ ಹಲವು ಮನೆಗಳಿಗೆ ಹಾನಿ

ಧರ್ಮಸ್ಥಳ ಸ್ನಾನಘಟ್ಟಕ್ಕೆ ಮತ್ತೆ ಜೀವ ಕಳೆ

Published:
Updated:
Prajavani

ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಮುಂಗಾರು ಚುರುಕಾಗಿದ್ದು, ಒಳನಾಡು ಮತ್ತು ಘಟ್ಟ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆ ಬಿರುಸಾಗಿದ್ದು, ಗುರುವಾರ ಎಡೆಬಿಡದೇ ಮಳೆ ಸುರಿದಿದೆ.

ಮಂಗಳೂರಿನ ಗೋರಿಗುಡ್ಡೆಯ ಬಳಿ ಸರ್ವಿಸ್ ರಸ್ತೆ ಪಕ್ಕದ ಮಣ್ಣು ಕುಸಿದು, ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಸ್ಥಳದಲ್ಲಿ ನೀರು ಶೇಖರಣೆಯಾಗಿತ್ತು. ಮಳೆಯಿಂದಾಗಿ ಪುತ್ತೂರು ತಾಲ್ಲೂಕಿನಲ್ಲಿ ಎರಡು ಮನೆಗಳಿಗೆ ಹಾನಿಯಾಗಿದೆ.

ಉಳ್ಳಾಲದ ಕೈಕೋ ಮತ್ತು ಕಿಲೇರಿಯಾ ನಗರ, ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಸಮುದ್ರದ ಆರ್ಭಟ ಮುಂದುವರಿದಿದೆ. ಕಡಲ್ಕೊರೆತದ ಪರಿಣಾಮವಾಗಿ ಉಳ್ಳಾಲ ಕೈಕೋ, ಕಿಲಿರಿಯಾನಗರದ 8 ಮನೆಗಳ ಜನರು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಗೊಂಡಿದ್ದಾರೆ. ಸೋಮೇಶ್ವರ-ಉಚ್ಚಿಲ ಭಾಗದಲ್ಲಿ 1 ಮನೆ ಸಮುದ್ರದ ಪಾಲಾಗಿದ್ದು, 10ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿವೆ.

ಕಾಸರಗೋಡು ಜಿಲ್ಲೆಯ ಉಪ್ಪಳ ಪರಿಸರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಮೂಸೋಡಿ, ಶಾರದಾ ನಗರದ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಒಳಹರಿವು ಆರಂಭ: ಬರಿದಾಗಿದ್ದ ನೇತ್ರಾವತಿ ನದಿಯಲ್ಲಿ ಒಳಹರಿವು ಆರಂಭವಾಗಿದ್ದು, ಧರ್ಮಸ್ಥಳದ ಸ್ನಾನಘಟ್ಟಕ್ಕೆ ಮತ್ತೆ ಜೀವಕಳೆ ಬಂದಿದೆ. ಕಿಂಡಿ ಅಣೆಕಟ್ಟೆಯಿಂದ ನೀರನ್ನು ಹೊರಗೆ ಬಿಡಲಾಗುತ್ತಿದ್ದು, ಸ್ನಾನಘಟ್ಟದಲ್ಲಿ ನೀರು ತುಂಬಿದೆ. ಕುಮಾರಧಾರ ನದಿಯಲ್ಲೂ ನೀರಿನ ಹರಿವು ಆರಂಭವಾಗಿದೆ.

ಕುಂದಾಪುರ ತಾಲ್ಲೂಕಿನ ಮುಂಡ್ಕೂರಿನಲ್ಲಿ ಬುಧವಾರ ರಾತ್ರಿ ಸಿಡಿಲು ಬಡಿದು ಮನೆಗೆ ಹಾನಿಯಾಗಿದೆ. ಮನೆಯ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಉಪ್ಪುಂದ ಸಮೀಪದ ಚಮ್ಟೆಹರ್ಲು ಬಳಿ ವಿದ್ಯುತ್‌ ತಂತಿ ತುಳಿದು ಶಾರದಾ ಶೆಟ್ಟಿ (83) ಎಂಬ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಆಗಾಗ ಬಿರುಸಿನ ಮಳೆಯಾಗಿದೆ. ಕಾರವಾರ ಹೊರವಲಯದ ಬಾಂಡಿಶಿಟ್ಟಾ ಸಮೀಪ ಗುಡ್ಡದ ಮೇಲೆ ಅಳವಡಿಸಲಾದ 33 ಕೆ.ವಿ. ವಿದ್ಯುತ್ ಮಾರ್ಗದ ಎರಡು ಕಂಬಗಳು ಬುಧವಾರ ಮಧ್ಯಾಹ್ನ ಬೀಸಿದ ರಭಸದ ಗಾಳಿಗೆ ಮುರಿದು ಬಿದ್ದ ಕಾರಣ ನಗರದ ಅರ್ಧಕ್ಕೂ ಹೆಚ್ಚು ಭಾಗದಲ್ಲಿ ಗುರುವಾರ ಸಂಜೆಯಾದರೂ ವಿದ್ಯುತ್ ಇರಲಿಲ್ಲ. ಇದರಿಂದ ನಾಗರಿಕರು ದೈನಂದಿನ ಕೆಲಸಗಳನ್ನು ಮಾಡಿಕೊಳ್ಳಲು ಪರದಾಡಿದರು. ಹೊನ್ನಾವರ ತಾಲ್ಲೂಕಿನಲ್ಲಿ 70 ವಿದ್ಯುತ್ ಕಂಬಗಳು ಮುರಿದುಬಿದ್ದಿದ್ದು, ಗ್ರಾಮೀಣ ಪ್ರದೇಶದ ಕೆಲ ಭಾಗಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.

ಹುಬ್ಬಳ್ಳಿ, ಧಾರವಾಡ, ಬಳ್ಳಾರಿ, ಹಾವೇರಿಯಲ್ಲಿ ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ನಗರ ಹೋಬಳಿಯಲ್ಲಿ ಭಾರಿ ಮಳೆ ಆಗುತ್ತಿದೆ. ಇಲ್ಲಿನ ಜಲಾಶಯಗಳ ವ್ಯಾಪ್ತಿ ಪ್ರದೇಶ ಮತ್ತು ಘಟ್ಟ ಪ್ರದೇಶಗಳಲ್ಲಿ ಬುಧವಾರ ಸಂಜೆಯಿಂದ ಮಳೆ ಬಿರುಸುಗೊಂಡಿದ್ದು ಗುರುವಾರವೂ ಮುಂದುವರಿದಿದೆ.

ಶೀತಗಾಳಿ ಬೀಸುತ್ತಿದ್ದು, ಎದುರಿನ ಪರಿಸರವೇ ಕಾಣದಷ್ಟು ಮಂಜು ಮುಸುಕಿದೆ. ಇದರಿಂದ ಹುಲಿಕಲ್ ಮತ್ತು ನಾಗೋಡಿ ಘಾಟಿ ರಸ್ತೆಯಲ್ಲಿ ಸಂಚಾರ ಕಷ್ಟವಾಗಿದೆ.

ಶಿವಮೊಗ್ಗ ನಗರ ಹಾಗೂ ಸುತ್ತಮುತ್ತ, ಶಿಕಾರಿಪುರ, ಸೊರಬ, ರಿಪ್ಪನ್‌ಪೇಟ್, ಭದ್ರಾವತಿಯಲ್ಲಿ ತುಂತುರು ಮಳೆಯಾಗಿದ್ದು, ಸಾಗರ, ತೀರ್ಥಹಳ್ಳಿ, ಕೋಣಂದೂರಿನಲ್ಲಿ ಸಾಧಾರಣ ಮಳೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ. ಚಿಕ್ಕಮಗಳೂರು ನಗರ, ಮೂಡಿಗೆರೆ, ಕಳಸ, ಎನ್‌.ಆರ್‌.ಪುರ, ಕೊಪ್ಪ, ಶೃಂಗೇರಿ ಭಾಗಗಳಲ್ಲಿ ತುಂತುರು ಮಳೆಯಾಗಿದೆ.

ಕೊಡಗು ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !