ಭಾನುವಾರ, ಜುಲೈ 3, 2022
27 °C
ಆಯೋಗದ ಸದಸ್ಯ ಜಗದೀಶ ಹಿರೇಮನಿ ಭರವಸೆ l ಮೂರು ಸಾವಿರ ಸುಲಭ ಶೌಚಾಲಯ

300 ಸಫಾಯಿ ಕಾರ್ಮಿಕರ ಕಾಯಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಜಲಮಂಡಳಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ 300 ನಿರ್ಮಲೀಕರಣ ಕಾರ್ಮಿಕರನ್ನು ಕಾಯಂ ಮಾಡಿಕೊಳ್ಳುವ ಕಾರ್ಯ ಅಂತಿಮ ಹಂತದಲ್ಲಿದೆ. ಈ ಪ್ರಸ್ತಾವ
ವನ್ನು ಆರ್ಥಿಕ ಇಲಾಖೆಯ ಅನುಮತಿಗೆ ಕಳುಹಿಸಲಾಗಿದೆ’ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಜಗದೀಶ ಹಿರೇಮನಿ ತಿಳಿಸಿದರು. 

ಬಿಬಿಎಂಪಿ ಮತ್ತು ಜಲಮಂಡಳಿ ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ
ಮಾತನಾಡಿದ ಅವರು, ‘ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಿರ್ಮಲೀಕರಣ ಕಾರ್ಮಿಕರನ್ನು ಕಾಯಂ ಮಾಡುವುದರ ಜೊತೆಗೆ, ಹೊಸದಾಗಿ 600 ಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ತೆಗೆದುಕೊಳ್ಳಬೇಕು. ಅವರನ್ನು ಆಯ್ಕೆ ಮಾಡುವಾಗ ಈ ಹಿಂದೆ, ಮಲ ಹೊರುವ ಕೆಲಸದಲ್ಲಿ ತೊಡಗಿದ್ದವರಿಗೆ ಮತ್ತು ಅವರ ಕುಟುಂಬದವರಿಗೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.  

ಸುಲಭ ಶೌಚಾಲಯ ನಿರ್ಮಾಣ: ನಗರದಲ್ಲಿ ಇನ್ನೆರಡು ತಿಂಗಳಲ್ಲಿ 3,000ಕ್ಕೂ ಹೆಚ್ಚು ಸುಲಭ ಶೌಚಾಲಯಗಳು ನಿರ್ಮಾಣಗೊಳ್ಳಲಿವೆ. ಇವುಗಳ ನಿರ್ವಹಣೆ ಹೊಣೆಯನ್ನು ಸಫಾಯಿ ಕರ್ಮಚಾರಿಗಳು ಮತ್ತು ಅವರ ಕುಟುಂಬದವರಿಗೇ ನೀಡಬೇಕು’ ಎಂದರು. 

‘ಸದ್ಯ ಬೆಂಗಳೂರಿನಲ್ಲಿ 6,000 ಸುಲಭ ಶೌಚಾಲಯಗಳಿವೆ. ಅನ್ಯರಾಜ್ಯದವರು ಇವುಗಳ ನಿರ್ವಹಣೆ ಗುತ್ತಿಗೆ ಪಡೆದು, ನಮ್ಮವರಿಂದಲೇ ಕೆಲಸ ಮಾಡಿಸುತ್ತಿದ್ದರು. ಸರ್ಕಾರ ಗುರುತಿಸಿದ 6,000 ಸಫಾಯಿ ಕರ್ಮಚಾರಿಗಳ ಪಟ್ಟಿ ನಮ್ಮಲ್ಲಿದೆ. ಇವರಿಗೆ ಇನ್ನು ಮುಂದೆ ನಿರ್ಮಾಣವಾಗುವ ಹೊಸ ಶೌಚಾಲಯಗಳ ನಿರ್ವಹಣೆ ಹೊಣೆ ನೀಡಬೇಕು. ಈಗಾಗಲೇ ಬೇರೆ ರಾಜ್ಯದವರಿಗೆ ನೀಡಲಾಗಿರುವ ಗುತ್ತಿಗೆ ಅವಧಿ ಮುಗಿದ ಬಳಿಕ, ನಮ್ಮ ರಾಜ್ಯದ ಸಫಾಯಿ ಕರ್ಮಚಾರಿಗಳಿಗೆ ಅದರ ಗುತ್ತಿಗೆ ನೀಡಬೇಕು’ ಎಂದು ಅವರು ತಿಳಿಸಿದರು. 

ಕಸ ಆಯುವವರಿಗೆ ಹೊಣೆ: ‘ಬಿಬಿಎಂಪಿ ವ್ಯಾಪ್ತಿಯಲ್ಲಿ 30ರಿಂದ 40 ಕಡೆ ಒಣ ಕಸ ಸಂಗ್ರಹ ಘಟಕಗಳಿವೆ. ಪ್ಲಾಸ್ಟಿಕ್‌, ಗುಜರಿ ಮುಂತಾದ ಕಸ ಆಯುವವರೇ ಇವುಗಳ ನಿರ್ವಹಣೆ ಮಾಡುತ್ತಿದ್ದಾರೆ. ಇಂತಹ ಘಟಕ ನಡೆಸುವವರಿಗೆ ಸಂಬಳವಿಲ್ಲ. ಕಸದ ಮಾರಾಟದಿಂದ ಬಂದ ಹಣವನ್ನು ಅವರಿಗೆ ನೀಡಲಾಗುತ್ತದೆ. ಇದರಿಂದ ಅವರಿಗೆ ತಿಂಗಳಿಗೆ ₹15 ಸಾವಿರದಿಂದ ₹17 ಸಾವಿರದವರೆಗೆ ವರಮಾನ ಬರುತ್ತದೆ. ಆದರೆ, ಕೆಲವೆಡೆ ಪಾಲಿಕೆ ಸದಸ್ಯರು ಶಿಫಾರಸು ಮಾಡಿದವರಿಗೆ, ಪ್ರಭಾವಿಗಳು ಹೇಳಿದವರಿಗೆ ಇಂತಹ ಘಟಕಗಳ ನಿರ್ವಹಣೆಯ ಹೊಣೆ ನೀಡಲಾಗಿದೆ. ಕಸ ಆಯುವ ಕಾಯಕದಲ್ಲಿ ತೊಡಗಿರುವ 3000 ಮಂದಿಯನ್ನು ಬಿಬಿಎಂಪಿ ಗುರುತಿಸಿದೆ. ಈ ಹೊಣೆಯನ್ನು ಅವರಿಗೇ ನೀಡಬೇಕು’ ಎಂದು ಹಿರೇಮನಿ ತಿಳಿಸಿದರು. 

ಸಣ್ಣ ಯಂತ್ರಗಳ ಖರೀದಿ: ‘ದ್ರವತ್ಯಾಜ್ಯ ಹೀರುವ 30 ಸಣ್ಣ ಯಂತ್ರಗಳನ್ನು (ಸಕ್ಕಿಂಗ್‌ ಮಷಿನ್‌) ಖರೀದಿಸುವಂತೆ ಜಲಮಂಡಳಿಗೆ ಸೂಚಿಸಲಾಗಿದೆ. ಬ್ಯಾಂಕ್‌ನಿಂದ ಸಾಲ ಪಡೆದು ಇವುಗಳನ್ನು ಖರೀದಿಸಿ, ಅವುಗಳನ್ನು ಸಫಾಯಿ ಕರ್ಮಚಾರಿಗಳಿಗೆ ನೀಡುವ ಉದ್ದೇಶವಿದೆ. ಈ ಯಂತ್ರಗಳು ಜಲಮಂಡಳಿ ಸುಪರ್ದಿಯಲ್ಲೇ ಇರಲಿವೆ. ಆದರೆ, ಸಫಾಯಿ ಕರ್ಮಚಾರಿಗಳಿಗೆ ಉದ್ಯೋಗ ದೊರಕಿಸಲು ನೆರವಾಗಲಿವೆ’ ಎಂದು ಅವರು ವಿವರಿಸಿದರು. 

ತನಿಖೆ ಸಮರ್ಪಕವಾಗಿಲ್ಲ: ‘ಭವಿಷ್ಯ ನಿಧಿ (ಪಿಎಫ್‌) ಹಾಗೂ  ಕಾರ್ಮಿಕರ ವಿಮೆ (ಇಎಸ್‌ಐ) ಕಂತು ಪಾವತಿಯಲ್ಲಿ ಹಾಗೂ ಪೌರ ಕಾರ್ಮಿಕರ ನಕಲಿ ಪಟ್ಟಿ ತಯಾರಿಸಿ ಸಂಬಳ ಪಡೆದ ಪ್ರಕರಣಗಳಲ್ಲಿ ₹850 ಕೋಟಿ ಅವ್ಯವಹಾರ ನಡೆದಿರುವ ಪ್ರಕರಣದ ತನಿಖೆಯನ್ನು ಎಸಿಬಿ ಸಮರ್ಪಕವಾಗಿ ನಡೆಸುತ್ತಿಲ್ಲ’ ಎಂದು ಅವರು ಸಮಾಧಾನ ವ್ಯಕ್ತಪಡಿಸಿದರು.

‘ಕನಿಷ್ಠ ವೇತನ ಹೆಚ್ಚಳಕ್ಕೆ ಕ್ರಮ’

‘ಪೌರ ಕಾರ್ಮಿಕರಿಗೆ ತಿಂಗಳಿಗೆ ₹17,300 ಕನಿಷ್ಠ ವೇತನ ನಿಗದಿಪಡಿಸಿದ್ದು, ಪಿಎಫ್‌, ಇಎಸ್‌ಐ ಕಂತು ಕಡಿತಗೊಳಿಸಿ ₹16 ಸಾವಿರ ನೀಡಲಾಗುತ್ತಿದೆ. ಕನಿಷ್ಠ ವೇತನವನ್ನು ₹19 ಸಾವಿರಕ್ಕೆ ಹೆಚ್ಚಿಸುವ ಪ್ರಸ್ತಾವವಿದೆ. ಇದು ಜಾರಿಗೆ ಬರಲು ಒಂದು ವರ್ಷವಾಗಬಹುದು’ ಎಂದು ಜಗದೀಶ ಹಿರೇಮನಿ ತಿಳಿಸಿದರು. 

‘ನಮಗೆ ₹16 ಸಾವಿರದ ಬದಲಿಗೆ, ₹13 ಸಾವಿರ ವೇತನ ನೀಡಲಾಗುತ್ತಿದೆ. ಭಾನುವಾರ ಕೆಲಸಕ್ಕೆ ಹೋಗದಿದ್ದರೆ, ವೇತನ ಕಡಿತಗೊಳಿಸಿ ₹12 ಸಾವಿರ ನೀಡುತ್ತಾರೆ’  ಎಂದು ಸ್ಥಳದಲ್ಲಿದ್ದ ಪೌರಕಾರ್ಮಿಕರು ದೂರಿದರು. 

ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ ಎಂದು ಹಿರೇಮನಿ ಭರವಸೆ ನೀಡಿದರು.

‘ಎಸ್‌ಟಿಪಿ ಮೇಲ್ವಿಚಾರಣೆಗೆ ಕಾರ್ಯಪಡೆ’

ಖಾಸಗಿ ಮಾಲೀಕತ್ವದ ಕೊಳಚೆನೀರು ಶುದ್ಧೀಕರಣ ಘಟಕಗಳ (ಎಸ್‌ಟಿಪಿ) ದುರಸ್ತಿ ವೇಳೆ ಪೌರಕಾರ್ಮಿಕರು ಸಾವಿಗೀಡಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ನಗರದಲ್ಲಿ 220 ಖಾಸಗಿ ಎಸ್‌ಟಿಪಿಗಳಿವೆ. ಇವುಗಳ ನಿರ್ವಹಣೆ ಮತ್ತು ಕಾರ್ಯಾಚರಣೆಗೆ ಪ್ರತ್ಯೇಕ ಸಮಿತಿ ಮಾಡಬೇಕು. ಇವುಗಳ ಮೇಲ್ವಿಚಾರಣೆಗೆಂದೇ ಜಲಮಂಡಳಿ ಕಾರ್ಯಪಡೆಯೊಂದನ್ನು ರಚಿಸಬೇಕು’ ಎಂದು ಹಿರೇಮನಿ ಸೂಚಿಸಿದರು. 

‘ಅಗ್ನಿಶಾಮಕ ದಳದಂತೆ ಈ ಕಾರ್ಯಪಡೆಯೂ ಕಾರ್ಯನಿರ್ವಹಿಸುವಂತಾಗಬೇಕು. ಕಾರ್ಯಪಡೆಗೆ 200ರಿಂದ 300  ಮಂದಿಯನ್ನು ನೇಮಿಸಿ ಅವರಿಗೆ ತರಬೇತಿ ನೀಡಬೇಕು. ಇದರಲ್ಲೂ ಸಫಾಯಿ ಕರ್ಮಚಾರಿಗಳಿಗೆ ಆದ್ಯತೆ ನೀಡಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು