ಗುರುವಾರ , ಜೂನ್ 24, 2021
22 °C
ಆಧಾರ್ ನೋಂದಣಿಗೆ ರೈತಾಪಿ ವರ್ಗದ ನೂಕುನುಗ್ಗಲು

ಬಾಗಲಕೋಟೆ: ರಾತ್ರಿಯಿಡೀ ಬೀದಿಯಲ್ಲೇ ಕಾಲಕಳೆದರು!

ವೆಂಕಟೇಶ್ ಜಿ.ಎಚ್. Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ‘ಆಧಾರ್ ಕಾರ್ಡ್ ನೆಪದಲ್ಲಿ ನಮ್ಮನ್ನು (ರೈತರನ್ನು) ಬೀದಿಗೆ ತಂದಿದ್ದಾರೆ. ಇಲ್ಲಿ ವಸ್ತಿ (ವಾಸ್ತವ್ಯ) ಉಳಿಯುವ ಕಲ್ಪನೆ ಇಲ್ಲದೇ ನಾವು ಹಾಸಿಗೆ ತಂದಿರಲಿಲ್ಲ. ರಾತ್ರಿಯಿಡೀ ಸೊಳ್ಳೆ ಕಾಟದಿಂದ ಮಕ್ಕಳು ಮಲಗಿಲ್ಲ’ ಎಂದು ಬಾದಾಮಿ ತಾಲ್ಲೂಕಿನ ಬಾಚಿನಗುಡ್ಡದ ರಾಚನಗೌಡ ಚನ್ನನಗೌಡ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ನವನಗರದ ಕರ್ನಾಟಕ ಒನ್ ಕೇಂದ್ರದ ಎದುರು ಆಧಾರ್ ನೋಂದಣಿಗೆ ಬಾಚಿನಗುಡ್ಡ ಹಾಗೂ ಪಟ್ಟದಕಲ್ಲಿನಿಂದ ವಾಹನ ಮಾಡಿಕೊಂಡು ಕುಟುಂಬ ಸಮೇತ ಬಂದಿದ್ದ 40 ಮಂದಿಯ ತಂಡ ಭಾನುವಾರ ಮುಂಜಾನೆ ಪಾಳಿಯಲ್ಲಿ ನಿಂತಿತ್ತು. ಈ ವೇಳೆ ತಂಡದ ಸದಸ್ಯರು ‘ಪ್ರಜಾವಾಣಿ’ ಎದುರು ತಮ್ಮ ಅಳಲು ತೋಡಿಕೊಂಡರು.

ಬಾದಾಮಿ ತಾಲ್ಲೂಕಿನಿಂದ ಮಾತ್ರವಲ್ಲ, ಜಿಲ್ಲೆಯ ವಿವಿಧೆಡೆಯಿಂದ ನೂರಾರು ಸಂಖ್ಯೆಯಲ್ಲಿ ಬಂದಿದ್ದ ಗ್ರಾಮೀಣರು ರಜೆಯ ದಿನವೂ ಆಧಾರ್ ನೋಂದಣಿಗೆ ಮುಗಿಬಿದ್ದರು. ದಿನಕ್ಕೆ 40 ಮಂದಿಗೆ ಮಾತ್ರ ಅವಕಾಶವಿರುವುದರಿಂದ ಶನಿವಾರ ನೋಂದಣಿ ಮಾಡಿಸಲಾಗದವರು ರಾತ್ರಿ ‘ಕರ್ನಾಟಕ ಒನ್‌’ ಕೇಂದ್ರದ ಮುಂಭಾಗದ ರಸ್ತೆಯಲ್ಲಿಯೇ ವಾಸ್ತವ್ಯ ಹೂಡಿದ್ದರು. ಮಕ್ಕಳು, ದೊಡ್ಡವರು ಎನ್ನದೇ ಎಲ್ಲರೂ ಅಲ್ಲಿಯೇ ಮಲಗಿ ಕಾಲಕಳೆದಿದ್ದರು.

‘ರೇಷನ್‌ ಕಾರ್ಡ್‌ಗೆ ಆಧಾರ್ ಜೋಡಣೆಗೆ ಎರಡು ತಿಂಗಳು ಸಮಯ ಕೊಟ್ಟಿದ್ದಾರೆ. ಶನಿವಾರ ಸಂಜೆ 5 ಗಂಟೆಗೆ 18 ಮಕ್ಕಳೊಂದಿಗೆ 40 ಮಂದಿ ಊರಿನಿಂದ ಗಾಡಿ ಮಾಡಿಕೊಂಡು ಬಂದಿದ್ದೇವೆ. ರಾತ್ರಿ ಇಲ್ಲಿಯೇ ಮಲಗಿದರೂ ಬೆಳಿಗ್ಗೆ ನಮಗೆ ಪಾಳಿ ಸಿಕ್ಕಿಲ್ಲ. ಇವತ್ತೂ ರಸ್ತೆಯಲ್ಲಿಯೇ ಕಾಲ ಕಳೆಯಬೇಕಿದೆ’ ಎಂದು ಬಾದಾಮಿ ತಾಲ್ಲೂಕಿನ ಬಾಚಿನಗುಡ್ಡದ ಗಂಗಮ್ಮ ಹಾಲಿಗೇರಿ ಅಳಲು ತೋಡಿಕೊಂಡರು.

‘ನಮಗೆ ಇವತ್ತೂ ಪಾಳಿ ಬರುವ ವಿಶ್ವಾಸವಿಲ್ಲ. ಇಲ್ಲಿ ಅಷ್ಟೊಂದು ನೂಕುನುಗ್ಗಲು ಇದೆ. ನಮಗೇನೊ ತೊಂದರೆ ಆಗಿದೆ. ಮುಂದೆ ಬರುವವರಿಗೆ ಹಾಗೆ ಆಗದಂತೆ ನೀವು (ಮಾಧ್ಯಮದವರು) ನೋಡಿಕೊಳ್ಳಿ’ ಎಂದು ಪಟ್ಟದಕಲ್ಲಿನ ವೀರಣ್ಣಗೌಡ ಮನವಿ ಮಾಡಿದರು.

‘ನಿನ್ನೆ ರಾತ್ರಿ 9 ಗಂಟೆಗೆ ಇಲ್ಲಿಗೆ ಬಂದಿದ್ದೇನೆ. ಇವತ್ತು 38ನೇ ಪಾಳಿ ಸಿಕ್ಕಿದೆ. ಇವತ್ತು ಇಡೀ ದಿನ ಇಲ್ಲಿಯೇ ಕಾಲ ಕಳೆಯಬೇಕು’ ಎಂದು ಕಟಗೇರಿಯ ಮಂಜುನಾಥ ಆನೆಗುಂದಿ ಬೇಸರ ವ್ಯಕ್ತಪಡಿಸಿದರು.

‘ಶಾಲೆಯಲ್ಲಿ ಮಕ್ಕಳಿಗೆ ಆಧಾರ್ ಕಾರ್ಡ್ ಕೇಳುತ್ತಿದ್ದಾರೆ. ಎರಡು ದಿನ ರಜೆ ಹಾಕಿ ಬಂದಿದ್ದೆವು. ಈಗ ವಾರ ಕಳೆದಿದೆ. ಮಕ್ಕಳನ್ನು ಶಾಲೆ ಬಿಡಿಸಿದ್ದಕ್ಕೆ ಊರಿಗೆ ಮರಳಿದ ಮೇಲೆ ಶಿಕ್ಷಕರೆದುರು ಸಮಜಾಯಿಷಿ ನೀಡಬೇಕಿದೆ’ ಎಂದು ಉಡುಪಿ ಜಿಲ್ಲೆ ಕಾಪುವಿನಿಂದ ಬಂದಿದ್ದ ಪಾದಪ್ಪ ಉಂಡಿ ಹಾಗೂ ನೀಲವ್ವ ದಂಪತಿ ನೋವು ತೋಡಿಕೊಂಡರು. ಬಾದಾಮಿ ತಾಲ್ಲೂಕಿನ ರಾಘಾಪುರದ ಪಾದಪ್ಪ–ನೀಲವ್ವ ದಂಪತಿ ಕೆಲಸ ಅರಸಿ ಕಾಪುಗೆ ಗುಳೇ ಹೋಗಿ ಅಲ್ಲಿಯೇ ನೆಲೆಸಿದ್ದಾರೆ.

‘ಸೂಳೇಬಾವಿಯಲ್ಲಿ ಆಧಾರ್ ಕೇಂದ್ರ ಬಂದ್ ಆಗಿದೆ. ಹಾಗಾಗಿ ಇಲ್ಲಿಗೆ ಬಂದೆನು. ರಾತ್ರಿ ಇಲ್ಲಿಯೇ ವಸತಿ ಉಳಿಯುವಂತಾಯಿತು’ ಎಂದು ಹುನಗುಂದ ತಾಲ್ಲೂಕು ಕೆಲೂರಿನಿಂದ ಬಂದಿದ್ದ ಹನಮಪ್ಪ ಯಳವರ ಹೇಳಿದರು.

ಆಧಾರ್ ನೋಂದಣಿ; ಹೆಚ್ಚಿದ ಬೇಡಿಕೆ..

ಬಿತ್ತನೆಗೆ ಬೀಜ ಕೊಳ್ಳಲು, ಶಾಲೆಯಲ್ಲಿ ಮಕ್ಕಳಿಗೆ ಸ್ಕಾಲರ್‌ಶಿಪ್‌ಗೆ ಅರ್ಜಿ ಹಾಕಲು, ಬ್ಯಾಂಕ್ ವಹಿವಾಟು, ರೇಷನ್‌ ಕಾರ್ಡ್‌, ಸಾಲ ಮನ್ನಾ ಯೋಜನೆ, ಇ–ಕೆವೈಸಿ, ಆರೋಗ್ಯ ಸೇವೆ ಪಡೆಯಲು, ಆಸ್ತಿ ನೋಂದಣಿಗೆ ಆಧಾರ್‌ ಕಾರ್ಡ್ ಜೋಡಣೆ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಹೀಗಾಗಿ ಆಧಾರ್ ನೋಂದಣಿಗೆ ಬೇಡಿಕೆ ಹೆಚ್ಚಿದೆ.

ಈ ಮಧ್ಯೆ ಗ್ರಾಮ ಪಂಚಾಯ್ತಿ ಹಾಗೂ ಬ್ಯಾಂಕ್‌ಗಳಲ್ಲಿ ಆಧಾರ್ ನೋಂದಣಿ ಸ್ಥಗಿತಗೊಳಿಸಲಾಗಿದೆ. ಸಿಬ್ಬಂದಿ ಕೊರತೆ ಎಂಬ ಕಾರಣ ನೀಡಿ ಅಲ್ಲಿ ಸೇವೆ ನಿಲ್ಲಿಸಿದ್ದಾರೆ. ಬಾದಾಮಿ ತಾಲ್ಲೂಕು ಕೇಂದ್ರ ಹಾಗೂ ನಾಡ ಕಚೇರಿಗಳಲ್ಲಿ ತಾಂತ್ರಿಕ ಕಾರಣದಿಂದ ನೋಂದಣಿ ನಿಲ್ಲಿಸಲಾಗಿದೆ. ಒಂದೆಡೆ ಎಲ್ಲದಕ್ಕೂ ಆಧಾರ್ ಜೋಡಣೆ ಕಡ್ಡಾಯ ಮಾಡಿ, ಇನ್ನೊಂದೆಡೆ ನೋಂದಣಿ ಕಾರ್ಯ ಸ್ಥಗಿತಗೊಳಿಸಿರುವುದು ಫಲಾನುಭವಿಗಳ ಆಕ್ರೋಶಕ್ಕೆ ಕಾರಣವಾಗಿದೆ.

**

ಸಮಸ್ಯೆಯ ಗಂಭೀರತೆ ಬಗ್ಗೆ ಈಗಾಗಲೇ ಸಂಬಂಧಿಸಿದವರಿಗೆ ಪತ್ರ ಬರೆಯಲಾಗಿದೆ. ಶೀಘ್ರ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಇಲ್ಲಿಯ ಪರಿಸ್ಥಿತಿ ಅರ್ಥೈಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲಾಗುವುದು.
- ಆರ್.ರಾಮಚಂದ್ರನ್, ಜಿಲ್ಲಾಧಿಕಾರಿ 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು