ದನಿ ಇಲ್ಲದವರ ಸಂಕಷ್ಟ ಆಲಿಸಲು ಆಯೋಗಕ್ಕೆ ಬಲ ತುಂಬಿ

ಶನಿವಾರ, ಜೂಲೈ 20, 2019
26 °C
ಬಾಯಿ ಇದ್ದೂ ಧ್ವನಿ ಕಳೆದುಕೊಂಡಿರುವ ಸಮುದಾಯದ ಸಂಕಟಗಳಿಗೆ ಕಿವಿಗೊಡದೇ ಇರುವುದು ಪ್ರಜ್ಞಾವಂತ ಸರ್ಕಾರಕ್ಕೆ ತಕ್ಕುದಾದ ನಡವಳಿಕೆಯಲ್ಲ

ದನಿ ಇಲ್ಲದವರ ಸಂಕಷ್ಟ ಆಲಿಸಲು ಆಯೋಗಕ್ಕೆ ಬಲ ತುಂಬಿ

Published:
Updated:
Prajavani

ನಿತ್ಯ ನೋವನ್ನೇ ಉಂಡು ಮಲಗುವ, ದನಿ ಇರದ ಸಮುದಾಯಗಳ ಬಗ್ಗೆ ಕಾಳಜಿ ತೋರುವುದು ಯಾವುದೇ ಸರ್ಕಾರದ ಆದ್ಯತೆಯಾಗಬೇಕು. ಜನರ ಕಷ್ಟಗಳನ್ನು ಆಲಿಸಿ, ಅವರಿಗೆ ಬದುಕಿನಲ್ಲಿ ಭರವಸೆಯ ಬೆಳಕು ಮೂಡಿಸುವ ಆಶಯದಲ್ಲಿ ಆಯೋಗ, ಸಮಿತಿ, ದೂರು ಪ್ರಾಧಿಕಾರದಂತಹ ಸಾಂಸ್ಥಿಕ ರಚನೆಗಳು ಜೀವ ತಳೆದವು. ಇತ್ತೀಚಿನ ದಿನಮಾನಗಳಲ್ಲಿ ಇಂತಹ ಸಂಸ್ಥೆಗಳು ಶಾಸಕರಿಗೆ, ಅಧಿಕಾರ ಸಿಗದ ಅತೃಪ್ತರಿಗೆ ಗಂಜಿಕೇಂದ್ರಗಳಾಗಿ ಪರಿವರ್ತನೆಯಾಗಿವೆ. ದೌರ್ಜನ್ಯಗಳಿಂದ ಬಳಲಿ ಬೆಂಡಾದವರಿಗೆ, ಅಸ್ಪೃಶ್ಯತೆಯ ಕ್ರೌರ್ಯ ತರುವ ಅವಮಾನ ಸಹಿಸಿ ಸಾಕಾದವರಿಗೆ ತಮ್ಮ ದುಮ್ಮಾನ ಹೇಳಿಕೊಳ್ಳಲು 2003ರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಆಯೋಗವನ್ನು ರಾಜ್ಯದಲ್ಲಿ ಅಸ್ತಿತ್ವಕ್ಕೆ ತರಲಾಯಿತು. ಇಂತಹ ಕಡೆಗಳಲ್ಲಿ ದೂರುಗಳಿಗೆ ನ್ಯಾಯ ಸಿಗುತ್ತದೆಯೋ ಇಲ್ಲವೋ ಅದು ಬೇರೆ ಮಾತು. ದೂರನ್ನು ಆಲಿಸುವ ಜಾಗವೊಂದು ಇದೆಯೆಂಬ ನಂಬಿಕೆಯೇ ದಮನಿತರಲ್ಲಿ ಬದುಕುವ ವಿಶ್ವಾಸವನ್ನು ಮೂಡಿಸಬಲ್ಲದು. ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವೇ ಕಳೆದುಹೋಯಿತು. ದಲಿತರ ದೂರು ಸ್ವೀಕರಿಸಿ ಸಾಂತ್ವನ ಹೇಳುವ ಅಧಿಕಾರ ಇರುವ ಆಯೋಗಕ್ಕೆ ಅಧ್ಯಕ್ಷರನ್ನು ನೇಮಿಸುವ ‘ಔದಾರ್ಯ’ವನ್ನು ಸರ್ಕಾರ ತೋರಿಲ್ಲ. ಆಯೋಗದ ಮುಂದೆ 2,752 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಇರುವ ಕಾರ್ಯದರ್ಶಿಗೆ, ಆರೋಪಿಗಳಿಗೆ ಸಮನ್ಸ್ ನೀಡಿ ವಿಚಾರಣೆ ನಡೆಸುವ ಅಧಿಕಾರವಿಲ್ಲ. ದಲಿತರಲ್ಲಿ ಧೈರ್ಯ ತುಂಬಿ, ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡುವ ಅಧಿಕಾರ ಇರುವ ಅಧ್ಯಕ್ಷರು ಆಯೋಗಕ್ಕೆ ಇಲ್ಲ. ಹೀಗಾಗಿ ಆಯೋಗ ಇದ್ದೂ ಸತ್ತಂತಾಗಿದೆ. ಅಧ್ಯಕ್ಷರ ನೇಮಕದ ಬಗ್ಗೆ ಕಾಳಜಿ–ಬದ್ಧತೆ ಇಲ್ಲವೆಂದ ಮೇಲೆ ಅಧಿಕಾರಿಗಳು, ಸಿಬ್ಬಂದಿಯನ್ನು ಸುಖಾಸುಮ್ಮನೆ ಕೂರಿಸಿ ಸಂಬಳ ಕೊಡುವುದಕ್ಕಷ್ಟೇ ಆಯೋಗ ಸೀಮಿತವಾಗುವುದರಲ್ಲಿ ಅರ್ಥ ಏನಿದೆ?

ಶೋಷಣೆಗೆ ಒಳಗಾದ ಜನರ ದುಃಖ–ದುಮ್ಮಾನ ಆಲಿಸುವ ಆಯೋಗಕ್ಕೆ ಬಲ ತುಂಬುವ ಕೆಲಸವನ್ನು ಮುಖ್ಯಮಂತ್ರಿ ಮುತುವರ್ಜಿಯಿಂದ ಮಾಡಬೇಕಾಗಿತ್ತು. ಇಷ್ಟು ಮಾತ್ರವಲ್ಲ, ದಲಿತರ ಮೇಲಿನ ದೌರ್ಜನ್ಯ ಪ್ರಕರಣ, ಶಿಕ್ಷೆಯ ಪ್ರಮಾಣದ ಬಗ್ಗೆ ಪರಿಶೀಲನೆ ನಡೆಸುವ ‘ರಾಜ್ಯ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ’ ಸಭೆ ನಡೆಸುವ ಕಾಳಜಿಯನ್ನಾದರೂ ತೋರಬೇಕಿತ್ತು. ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆ– 1989’ರ ಅಡಿಯಲ್ಲಿ ಈ ಸಮಿತಿ ರಚನೆಯಾಗಿದೆ. ಸಮಿತಿಗೆ ಮುಖ್ಯಮಂತ್ರಿಯೇ ಅಧ್ಯಕ್ಷರು. ರಾಜ್ಯ ಮಟ್ಟದ ಸಮಿತಿಯು ವರ್ಷಕ್ಕೆ ಎರಡು ಬಾರಿ ಸಭೆ ನಡೆಸಬೇಕು. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ಮಟ್ಟದ ಸಮಿತಿಯು ವರ್ಷಕ್ಕೆ ನಾಲ್ಕು ಸಭೆಗಳನ್ನು ನಡೆಸಬೇಕು. ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಲು ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ, ದಲಿತರ ಯೋಗಕ್ಷೇಮದ ಪರಾಮರ್ಶೆ, ಪ್ರಾಣ–ಮಾನದ ರಕ್ಷಣೆಯಲ್ಲಿ ಆಡಳಿತಯಂತ್ರ ಎಷ್ಟರಮಟ್ಟಿಗೆ ಸಕ್ರಿಯವಾಗಿದೆ ಎಂಬುದನ್ನು ದಾಖಲೆಸಹಿತ ಗಮನಿಸುವ, ಅಧಿಕಾರಿಗಳನ್ನು ಎಚ್ಚರಿಸುವ ಗುರುತರ ಜವಾಬ್ದಾರಿ ಈ ಸಮಿತಿಯದ್ದಾಗಿದೆ. ಮುಖ್ಯಮಂತ್ರಿ ಸ್ಥಾನದಲ್ಲಿ ಇರುವವರಿಗೆ ಅಧಿಕಾರ ಉಳಿಸಿಕೊಳ್ಳುವ, ಎಲ್ಲರನ್ನೂ ಸಂಭಾಳಿಸಿಕೊಂಡು ಹೋಗುವ ತಾಪತ್ರಯ ಇದ್ದದ್ದೇ. ಅದರ ಮಧ್ಯೆಯೂ ಅಲಕ್ಷಿತ ಸಮುದಾಯದ ಅಳಲು ಆಲಿಸಲು ಸಮಯ ಕೊಡಬೇಕಾದುದು ಸಾಂವಿಧಾನಿಕ ಕರ್ತವ್ಯ ಕೂಡ. ರಾಜ್ಯ ಮಟ್ಟದ ಸಮಿತಿ ಸಭೆಯನ್ನು ಮುಖ್ಯಮಂತ್ರಿ ನಡೆಸಿಲ್ಲ ಎಂದ ಮೇಲೆ ಜಿಲ್ಲಾಧಿಕಾರಿಗಳಿಗೂ ಸಹಜವಾಗಿಯೇ ತಾತ್ಸಾರ ಬರುತ್ತದೆ. ಜಿಲ್ಲಾಧಿಕಾರಿಗಳ ಸಭೆಯನ್ನು ಮುಖ್ಯಮಂತ್ರಿ ಇತ್ತೀಚೆಗೆ ನಡೆಸಿದಾಗ, 14 ಜಿಲ್ಲೆಗಳಲ್ಲಿ ಒಂದೇ ಒಂದು ಸಭೆ ನಡೆಸದೇ ಇರುವ ಸಂಗತಿಯೂ ಗೊತ್ತಾಗಿದೆ. ಉಳಿದ ಜಿಲ್ಲೆಗಳಲ್ಲಿ ವರ್ಷಕ್ಕೆ ನಾಲ್ಕು ಸಭೆ ಬದಲು ಒಂದೋ ಎರಡೋ ಸಭೆ ನಡೆದಿವೆ. ರಾಜ್ಯ ಮಟ್ಟದ ಸಮಿತಿ ಸಭೆಯನ್ನು ನಡೆಸಿದ್ದರೆ ದಲಿತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ‍ಪ್ರಕರಣಗಳ ನೈಜ ಚಿತ್ರಣವು ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ಸಿಗುತ್ತಿತ್ತು. ಧ್ವನಿ ಕಳೆದುಕೊಂಡಿರುವ ಸಮುದಾಯದ ಸಂಕಟಗಳಿಗೆ ಕಿವಿಗೊಡದೇ ಇರುವುದು ಸರ್ಕಾರಕ್ಕೆ ತಕ್ಕುದಾದ ನಡವಳಿಕೆಯಲ್ಲ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !