ಪದವೀಧರ ಶಿಕ್ಷಕರ ಬೃಹತ್ ಪ್ರತಿಭಟನೆ

ಬುಧವಾರ, ಜೂಲೈ 24, 2019
27 °C
ಸರ್ಕಾರದಿಂದ ಶಿಕ್ಷಕರ ವಿರೋಧಿ ನೀತಿ ಆರೋಪ

ಪದವೀಧರ ಶಿಕ್ಷಕರ ಬೃಹತ್ ಪ್ರತಿಭಟನೆ

Published:
Updated:
Prajavani

ಬಾಗಲಕೋಟೆ: ‘ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ‘ಪದವೀಧರ ಶಿಕ್ಷಕರು’ ಎಂದು ಪರಿಗಣಿಸಿ ವೇತನ ಶ್ರೇಣಿ ನಿಗದಿಪಡಿಸಬೇಕು’ ಎಂದು ಒತ್ತಾಯಿಸಿ ಮಂಗಳವಾರ  ಇಲ್ಲಿನ ಜಿಲ್ಲಾಡಳಿತ ಭವನದ ಎದುರು ಬೃಹತ್ ಪ್ರತಿಭಟನೆ ನಡೆಯಿತು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಪ್ರತಿಭಟನೆ ನೇತೃತ್ವ ವಹಿಸಿತ್ತು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ಬಾಗೇನವರ ಮಾತನಾಡಿ, ‘ಸರ್ಕಾರ ಶಿಕ್ಷಕರನ್ನು ಕಡೆಗಣಿಸುತ್ತಿದೆ. ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲು ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಆದರೆ ಸರ್ಕಾರ ನಮ್ಮ ಬೇಡಿಕೆಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸರ್ಕಾರ ನಮ್ಮ ಬೇಡಿಕೆಗಳನ್ನು ಶೀಘ್ರದಲ್ಲಿ ಈಡೇರಿಸಬೇಕು. ಇಲ್ಲದಿದ್ದರೆ ಶಿಕ್ಷಕರ ದಿನಾಚರಣೆ ಬಹಿಷ್ಕರಿಸಿ ಸೆಪ್ಟೆಂಬರ್ 5ರಂದು ‘ವಿಧಾನಸೌಧ ಚಲೋ’ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ವರ್ಗಾವಣೆ, ಬಡ್ತಿ, ವೇತನ ತಾರತಮ್ಯ ನಿವಾರಣೆ ಸೇರಿದಂತೆ ಶಿಕ್ಷಕರ ಎಲ್ಲ ಬೇಡಿಕೆಗಳನ್ನೂ ಈಡೇರಿಸುವುದಾಗಿ ಮುಖ್ಯಮಂತ್ರಿ ಬಹಿರಂಗವಾಗಿ ಘೋಷಿಸಿದ್ದರು. ಆದರೆ, ಈಗ ಅವರು ಮಾತು ಮರೆತು ಶಿಕ್ಷಕರ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿಯನ್ನೇ ಮುಂದುವರಿಸಬೇಕು. ಅಕ್ಟೋಬರ್ ತಿಂಗಳಲ್ಲಿ ಶಿಕ್ಷಕರ ಕೋರಿಕೆ ವರ್ಗಾವಣೆ ನಡೆಸಬೇಕು, ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಬೇಕು, ಶಿಕ್ಷಕರನ್ನು ಶಿಕ್ಷಕೇತರ ಕೆಲಸಗಳಿಗೆ ಬಳಸಿಕೊಳ್ಳುವ ವ್ಯವಸ್ಥೆ ನಿಲ್ಲಬೇಕು, 6ನೇ ವೇತನ ಆಯೋಗದ ಅಂತಿಮ ವರದಿಯ ಶಿಫಾರಸಿನ ಪ್ರಕಾರವೇ ಮುಖ್ಯ ಗುರುಗಳಿಗೆ ಬಡ್ತಿ ನೀಡಬೇಕು’ ಈ ಪ್ರಮುಖ ಬೇಡಿಕೆಗಳು ಈಡೇರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.

 ಜಿಲ್ಲಾಧಿಕಾರಿ ಕಚೇರಿ ಆವರಣ ತಲುಪುತ್ತಿದ್ದಂತೆಯೇ ಬೇಡಿಕೆಗಳ ಜೈಕಾರವನ್ನು ಕೂಗುತ್ತ ಮೆರವಣಿಗೆ ಸಾಗಿದರು. ಬೇಡಿಕೆಗಳನ್ನು ಗಿಗಿ ಪದದಲ್ಲಿ ಹೇಳುವ ಮೂಲಕ ಪ್ರತಿಭಟನೆನಡೆಸಿದರು. ಬಹುತೇಕ ಶಾಲೆಗಳಲ್ಲಿ ಶಿಕ್ಷಕರು ಇಲ್ಲದಿರುವುದು ಕಂಡು ಬಂದಿತು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಟಿ.ಕೋವಳ್ಳಿ, ಉಪಾಧ್ಯಕ್ಷರಾದ ಎಸ್.ಎಚ್.ಕಂದಗಲ್, ವಿ.ಕೆ.ಪತ್ತಾರ, ಖಜಾಂಚಿ ಪರಶುರಾಮ ಪಮ್ಮಾರ, ಸಹಕಾರ್ಯದರ್ಶಿಗಳಾದ ಅರ್ಜುನ ಕಾಖಂಡಕಿ, ಕೆ.ಎಮ್.ಕುಗಾಟೆ, ಎಸ್.ಬಿ.ಅನಂತಪುರ, ಬಿ.ಎಸ್.ಸಜ್ಜನ ಮತ್ತಿತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !