ಬುಧವಾರ, ಆಗಸ್ಟ್ 21, 2019
28 °C
ಕೌಟುಂಬಿಕ ಕಲಹಕ್ಕೆ ಅಕ್ರಮ ಸಂಬಂಧ ಕಾರಣ?

ಪತಿ– ಪತ್ನಿ ಮಧ್ಯೆ ಜಗಳ: ಹೆಣ್ಣು ಮಕ್ಕಳೊಡನೆ ತಾಯಿ ಆತ್ಮಹತ್ಯೆ

Published:
Updated:
Prajavani

ಬೆಂಗಳೂರು: ಪತಿಯ ನಡವಳಿಕೆಯಿಂದ ಬೇಸತ್ತ ಮಹಿಳೆಯೊಬ್ಬರು ತಮ್ಮ ಇಬ್ಬರು ಮಕ್ಕಳೊಂದಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶ್ರೀನಗರದ ಕಾಳಪ್ಪ ಬಡಾವಣೆಯಲ್ಲಿ ನಡೆದಿದೆ.

ರಾಜೇಶ್ವರಿ (42), ಪುತ್ರಿಯರಾದ ಮಾನಸ (17), ಭೂಮಿಕಾ (15) ಆತ್ಮಹತ್ಯೆ ಮಾಡಿಕೊಂಡವರು. ಸೋಮವಾರ ನಸುಕಿನಲ್ಲಿ ಈ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಬೆಳಗ್ಗೆ 9.30ರ ಸುಮಾರಿಗೆ ರಾಜೇಶ್ವರಿ ಅವರ ಸಹೋದರ ಮನೆಗೆ ಬಂದಾಗ ದುರ್ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಹನುಮಂತನಗರ ಪೊಲೀಸರು, ಪತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಬೆಸ್ಕಾಂನಲ್ಲಿ ‘ಡಿ’ ಗ್ರೂಪ್‌ ನೌಕರ ಸಿದ್ಧಯ್ಯ ಅವರನ್ನು 18 ವರ್ಷಗಳ ಹಿಂದೆ ಮಂಡ್ಯದವರಾದ ರಾಜೇಶ್ವರಿ ವಿವಾಹವಾಗಿದ್ದರು. ಮಾನಸ ಪ್ರಥಮ ಪಿಯುಸಿ, ಭೂಮಿಕಾ ಎಸ್ಸೆಸ್ಸೆಲ್ಸಿ ಓದುತ್ತಿದ್ದರು. ಸಿದ್ಧಯ್ಯ ಮೂರು ವರ್ಷಗಳಿಂದ ಬೇರೊಬ್ಬ ಮಹಿಳೆಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಪತ್ನಿ, ಮಕ್ಕಳನ್ನು ನಿರ್ಲಕ್ಷಿಸುತ್ತಿದ್ದರು ಎನ್ನಲಾಗಿದೆ.

ಈ ವಿಷಯದಲ್ಲಿ ದಂಪತಿ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು. ಇಬ್ಬರ ಮಧ್ಯೆ ಹಲವು ಬಾರಿ ರಾಜಿ ಪಂಚಾಯಿತಿ ನಡೆದಿದ್ದರೂ, ಸಿದ್ಧಯ್ಯ ತಮ್ಮ ವರ್ತನೆಯನ್ನು ಬದಲಾಯಿಸಿಕೊಂಡಿರಲಿಲ್ಲ. ಇತ್ತೀಚೆಗೆ ಮನೆಗೆ ಬರುವುದನ್ನೇ ಸಿದ್ಧಯ್ಯ ಕಡಿಮೆ ಮಾಡಿದ್ದರು ಎಂದೂ ಗೊತ್ತಾಗಿದೆ.

ಸಿದ್ಧಯ್ಯ ಎರಡು ದಿನಗಳ ಹಿಂದೆ ರಾಜೇಶ್ವರಿ ಅವರ ಜೊತೆ ಜಗಳ ಮಾಡಿಕೊಂಡು ಊರಿಗೆ ತೆರಳಿದ್ದರು. ಭಾನುವಾರ ಊರಿನಿಂದ ಪತ್ನಿಗೆ ದೂರವಾಣಿ ಕರೆ ಮಾಡಿದ್ದರು. ಫೋನ್ ತೆಗೆಯದ ಕಾರಣ ಅನುಮಾನಗೊಂಡ ಸಿದ್ಧಯ್ಯ, ತಕ್ಷಣ ಶ್ರೀನಗರದಲ್ಲೇ ಇರುವ ತನ್ನ ಸಂಬಂಧಿಕರು ಮತ್ತು ಭಾಮೈದುನ ಪುರುಷೋತ್ತಮ್‍ಗೆ ಕರೆ ಮಾಡಿ, ಮನೆ ಬಳಿ ಹೋಗಿ ವಿಚಾರಿಸುವಂತೆ ಹೇಳಿದ್ದರು.

ಪುರುಷೋತ್ತಮ್‍ ಮನೆ ಬಳಿ ಹೋಗಿ ನೋಡಿದಾಗ ಬಾಗಿಲು ಹಾಕಲಾಗಿತ್ತು. ಕಿಟಕಿ ಮೂಲಕ ಇಣುಕಿದಾಗ ಮೂವರೂ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂತು. ಅಕ್ಕಪಕ್ಕದವರಿಗೆ ವಿಷಯ ತಿಳಿದು ಮನೆ ಬಳಿ ಜಮಾಯಿಸಿದರು.

‘ಘಟನೆ ಸಂಬಂಧ ಸಿದ್ಧಯ್ಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪುರುಷೋತ್ತಮ್ ಪ್ರಕರಣ ದಾಖಲಿಸಿದ್ದಾರೆ. ಪತ್ನಿ ಮತ್ತು ಮಕ್ಕಳ ಆತ್ಮಹತ್ಯೆ ವಿಷಯ ತಿಳಿಯುತ್ತಿದ್ದಂತೆ ತಮಿಳುನಾಡಿನ ಕನ್ಯಾಕುಮಾರಿಗೆ ಹೋಗಿ ಸಿದ್ಧಯ್ಯ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಹುಡುಕಾಟ ನಡೆಯುತ್ತಿದೆ’ ಎಂದು ಪೊಲೀಸರು ಹೇಳಿದರು.

ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ದಕ್ಷಿಣ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ಸೆಪಟ್, ‘ಸಿದ್ದಯ್ಯ ಬೇರೆ ಮಹಿಳೆಯ ಜೊತೆ ಸಲುಗೆ ಹೊಂದಿದ್ದ. ಈ ಕಾರಣಕ್ಕೆ ಗಂಡ –ಹೆಂಡತಿ ನಡುವೆ ರಾಜಿ ಪಂಚಾಯಿತಿ ನಡೆದಿತ್ತು. ಕುಟುಂಬದ ಸ್ಥಿತಿ ಸುಧಾರಿಸದ ಹಿನ್ನೆಲೆಯಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳು ಸಾವಿಗೆ ಶರಣಾಗಿದ್ದಾರೆ. ಘಟನೆಗೆ ಕಾರಣ ಏನೆಂಬುದನ್ನು ತನಿಖೆ ಮಾಡುತ್ತೇವೆ’ ಎಂದರು.

Post Comments (+)