ಭಾನುವಾರ, ಆಗಸ್ಟ್ 25, 2019
21 °C

ಆರ್ತನಾದವಾದ ಆಶಾವಾದ!

Published:
Updated:

ನೆರೆಪೀಡಿತ ಪ್ರದೇಶದ ಪ್ರವಾಸಿ ಮಂದಿರದಲ್ಲಿ ಅತೃಪ್ತ+ಅನರ್ಹ ಶಾಸಕರೊಬ್ಬರ (ಅಶಾ) ತುರ್ತು ಪತ್ರಿಕಾಗೋಷ್ಠಿ.

‘ಸುಮಾರು ಎರಡು ತಿಂಗಳಿಂದ ನೀವು ಕ್ಷೇತ್ರದತ್ತ ಬಂದಿಲ್ಲ’- ಪತ್ರಕರ್ತರ ಆಕ್ಷೇಪ. ‘ಬರದಿದ್ರೂ ಮಾಡ್ತಿದ್ದದ್ದು ಕ್ಷೇತ್ರದ ಕೆಲಸಾನೇ’– `ಅಶಾ’ ಉವಾಚ.

‘ಮಳೆ ಇಲ್ದೆ ರೈತರು ಬಿತ್ತಲಿಲ್ಲ, ಜನ-ಜಾನುವಾರುಗಳಿಗೆ ನೀರು-ಮೇವು ಇಲ್ದೆ ಗುಳೆ ಹೋಗಿದಾರೆ’.

`ಅದ್ಕೇರಿ, ನಾನು ಬೆಂಗಳೂರಲ್ಲಿದ್ದದ್ದು. ಕ್ಷೇತ್ರದಲ್ಲಿ ಬೋರ್‍ವೆಲ್ಲು, ಗಂಜಿ ಕೇಂದ್ರ, ಗೋಶಾಲೆ, ಮೋಡ ಬಿತ್ತನೆಗೆ ಸರ್ಕಾರದ ಮಂಜೂರಾತಿ ಪಡೆಯೋವಷ್ಟರಲ್ಲಿ ಈ ನೆರೆ ಹಾವಳಿ ಶುರುವಾಗಿದೆ’.

`ರೆಸಾರ್ಟ್‍ನ ಹೈಟೆಕ್ ಗಂಜಿ ಕೇಂದ್ರ ಸೇರಿ, ಹಳ್ಳಿ ಗಂಜಿ ಕೇಂದ್ರ ಮರೆತುಬಿಟ್ರಿ!’

`ಹಾಗಲ್ರೀ, ನಮ್ಮ ಕ್ಷೇತ್ರದ ಜನತೆಗೆ ಆಗ್ತಿದ್ದ ಅನ್ಯಾಯವನ್ನು ಸರಿಪಡಿಸಿ, ಹೆಚ್ಚಿನ ಸೇವೆ ಸಲ್ಲಿಸೋ ದೂರಾಲೋಚನೆಯಿಂದ ಹಾಗೆ ಮಾಡ್ಲೇಬೇಕಾಯ್ತು’.

ಪತ್ರಕರ್ತರೊಬ್ಬರ ದಿಢೀರ್ ಪ್ರಶ್ನೆ- `ನೀವು ಮಂತ್ರಿ ಆಗ್ತೀರಿ, ಕೋಟ್ಯಂತರ ರೂಪಾಯಿ ವ್ಯವಹಾರ ನಡೀತೂಂತಾರೆ!’

`ಅದೆಲ್ಲಾ ಮಾಧ್ಯಮದೋರ ಸೃಷ್ಟಿ’.

`ಸ್ಪೀಕರ್ ನಿಮ್ಮನ್ನೇಕೆ ಅನರ್ಹಗೊಳಿಸಿದ್ರು?’ ಅಷ್ಟರಲ್ಲಿ ಪೀಯೆ, `ಸುಪ್ರೀಂ ಕೋರ್ಟ್ ಲಾಯರ್ ಮಾತಾಡ್ತಾರೆ’ ಎಂದು ಫೋನ್ ಕೊಟ್ಟು ಕಣ್ಣು ಹೊಡೆದ. `ಅಶಾ’ ದೂರ ಹೋಗಿ ಮಾತಾಡಿಕೊಂಡು ಬಂದು ಹೇಳಿದರು– `ಕೋರ್ಟಿನಲ್ಲಿ ಸ್ಪೀಕರ್ ಆದೇಶ ರದ್ದಾಗುತ್ತಂತೆ’.

`ರದ್ದಾಗದಿದ್ರೆ?’

`ಮುಂದೆ ಎಲೆಕ್ಷನ್‍ಗೆ ನಿಲ್ತೀನಿ. ಈಗ ಮಗನ್ನ ನಿಲ್ಲಿಸ್ತೀನಿ. ನಿಮ್ಮ ಬೆಂಬಲ ಬೇಕು’ ಎಂದು ಕೈಮುಗಿದು, ಪೀಯೆ ಕಡೆ ತಿರುಗಿ ಕೇಳಿದರು- `ಅಧಿಕಾರಿಗಳು ಬರಲಿಲ್ವೇ?’

`ಆಗಿನಿಂದ ಬರ್ತಿದೀವಿ ಅಂತಾನೇ ಹೇಳ್ತಿದಾರೆ...’

`ಇರಲಿ ಬಿಡು. ಅವರಿಗೆ ನೆರೆ ಪರಿಹಾರದ ತುರ್ತು ಕೆಲ್ಸ ಇರಬೇಕು’.

ಆಗ ಪ್ರವಾಸಿ ಮಂದಿರದ ಮೇಟಿ, ಪೀಯೆ ಕಿವಿಯಲ್ಲಿ ಏನನ್ನೋ ಹೇಳಿ ಹಿಂದಿನ ಬಾಗಿಲು ತೆರೆದ.

`ನಿಮ್ಮನ್ನು ಮತ್ತೆ ಭೇಟಿ ಆಗ್ತೀನಿ’ ಎನ್ನುತ್ತಾ ನಿರ್ಗಮಿಸಿದರು`ಅಶಾ’, ಹೊರಗೆ ಮೊಳಗುತ್ತಿದ್ದ ವಿರೋಧಿ ಘೋಷಣೆಗಳನ್ನು ಕೇಳಿಸಿಕೊಳ್ಳುತ್ತಾ.

Post Comments (+)