ಮಂಗಳವಾರ, ನವೆಂಬರ್ 19, 2019
22 °C
153 ರನ್‌ ಗಳಿಸಿದ ಅಭಿಮನ್ಯು; ಮುನ್ನಡೆ ಸಾಧಿಸಿದ ಪ್ರಿಯಾಂಕ್ ಬಳಗ

ದುಲೀಪ್ ಟ್ರೋಫಿ ಫೈನಲ್‌: ಇಂಡಿಯಾ ರೆಡ್ ಓಟಕ್ಕೆ ಮಳೆ ಅಡ್ಡಿ

Published:
Updated:
Prajavani

ಬೆಂಗಳೂರು: ಮತ್ತೆ ಮಂದಬೆಳಕು ಮತ್ತು ಮಳೆ ಕಾಡಿದ ದಿನದಾಟದಲ್ಲಿ ಇಂಡಿಯಾ ರೆಡ್ ತಂಡವು ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಮಹತ್ವದ ಮುನ್ನಡೆ ಸಾಧಿಸಿತು.

ಗುರುವಾರ ಶತಕ ಗಳಿಸಿ ಕ್ರೀಸ್‌ನಲ್ಲಿದ್ದ ಅಭಿಮನ್ಯು ಈಶ್ವರನ್ ಮತ್ತು ಅಂಕಿತ್ ಖಲ್ಸಿ ಶುಕ್ರವಾರ ಆಡಿದ ತಾಳ್ಮೆಯ ಆಟದ ಬಲದಿಂದ ತಂಡವು ಮೂರನೇ ದಿನದಾಟದ ಅಂತ್ಯಕ್ಕೆ 116 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 345 ರನ್‌ ಗಳಿಸಿತು.

ಚಹಾ ವಿರಾಮದ ನಂತರ ಕೇವಲ ನಾಲ್ಕು ಓವರ್‌ಗಳ ಆಟ ಮುಗಿದಾಗ ಮಳೆ ಆರಂಭವಾಯಿತು. ಮಳೆ ನಿಂತ ಮೇಲೆ ಮಂದಬೆಳಕಿನಿಂದ ಆಟ ಸ್ಥಗಿತವಾಯಿತು. ರೆಡ್ ತಂಡವು ಸದ್ಯ 114 ರನ್‌ಗಳ ಮುನ್ನಡೆ ಸಾಧಿಸಿದೆ. ಆದಿತ್ಯ ಸರ್ವಟೆ (ಔಟಾಗದೆ 30; 65ಎಸೆತ, 4ಬೌಂಡರಿ) ಮತ್ತು ಜಯದೇವ್ ಉನದ್ಕತ್ (ಔಟಾಗದೆ 10; 13ಎಸೆತ, 1ಬೌಂಡರಿ) ಕ್ರೀಸ್‌ನಲ್ಲಿದ್ದಾರೆ.

ಗ್ರೀನ್ ತಂಡವು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ 231 ರನ್‌ಗಳಿಗೆ ಉತ್ತರವಾಗಿ ರೆಡ್ ತಂಡವು ಎರಡನೇ ದಿನದಾಟದಲ್ಲಿ 52 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 175 ರನ್ ಗಳಿಸಿತ್ತು. 102 ರನ್‌ ಗಳಿಸಿದ್ದ ಅಭಿಮನ್ಯು ಮತ್ತು 11 ರನ್ ಗಳಿಸಿದ ಅಂಕಿತ್ ಖಲ್ಸಿ ಕ್ರೀಸ್‌ನಲ್ಲಿದ್ದರು. ಶುಕ್ರವಾರ ಆಟ ಮುಂದುವರಿಸಿದ ಅಭಿಮನ್ಯು ತಮ್ಮ ಖಾತೆಗೆ 51 ರನ್‌ಗಳನ್ನು ಸೇರಿಸಿಕೊಂಡರು.  ಬಹಳ ತಾಳ್ಮೆಯ ಆಟವಾಡಿದ ಖಲ್ಸಿ  ಜೊತೆಗೆ ಮೂರನೇ ವಿಕೆಟ್ ಜೊತೆಯಾಟದಲ್ಲಿ 101 ರನ್ ಸೇರಿಸಿದರು. ಎಂಬತ್ತನೇ ಓವರ್‌ನಲ್ಲಿ ಧರ್ಮೇಂದ್ರಸಿಂಹ ಜಡೇಜ ಈ ಜೊತೆಯಾಟವನ್ನು ಮುರಿದರು.  ಊಟದ ವಿರಾಮಕ್ಕೂ ಮುನ್ನ ತಂಡವು ಇನಿಂಗ್ಸ್‌ ಮುನ್ನಡೆ ಸಾಧಿಸಿತು.

ಆದರೆ 90ನೇ ಓವರ್‌ನಲ್ಲಿ ಅಭಿಮನ್ಯು ಔಟಾದರು. ತನ್ವೀರ್ ಹಕ್ ಎಸೆತದಲ್ಲಿ ಎಲ್‌ಬಿಡಬ್ಲ್ಯುಗೆ ಔಟಾದ ಅಭಿಮನ್ಯು ಸುಂದರ ಆಟಕ್ಕೆ ತೆರೆಬಿತ್ತು.

ಇಶಾನ್–ಸರ್ವಟೆ ಜೊತೆಯಾಟ:  ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್ (39; 56ಎಸೆತ, 6ಬೌಂಡರಿ) ಮತ್ತು ಆದಿತ್ಯ ಸರ್ವಟೆ  ರೆಡ್ ತಂಡದ ರನ್‌ ಗಳಿಕೆಗೆ ಬಲ ತುಂಬಿದರು. ಆರನೇ ವಿಕೆಟ್ ಜೊತೆಯಾಟದಲ್ಲಿ 51 ರನ್‌ ಸೇರಿಸಿದರು.

ಅಂಕಿತ್ ರಜಪೂತ್ ಬೌಲಿಂಗ್‌ನಲ್ಲಿ ಇಶಾನ್ ಔಟಾದ ನಂತರ ಆದಿತ್ಯ ಜೊತೆಗೂಡಿದ ಜಯದೇವ್ ಉನದ್ಕತ್ ತಂಡದ ಮೊತ್ತವನ್ನು ಹೆಚ್ಚಿಸಲು ಕೈಜೋಡಿಸಿದರು. ಗ್ರೀನ್ ತಂಡದ ಫೀಲ್ಡಿಂಗ್ ಲೋಪಗಳು ಅದಕ್ಕೆ ತುಟ್ಟಿಯಾದವು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಇಂಡಿಯಾ ಗ್ರೀನ್: 231, ಇಂಡಿಯಾ ರೆಡ್: 116 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 345 (ಅಭಿಮನ್ಯು ಈಶ್ವರನ್ 153, ಅಂಕಿತ್ ಖಲ್ಸಿ 30, ಲೊಮ್ರೊರ್ 15, ಇಶಾನ್ ಕಿಶನ್ 39, ಆದಿತ್ಯ ಸರ್ವಟೆ ಬ್ಯಾಟಿಂಗ್ 30, ಜಯದೇವ್ ಉನದ್ಕತ್ ಬ್ಯಾಟಿಂಗ್ 10, ಅಂಕಿತ್ ರಜಪೂತ್ 77ಕ್ಕೆ3, ತನ್ವೀರ್ ಹಕ್ 43ಕ್ಕೆ1, ಧರ್ಮೆಂದ್ರಸಿಂಹ ಜಡೇಜ 80ಕ್ಕೆ1, ಮಯಂಕ್ ಮಾರ್ಕಂಡೆ 24ಕ್ಕೆ1).

ಪ್ರತಿಕ್ರಿಯಿಸಿ (+)