ಶುಕ್ರವಾರ, ನವೆಂಬರ್ 22, 2019
23 °C

ವಲಯಕ್ಕೊಂದು ವಾರ್ಡ್‌ನಲ್ಲಿ ‘ಸ್ವಚ್ಛ ಶನಿವಾರ’

Published:
Updated:
Prajavani

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಉದ್ದೇಶದಿಂದ ಶನಿವಾರ ಪ್ರತಿ ವಲಯದ ಒಂದು ವಾರ್ಡ್‌ನಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳಲು ಪಾಲಿಕೆ ಮುಂದಾಗಿದೆ.

‘ಎಂಟು ವಲಯಗಳ 18 ವಾರ್ಡ್‌ಗಳಲ್ಲಿ ಕಳೆದ ಶನಿವಾರ (ಸೆ.31) ಪ್ರಾಯೋಗಿಕವಾಗಿ ಸ್ವಚ್ಛತಾ ಅಭಿಯಾನವನ್ನು ಏರ್ಪಡಿಸಿದ್ದೇವೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಶನಿವಾರ ಇನ್ನಷ್ಟು ವಾರ್ಡ್‌ಗಳಲ್ಲಿ ಈ ಅಭಿಯಾನವನ್ನು ಏರ್ಪಡಿಸಲಿದ್ದೇವೆ. ಅನೇಕ ಸಂಘ ಸಂಸ್ಥೆಗಳೂ ಈ ಕಾರ್ಯವನ್ನು ಶ್ಲಾಘಿಸಿದ್ದಲ್ಲದೇ, ಇದರಲ್ಲಿ ಕೈಜೋಡಿಸಲು ಮುಂದೆ ಬಂದಿವೆ’ ಎಂದು ಪಾಲಿಕೆಯ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದು ಒಂದು ದಿನದ ಸಾಂಕೇತಿಕ ಅಭಿಯಾನವಲ್ಲ. ವಲಯಕ್ಕೆ ಕನಿಷ್ಠ ಪಕ್ಷ ಒಂದು ವಾರ್ಡ್‌ ಅನ್ನು ಆಯ್ಕೆ ಮಾಡಿ, ಅಲ್ಲಿ ಸ್ವಚ್ಛತೆ ಎದ್ದು ಕಾಣಿಸುವಂತೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶ. ಬಿಬಿಎಂಪಿಯ ಆಡಳಿತ ಯಂತ್ರವನ್ನು ಸಂಪೂರ್ಣವಾಗಿ ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳಲಾಗುವುದು’ ಎಂದರು.

‘ಕಸ ನಿರ್ವಹಣೆ ವಿಭಾಗ ಮಾತ್ರವಲ್ಲ, ಎಂಜಿನಿಯರಿಂಗ್‌ ವಿಭಾಗ, ರಾಜಕಾಲುವೆ ನಿರ್ವಹಣೆ ವಿಭಾಗಗಳೂ ಸೇರಿದಂತೆ ಸೇರಿ ವಿವಿಧ ವಿಭಾಗಗಳ ಅಧಿಕಾರಿಗಳು ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ವಾರ್ಡ್‌ನ ಪ್ರಮುಖ ಸ್ಥಳಗಳು ಸ್ವಚ್ಛವಾಗಿರು
ವಂತೆ ನೋಡಿಕೊಳ್ಳುವುದು ಪಾಲಿಕೆಯ ಎಲ್ಲ ವಿಭಾಗಗಳ ಅಧಿಕಾರಿಗಳ ಹೊಣೆ ಆಗಲಿದೆ’ ಎಂದು ಪಾಲಿಕೆಯ ಹೆಚ್ಚುವರಿ ಆಯುಕ್ತ (ಕಸ ನಿರ್ವಹಣೆ) ರಂದೀಪ್‌ ತಿಳಿಸಿದರು.ಆಯಾ ವಾರ ಯಾವ ವಾರ್ಡ್‌ನಲ್ಲಿ ಹಾಗೂ ಅಲ್ಲಿನ ಯಾವ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಯಲಿದೆ ಎಂದು ಮುಂಚಿತವಾಗಿ ಪ್ರಕಟಿಸುತ್ತೇವೆ. ಸ್ಥಳೀಯ ನಿವಾಸಿಗಳ ಸಂಘಟನೆಗಳು, ಯುವ ಸಂಘಟನೆಗಳು ಈ ಕಾರ್ಯದಲ್ಲಿ ಕೈಜೋಡಿಸಬಹುದು. ವಾರ್ಡ್‌ ದೊಡ್ಡದಿದ್ದರೆ ಮುಂದಿನ ವಾರವೂ ಅದೇ ವಾರ್ಡ್‌ನಲ್ಲಿ ಅಭಿಯಾನ ನಡೆಸಲಿದ್ದೇವೆ’ ಎಂದರು.

ಪ್ರತಿಕ್ರಿಯಿಸಿ (+)