ಬುಧವಾರ, ನವೆಂಬರ್ 20, 2019
25 °C

ಗೇಟ್‌ನ ಸಲಾಕೆಗೆ ಸಿಲುಕಿದ್ದ ಜಿಂಕೆ

Published:
Updated:
Prajavani

ಸಕಲೇಶಪುರ: ಸಮೀಪದ ಹುರುಡಿ ಗ್ರಾಮದಲ್ಲಿ ತೋಟದ ಗೇಟ್‌ ಹಾರಲು ಹೋದ ಜಿಂಕೆಯೊಂದು ಗೇಟ್‌ನ ಕಬ್ಬಿಣದ ಸಲಾಕೆಗೆ ಚುಚ್ಚಿಕೊಂಡು ಸಾವು ಬದುಕಿನೊಂದಿಗೆ ಒದ್ದಾಡುತ್ತಿತ್ತು. ಮಂಗಳವಾರ ಮುಂಜಾನೆ ಅದನ್ನು ನೋಡಿದ ಗ್ರಾಮಸ್ಥರು ಬಂಧಮುಕ್ತಗೊಳಿಸಿದರು.

ಮೂಡಿಗೆರೆ–ಸಕಲೇಶಪುರ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಗ್ರಾಮದ ಎಚ್‌.ಸಿ. ಹರೀಶ್‌ ಅವರ ತೋಟದ ಗೇಟ್‌ನ ಸಲಾಕೆಗೆ ಜಿಂಕೆಯ ತೊಡೆ ಭಾಗದ ಚರ್ಮ ಚುಚ್ಚಿಕೊಂಡು ಒದ್ದಾಡುವುದಕ್ಕೂ ಸಾಧ್ಯವಾಗದ ಸ್ಥಿತಿಯಲ್ಲಿತ್ತು. ಅದನ್ನು ಗ್ರಾಮಸ್ಥರು ನೋಡಿ ಬಿಡಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಕತ್ತಿಯಿಂದ ಚರ್ಮವನ್ನು ಕೊಯ್ದ ಕೂಡಲೇ ಕ್ಷಣಾರ್ಧದಲ್ಲಿ ಅಲಿಂದ ತೋಟದೊಳಗೆ ಓಡಿಹೋಯಿತು. ಈ ವಿಡಿಯೊ ಈ ಭಾಗದಲ್ಲಿ ಹರಿದಾಡುತ್ತಿದೆ.

‘ರಸ್ತೆ ದಾಟುವಾಗ ಯಾವುದೋ ವಾಹನ ಬಂದಿರಬೇಕು ಅದರಿಂದ ಗಾಬರಿಗೊಂಡು ಗೇಟ್‌ ಹಾರಿದೆ. ಈ ವೇಳೆ ಅದರ ಚರ್ಮಕ್ಕೆ ಸಲಾಕೆ ಚುಚ್ಚಿಕೊಂಡಿರುವ ಸಾಧ್ಯತೆ ಇದೆ’ ಎಂದು ಹರೀಶ್‌  ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)