ಬುಧವಾರ, ನವೆಂಬರ್ 13, 2019
17 °C

‘ನೀರಿ’ ನಿರ್ವಹಣೆ: ಹಣ ಬಿಡುಗಡೆಗೆ ಆದೇಶ

Published:
Updated:

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಎಷ್ಟು ಕೆರೆಗಳಿವೆ ಎಂಬುದನ್ನು ಖಚಿತವಾಗಿ ಗುರುತಿಸಿ ಅವುಗಳ ಪುನರುಜ್ಜೀವನಕ್ಕೆ ಅಗತ್ಯ ಶಿಫಾರಸುಗಳನ್ನು ನೀಡುವ ಜವಾಬ್ದಾರಿ ಹೊತ್ತಿರುವ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಗೆ (ನೀರಿ) ₹ 3.45 ಕೋಟಿ ಬಿಡುಗಡೆ ಮಾಡಬೇಕು’ ಎಂದು ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಆದೇಶಿಸಿದೆ.

‘ಬಿಬಿಎಂಪಿ ವ್ಯಾಪ್ಯಿಯಲ್ಲಿನ ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕು’ ಎಂದು ಕೋರಿ ‘ಸಿಟಿಜನ್ಸ್‌ ಆ್ಯಕ್ಷನ್‌ ಗ್ರೂಪ್‌’ ಕಾರ್ಯದರ್ಶಿ ನೊಮಿತಾ ಚಾಂಡಿ, ‘ಜೆ.ಪಿ ನಗರ 4ನೇ ಹಂತದ ಡಾಲರ್ಸ್‌ ಲೇ ಔಟ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ’ದ ಕಾರ್ಯದರ್ಶಿ ಗುಂಡಾ ಭಟ್‌, ‘ಸಮರ್ಪಣಾ’ ಸ್ವಯಂ ಸೇವಾ ಸಂಸ್ಥೆ ಹಾಗೂ ಅಗ್ರಹಾರ ದಾಸರಹಳ್ಳಿಯ ಬಿ.ಎಚ್‌.ಗಂಗಯ್ಯ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು, ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕಾ ಹಾಗೂ ನ್ಯಾಯಮೂರ್ತಿ ಪಿ.ಎಂ. ನವಾಜ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಇದೇ ವೇಳೆ ನ್ಯಾಯಪೀಠವು, ‘ಬೇಗೂರು ಕೆರೆಯಲ್ಲಿ ಕೃತಕ ದ್ವೀಪ ನಿರ್ಮಾಣ ಸೇರಿದಂತೆ ಯಾವುದೇ ಕಾಮಗಾರಿ ಕೈಗೊಳ್ಳಬಾರದು ಎಂಬ ಈ ಹಿಂದಿನ ಮಧ್ಯಂತರ ಆದೇಶ ಮಾರ್ಪಾಡು ಮಾಡಬೇಕು’ ಎಂಬ ಬಿಬಿಎಂಪಿ ಕೋರಿಕೆಯನ್ನು ತಿರಸ್ಕರಿಸಿತು.

ಗಣೇಶ ಮೂರ್ತಿ ವಿಸರ್ಜನೆ: ‘ಪಿಒಪಿ ಗಣೇಶ ಮೂರ್ತಿಗಳ ಬಗ್ಗೆ ಅರಿವು ಮೂಡಿಸಲಾಗಿದೆ’ ಎಂದು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಪರ ವಕೀಲ ಗುರುರಾಜ ಜೋಷಿ ನ್ಯಾಯಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿದರು.

‘ನಗರದ 38 ಪ್ರದೇಶಗ
ಳಲ್ಲಿ ಇದೇ 2ರಂದು 1,91247 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ. ಇದಕ್ಕಾಗಿ ಸಂಚಾರಿ ಟ್ಯಾಂಕ್ ವ್ಯವಸ್ಥೆ ಮಾಡಲಾಗಿತ್ತು. ಇವುಗಳಲ್ಲಿ 1,654 ಮೂರ್ತಿಗಳು ಶೇ 8ರಷ್ಟು ಪ್ರಮಾಣದ ಪಿಒಪಿ ಬಳಸಿ ನಿರ್ಮಿಸಿದ ಮೂರ್ತಿಗಳಾಗಿದ್ದವು. ದುರ್ಗಾ ಪೂಜೆ ವೇಳೆಯಲ್ಲೂ ಪಿಒಪಿ ಬಳಸದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು’ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

ಪ್ರತಿಕ್ರಿಯಿಸಿ (+)