ಮಂಗಳವಾರ, ನವೆಂಬರ್ 19, 2019
23 °C

ಆರ್‌ಸಿಬಿಗೆ ಮಸಾಜ್ ತಜ್ಞೆ ನವನೀತಾ

Published:
Updated:
Prajavani

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಆಡುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಕ್ರೀಡಾ ಮಸಾಜ್ ತಜ್ಞೆ ನವನೀತಾ ಗೌತಮ್ ಅವರನ್ನು ನೇಮಕ ಮಾಡಲಾಗಿದೆ.

ಐಪಿಎಲ್‌ನಲ್ಲಿ ನೇಮಕವಾದ ಪ್ರಥಮ ಮಹಿಳಾ ನೆರವು ಸಿಬ್ಬಂದಿ ಇವರಾಗಿದ್ದಾರೆ.

‘ನವನೀತಾ ಅವರು ತಂಡದ ಮುಖ್ಯ ಫಿಸಿಯೋಥೆರಪಿಸ್ಟ್ ಇವಾನ್ ಸ್ಪೀಚ್ಲಿ ಮತ್ತು ಸ್ಟ್ರೆಂಥ್ –ಕಂಡಿಷನಿಂಗ್ ಕೋಚ್ ಶಂಕರ್ ಬಸು ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವರು.  ಆಟಗಾರರ ದೈಹಿಕ ಕ್ಷಮತೆಯನ್ನು ಆರೋಗ್ಯಪೂರ್ಣವಾಗಿಡಲು ಮಸಾಜ್‌ ಉತ್ತಮ ದಾರಿಯಾಗಿದೆ. ಈ ವಿಭಾಗವನ್ನು ನವನೀತಾ ಅವರು ನಿರ್ವಹಿಸಲಿದ್ದಾರೆ’ ಎಂದು ಆರ್‌ಸಿಬಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನವನೀತಾ ಅವರು ಕೆನಡಾದಲ್ಲಿ ನೆಲೆಸಿದ್ದಾರೆ. ಅವರು ಕ್ರೀಡಾ ಮಸಾಜ್ ಥೆರಪಿಯಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. ಈಚೆಗೆ ಅವರು ಇಲ್ಲಿಗೆ ಬಂದು ಒಪ್ಪಂದಕ್ಕೆ ಹಸ್ತಾಕ್ಷರ ಹಾಕಿದರು. ಮತ್ತೆ ಕೆನಡಾಗೆ ಮರಳಿದರು. ಐಪಿಎಲ್‌ ಟೂರ್ನಿಯ ಸಂದರ್ಭದಲ್ಲಿ ಅವರು ಭಾರತಕ್ಕೆ ಬರುವರು ಎಂದು ತಂಡದ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)