ಶುಕ್ರವಾರ, ನವೆಂಬರ್ 22, 2019
22 °C

ಮಹಿಳಾ ತಂಡಕ್ಕೆ ನೆರವು ಸಿಬ್ಬಂದಿ: ಶಾಂತಾ, ಎಡುಲ್ಜಿ ಅಸಮಾಧಾನ

Published:
Updated:
Prajavani

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ನೆರವು ಸಿಬ್ಬಂದಿ ನೇಮಕ ಮಾಡಿರುವ ಕ್ರಮವು ನಿಯಮಬಾಹಿರವಾಗಿದೆ ಎಂದು ಬಿಸಿಸಿಐ ಅಪೆಕ್ಸ್‌ ಕಮಿಟಿಯ ಸದಸ್ಯೆ ಶಾಂತಾ ರಂಗಸ್ವಾಮಿ ಮತ್ತು ಕ್ರಿಕೆಟ್ ಆಡಳಿತ ಸಮಿತಿ ಸದಸ್ಯೆ ಡಯಾನಾ ಎಡುಲ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಜೊಹ್ರಿ ಅವರಿಗೆ ಶಾಂತಾ ಮತ್ತು ಎಡುಲ್ಜಿ ಇಮೇಲ್ ಮೂಲಕ ಪತ್ರ ರವಾನಿಸಿದ್ದಾರೆ.  ವೆಸ್ಟ್‌ ಇಂಡೀಸ್ ಪ್ರವಾಸಕ್ಕೆ ತೆರಳುತ್ತಿರುವ ಮಹಿಳಾ ತಂಡದ ವಿಡಿಯೊ ವಿಶ್ಲೇಷಕ ನೇಮಕ ನಿಯಮಕ್ಕನುಗುಣವಾಗಿ  ಆಗಿಲ್ಲ ಎಂದು ಆಕ್ಷೇಪಿಸಿದ್ದಾರೆ.

ಬಿಸಿಸಿಐ ನಿಯಮದ ಪ್ರಕಾರ ರಾಷ್ಟ್ರೀಯ ಆಯ್ಕೆ ಸಮಿತಿಯೇ ನೆರವು ಸಿಬ್ಬಂದಿಯನ್ನು ನೇಮಕ ಮಾಡಬೇಕು. ಆದರೆ, ಮಂಡಳಿಯ ಕ್ರಿಕೆಟ್ ಆಪರೇಷನ್ಸ್‌ ಮುಖ್ಯ ವ್ಯವಸ್ಥಾಪಕ ಸಾಬಾ ಕರೀಂ ಅವರು ತಮಗೆ ಬೇಕಾದ ವ್ಯಕ್ತಿಯನ್ನು ವಿಡಿಯೊ ವಿಶ್ಲೇಷಕರನ್ನಾಗಿ ನೇಮಕ ಮಾಡಿದ್ದಾರೆಂದು ಆರೋಪಿಸಲಾಗಿದೆ. 

‘ಮಹಿಳಾ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರ ಇಮೇಲ್ ನೋಡಿ ಆಘಾತಕ್ಕೊಳಗಾಗಿದ್ಧೇನೆ. ವಿಡಿಯೊ ವಿಶ್ಲೇಷಕನ ನೇಮಕ ಪ್ರಕ್ರಿಯೆ ಕುರಿತು ಅವರಿಗೆ ಗೊತ್ತಿಲ್ಲ. ಕರೀಂ ತಮ್ಮ ಆಪ್ತರಾದ ಪುಷ್ಕರ್ ಸಾವಂತ್ ಅವರನ್ನು ನೇಮಕ ಮಾಡಿದ್ದಾರೆ. ಎನ್‌ಸಿಎ ಅವರ ವಿಮಾನದ ಟಿಕೆಟ್ ಕೂಡ ಕಾಯ್ದಿರಿಸಿದೆ. ಕೇವಲ ಕಣ್ಣೊರೆಸುವ ತಂತ್ರವಾಗಿ ಈ ಪ್ರಕ್ರಿಯೆ ಕಾಣುತ್ತಿದೆ’ ಎಂದು ಡಯಾನಾ ಎಡುಲ್ಜಿ ಹೇಳಿದ್ಧಾರೆ.

ತಂಡದ ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್ ನೇಮಕದ ಕುರಿತು ಕೂಡ ಆಯ್ಕೆ ಸಮಿತಿಗೆ ಮಾಹಿತಿ ನೀಡಿಲ್ಲ. ಕೇವಲ ಸಂದರ್ಶನ ನಡೆಸುವಂತೆ ಅವರಿಗೆ ತಿಳಿಸಲಾಗಿದೆ. ಎನ್‌ಸಿಎದ ಬೌಲಿಂಗ್ ಕೋಚ್ ನರೇಂದ್ರ ಹಿರ್ವಾನಿ ಮತ್ತು ಟಿ. ದಿಲೀಪ್ ಅವರು ವಿಂಡೀಸ್‌ಗೆ ತೆರಳಲಿದ್ಧಾರೆ.

‘ಪುರುಷರ ತಂಡದ ವಿಷಯದಲ್ಲಿಯೂ ಇದೇ ನೀತಿಯನ್ನು ಅನುಸರಿಸುತ್ತೀರಾ?’ ಎಂದು ಶಾಂತಾ ಪ್ರಶ್ನಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಸಾಬಾ ಕರೀಂ, ‘ಅವರು ಇಮೇಲ್ ಹಾಕಿರುವುದು ಸಿಇಒಗೆ. ಅವರನ್ನೇ ಕೇಳುವುದು ಸೂಕ್ತ’ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)