ಗುರುವಾರ , ನವೆಂಬರ್ 14, 2019
18 °C
ನೀರು ತಂದರೆಂದು ಬೆಳ್ಳಿ ಖಡ್ಗ, ಕಿರೀಟ ಅರ್ಪಣೆ

ಶಾಸಕ ಓಲೇಕಾರ ಜಂಬೂ ಸವಾರಿ

Published:
Updated:
Prajavani

ಗುತ್ತಲ( ಹಾವೇರಿ ಜಿಲ್ಲೆ): ಕನವಳ್ಳಿ ಗ್ರಾಮದ ಕೆರೆಗೆ ನೀರು ಹರಿಸುವ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಲು ಬಂದ ಶಾಸಕರಿಗೆ ಅಚ್ಚರಿ ಕಾದಿತ್ತು. ಸ್ವಾಗತಕ್ಕೆ ಆನೆ, ಅಂಬಾರಿ ಸಜ್ಜಾಗಿದ್ದರೆ, ಹೆಣ್ಣುಮಕ್ಕಳು ಆರತಿ ಎತ್ತಿದರು. ಬ್ಯಾಂಡ್‌ ಬಾಜಾ, ಬಜಂತ್ರಿಗಳೊಂದಿಗೆ ಕೆರೆಯವರೆಗೂ ಕರೆದೊಯ್ದರು.

ಕೆರೆ ಕಾಮಗಾರಿಗಾಗಿ ಶ್ರಮಿಸಿದ ಶಾಸಕ ನೆಹರೂ ಓಲೇಕಾರ ಅವರಿಗೆ ಬೆಳ್ಳಿ ಖಡ್ಗ ಕೊಟ್ಟು, ಕಿರೀಟ ತೊಡಿಸಿ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ, ಓಲೇಕಾರ, ‘ಕೆರೆಗೆ ನೀರು ತರಲು ಜಿಲ್ಲಾ ಪಂಚಾಯ್ತಿ ಸದಸ್ಯರ ವಿರೋಧದ ನಡುವೆ ಸೋಮನಕಟ್ಟಿ ಗ್ರಾಮದಲ್ಲಿ ಶಿರಸಿ– ಮೊಳಕಾಲ್ಮುರು ರಾಜ್ಯ ಹೆದ್ದಾರಿಯನ್ನು ಬಂದ್‌ ಮಾಡಿ ಹೋರಾಡಲಾಗಿತ್ತು. ಜಿಲ್ಲಾ ಪಂಚಾಯ್ತಿಯಲ್ಲಿ ಇದ್ದ 242 ಪೈಪ್‌ಗಳನ್ನು ತಂದು ಕೆರೆಗೆ ನೀರು ಹರಿಸುವ ಕಾಮಗಾರಿಗೆ ಬಳಸಲಾಗಿತ್ತು. ಆದರೆ, ಈ ಪೈಪ್‌ಗಳನ್ನು ಕನವಳ್ಳಿ ಗ್ರಾಮದ ರೈತರು ಕಳವು ಮಾಡಿದ್ದಾರೆ ಎಂದು ಆರೋಪಿಸಿ ಹಾವೇರಿ ಶಹರ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿತ್ತು. ಇಂಥ ಅಡೆತಡೆಗಳನ್ನು ಮೀರಿ ಹೋರಾಡಿದ ಫಲವಾಗಿ ಕೆರೆಗೆ ನೀರು ಹರಿಸುವ ಕಾರ್ಯ ಶುಕ್ರವಾರ ಆರಂಭಗೊಂಡಿದೆ. ಇದು ಸಂತಸದ ಸಂಗತಿ’ ಎಂದರು.

‘122 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಕೆರೆ ತುಂಬುವವರೆಗೆ ನೀರು ಹರಿಯಲಿದೆ. ತುಂಗಾ ಮೇಲ್ದಂಡೆ ಕಾಲುವೆ ಬಂದ್‌ ಆದ ಬಳಿಕ, ರಾಜ್ಯ ಸರ್ಕಾರದಿಂದ ಬುಡಕನಹಳ್ಳಿ ಮತ್ತು ಆಣೂರ ಕೆರೆ ತುಂಬಿಸಲಿಕ್ಕೆ ₹300ಕೋಟಿಗೂ ಅಧಿಕ ಹಣ ಬಿಡುಗಡೆಯಾಗಿದೆ. ಆ ಯೋಜನೆಯಡಿ ಆ ಭಾಗದ ಕೆರೆಗಳು ತುಂಬಿದ ನಂತರ ಹಳ್ಳದ ಮೂಲಕ ಕನವಳ್ಳಿ ಕೆರೆಗೆ ನೀರು ಹರಿದು ಬರಲಿದೆ’ ಎಂದರು.

ಸದ್ಯ, ಸೋಮನಕಟ್ಟಿಯಿಂದ ಕನವಳ್ಳಿ ತನಕ ಪೈಪ್‌ಲೈನ್‌ ಅಳಡಿಸಲಾಗಿದ್ದು, ಸೋಮಕಟ್ಟಿಯಿಂದ ಕಾಲುವೆ ನೀರನ್ನು ಪೈಪ್‌ಲೈನ್‌ ಮೂಲಕ ಕನವಳ್ಳಿ ಕೆರೆಗೆ ಹರಿಸಲಾಗುತ್ತಿದೆ.

ಪ್ರತಿಕ್ರಿಯಿಸಿ (+)