ಶುಕ್ರವಾರ, ಜನವರಿ 24, 2020
28 °C

ಸಮಕಾಲೀನ ಬಿಕ್ಕಟ್ಟಿಗೆ ಸ್ಪಂದಿಸುವ ನಾಟಕಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಿರೀಶ ಕಾರ್ನಾಡ್ ಅಂತರರಾಷ್ಟ್ರೀಯ ಖ್ಯಾತಿಯ ಕನ್ನಡದ ನಾಟಕಕಾರರು. ನಾಟಕವನ್ನು ತಮ್ಮ ಸೃಜನಶೀಲ ಬರಹದ ಎಕೈಕ ಮಾಧ್ಯಮವನ್ನಾಗಿಸಿಕೊಂಡು ಅಸಂಖ್ಯಾತ ಓದುಗರನ್ನು ತಲುಪಿದ ಶ್ರೇಯಸ್ಸು ಕಾರ್ನಾಡರಿಗೆ ಸಲ್ಲುತ್ತದೆ. ಕವಿಯಾಗಿಯೋ, ಕತೆಗಾರ-ಕಾದಂಬರಿಕಾರನಾಗಿಯೋ ಲೇಖಕ ಅಪಾರ ಜನಪ್ರಿಯತೆ ಪಡೆಯುವುದು ಸುಲಭ. ಆದರೆ ನಾಟಕಗಳನ್ನು ಮಾತ್ರ ಬರೆದು ನಾಡಿನ ತುಂಬಾ ಮನೆಮಾತಾ ಗುವುದು; ರಾಷ್ಟ್ರೀಯ, ಅಂತರರಾಷ್ಟ್ರೀಯ ಖ್ಯಾತಿ ಪಡೆಯುವುದು ಕಷ್ಟಸಾಧ್ಯವಾದುದು.  ಅವರು ಇತ್ತೀಚೆಗೆ ಬರೆದ ಆಡಾಡತ ಆಯುಷ್ಯ ಆತ್ಮಚೆರಿತ್ರೆ ಕನ್ನಡ  ಸಾಹಿತ್ಯದಲ್ಲಿ ಹೊಸ ಸಂಚಲನ ಮೂಡಿಸಿದೆ.ಕಾರ್ನಾಡರು ಕೇವಲ ಆಧುನಿಕ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಮಾತ್ರವಲ್ಲ; ಜಾಗತಿಕ ಸಾಹಿತ್ಯದ ಸಂದರ್ಭದಲ್ಲೂ ಒಬ್ಬ ಅದ್ವಿತೀಯ ಪ್ರಥಮ ದರ್ಜೆ ನಾಟಕಕಾರರಾಗಿ ನಿಲ್ಲುತ್ತಾರೆ. ಶೇಕ್ಸ್‌ಪಿಯರ್, ಕಾಳಿದಾಸ, ಟಾಲ್‌ಸ್ಟಾಯ್, ಟ್ಯಾಗೂರ್, ಬೇಂದ್ರೆ ಹಾಗೂ ಕುವೆಂಪು ಯಾವ ಕಾರಣಗಳಿಗಾಗಿ ಸಾರ್ವಕಾಲಿಕ ಶ್ರೇಷ್ಠ ಲೇಖಕರಾಗಿ ನಮಗೆ ಕಾಣುತ್ತಾರೆಯೋ ಅದೇ ಕಾರಣಗಳಿಂದಾಗಿ ಗಿರೀಶ್ ಕಾರ್ನಾಡರು ಆ ಮಟ್ಟದ ಲೇಖಕರಾಗಿ ನಮಗೆ ಕಾಣುತ್ತಾರೆ.ಗಿರೀಶ್ ಕಾರ್ನಾಡ್ ಕನ್ನಡ ನಾಟಕ ಮತ್ತು ರಂಗಭೂಮಿಗಳ ಸಾಧ್ಯತೆಯನ್ನು, ಸತ್ವವನ್ನು ಹೆಚ್ಚಿಸಿದ ಕನ್ನಡದ ಧೀಮಂತ ನಾಟಕಕಾರರು. ಗಿರೀಶ್ ಕಾರ್ನಾಡರು   ಯಯಾತಿ , ಹಿಟ್ಟಿನ ಹುಂಜ ಹಾಗೂ ಅಗ್ನಿ ಮತ್ತು ಮಳೆ ಎಂಬ ಮೂರು ಪೌರಾಣಿಕ ನಾಟಕಗಳನ್ನು, ತುಘಲಕ್, ತಲೆದಂಡ ಮತ್ತು ಟಿಪ್ಪು ಸುಲ್ತಾನ ಕಂಡ ಕನಸು  ಎಂಬ ಮೂರು ಐತಿಹಾಸಿಕ ನಾಟಕಗಳನ್ನು, ಹಯವದನ ಮತ್ತು ನಾಗಮಂಡಲ ಎಂಬ ಎರಡು ಜಾನಪದ ನಾಟಕಗಳನ್ನು ಮತ್ತು ಅಂಜುಮಲ್ಲಿಗೆ, ಒಡಕಲು ಬಿಂಬ  ಮತ್ತು ಮ್ಯೋರೆಜ್ ಅಲ್ಬಮ್ ಎಂಬ ಮೂರು ಸಾಮಾಜಿಕ ನಾಟಕಗಳನ್ನು ರಚಿಸಿದ್ದಾರೆ. ಒಟ್ಟಿನಲ್ಲಿ ಕಾರ್ನಾಡರು, ಒಂದು ಏಕಾಂಕ ನಾಟಕವನ್ನೂ ಒಳಗೊಂಡಂತೆ, 13 ನಾಟಕಗಳನ್ನು ರಚಿಸಿದ್ದಾರೆ.ಕಾರ್ನಾಡರನ್ನು ಅಸ್ತಿತ್ವವಾದಿ ನಾಟಕಕಾರ ಎಂದು ಕರೆಯಬಹುದು. ಅವರ  ಯಯಾತಿ  ನಾಟಕದಿಂದ ಹಿಡಿದು ಇತ್ತೀಚೆಗೆ ಬಂದ  ಒಡಕಲು ಬಿಂಬ ಮತ್ತು ಮ್ಯೋರೆಜ್ ಅಲ್ಬಮ್ ನಾಟಕಗಳವರೆಗೆ ಕಾರ್ನಾಡರ ಅಸ್ತಿತ್ವವಾದದಲ್ಲಿನ ನಂಬಿಕೆ ಮುಂದುವರೆದುಕೊಂಡು ಬಂದದ್ದನ್ನು ಗಮನಿಸಬಹುದಾಗಿದೆ. ಅವರ ಪ್ರತಿಯೊಂದು ನಾಟಕವೂ ರಂಗದ ಮೇಲೆ ಸಂಪೂರ್ಣ ಯಶಸ್ಸನ್ನು ಪಡೆಯುತ್ತದೆ. ಕಾರ್ನಾಡರ ಪಾತ್ರಗಳು ಬದುಕನ್ನು ಅತಿಯಾಗಿ ಪ್ರೀತಿಸುತ್ತವೆ. ಅವು ಬದುಕನ್ನು ಯಾವುದೇ ಕಾರಣಕ್ಕಾಗಿ ತ್ಯಜಿಸಲು ಯತ್ನಿಸುವುದಿಲ್ಲ; ಬದುಕಲು ಅವುಗಳಿಗೆ ಪ್ರೇರಣೆ ಒದಗಿಸಿ ಕೊಡುವ ಪುರುಷಾರ್ಥವೆಂದರೆ ಕಾಮ. ಕಾರ್ನಾಡರ ಪಾತ್ರಗಳು ರಂಗದ ಮೇಲೆ ಪ್ರೇಕ್ಷಕನನ್ನು ರಂಜಿಸುತ್ತವೆ. ಕಾರ್ನಾಡರು ಉಂಟು ಮಾಡುವ ನಾಟಕೀಯತೆಯ ಪರಿಣಾಮ ಇದಕ್ಕೆ ಕಾರಣವಾಗಿದೆ. ಅಲ್ಲದೆ, ಮಹಾಭಾರತ, ಇತಿಹಾಸ ಹಾಗೂ ಜಾನಪದದಿಂದ ವಸ್ತುವನ್ನು ಆಯ್ದುಕೊಂಡು, ಅದನ್ನು ಸಮಕಾಲೀನ ಸಂದರ್ಭದಲ್ಲಿಟ್ಟು, ಈ ಮೂಲಕ ಭೂತ ಮತ್ತು ವರ್ತಮಾನಗಳೆರಡನ್ನು ಬೆಸೆಯುವುದು ಕಾರ್ನಾಡರು ರೂಢಿಸಿಕೊಂಡು ಬಂದ ಸಂಗತಿಯೂ ಕಾರಣ.ಚರಿತ್ರೆ, ಮಿಥ್ ಹಾಗೂ ಜನಪದದಿಂದ ಸಮಕಾಲೀನತೆಯ ಬಿಕ್ಕಟ್ಟುಗಳನ್ನು ಬಿಡಿಸುವ ಪ್ರಯತ್ನಗಳೇ ಕಾರ್ನಾಡರ ನಾಟಕಗಳ ಜೀವಾಳವಾಗಿದೆ. ಸಮಕಾಲೀನತೆಯನ್ನು ತಿಳಿಯಲು ಚರಿತ್ರೆ, ಪುರಾಣ ಜಾನಪದಗಳನ್ನು ಶೋಧಿಸುವುದು ಆ ಮೂಲಕ ಸಮಕಾಲೀನ ಬಿಕ್ಕಟ್ಟುಗಳನ್ನು ಬಿಡಿಸಲು ಯತ್ನಿಸುವುದು ಕಾರ್ನಾಡರ ನಾಟಕಗಳ ಆಶಯವಾಗಿದೆ. ಇದುವೇ ಪ್ರಥಮದರ್ಜೆ ಹಾಗೂ ವಿಶ್ವದರ್ಜೆ ಸಾಹಿತಿಯ ಲಕ್ಷಣವೂ ಆಗಿದೆ.

ಪ್ರತಿಕ್ರಿಯಿಸಿ (+)