ಗುರುವಾರ , ಅಕ್ಟೋಬರ್ 17, 2019
22 °C

ಚಿತ್ತಾಪುರ: ಮತ ಎಣಿಕೆ ನಾಳೆ-ಸರ್ವಸಿದ್ಧತೆ

Published:
Updated:

ಚಿತ್ತಾಪುರ:  ಸ್ಥಳೀಯ ಪುರಸಭೆ ಹಾಗೂ ಶಹಾಬಾದ ನಗರಸಭೆಯ ತಲಾ ಒಂದು ವಾರ್ಡಿಗೆ ನಡೆದ ಉಪ ಚುನಾವಣೆ, ವಾಡಿ ಪುರಸಭೆಯ ಚುನಾವಣೆಯ ಮತ ಎಣಿಕೆ ಜ.13ರಂದು ನಡೆಯಲಿದೆ. ಅಗತ್ಯ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಾಕಿ ಉಳಿದಿರುವ ಕೆಲಸ ಗುರುವಾರ ಮುಂದುವರೆಯಲಿದೆ ಎಂದು ಪ್ರಭಾರ ತಹಸೀಲ್ದಾರ್ ಮಹ್ಮದ್ ಶಕೀಲ್ ಪ್ರಜಾವಾಣಿಗೆ ತಿಳಿಸಿದ್ದಾರೆ.ಸ್ಥಳೀಯ ಸರ್ಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಮತ ಪೆಟ್ಟಿಗೆಗಳನ್ನು ಒಂದು ಕೋಣೆಯಲ್ಲಿಟ್ಟು ಭದ್ರಪಡಿಸಲಾಗಿದೆ. ಮತ ಎಣಿಕೆಗೆ 2 ಕೋಣೆಗಳಲ್ಲಿ 10 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಒಂದು ಕೋಣೆಯಲ್ಲಿ 6 ಟೇಬಲ್, ಇನ್ನೊಂದರಲ್ಲಿ 4 ಟೇಬಲ್ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.ಪ್ರತಿಯೊಂದು ಟೇಬಲ್‌ಗೆ ಒಬ್ಬರು ಸೂಪರ್‌ವೈಸರ್, ಇಬ್ಬರು ಸಹಾಯಕರು ಮತ ಎಣಿಕೆ ಕೆಲಸ ನಡೆಸಲಿದ್ದಾರೆ. ಒಟ್ಟು 30 ಜನ ಸಿಬ್ಬಂದಿ ಮತ ಎಣಿಕೆ ಕರ್ತವ್ಯ ನಿರ್ವಹಿಸಲಿದ್ದಾರೆ. ಇಬ್ಬರು ಸಿಬ್ಬಂದಿಯನ್ನು ಕಾಯ್ದಿರಿಸಲಾಗಿದೆ.ಮತ ಎಣಿಕೆ ಸಲುವಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಅಭ್ಯರ್ಥಿ ಮತ್ತು ಅವರ ಒಬ್ಬರು ಏಜೆಂಟರಿಗೆ, ಹೀಗೆ ಎರಡು ಪಾಸ್‌ಗಳನ್ನು ಚುನಾವಣಾಧಿಕಾರಿ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಇಬ್ಬರಲ್ಲಿ ಒಬ್ಬರು ಮಾತ್ರ ಮತ ಎಣಿಕೆ ಕೋಣೆಗೆ ಬರಬಹುದು ಎಂದು ಅವರು ಹೇಳಿದ್ದಾರೆ. ಮತ ಪೆಟ್ಟಿಗೆ ಇಟ್ಟಿರುವ ಶಾಲೆಯ ಸುತ್ತಾ ಹಾಗೂ ಕೋಣೆಗೆ ಪೊಲೀಸರು ಬಿಗಿ ಭದ್ರತೆ ನೀಡಿದ್ದಾರೆ.ಸರ್ಕಲ್ ಇನ್ಸ್‌ಪೆಕ್ಟರ್-3, ಸಬ್ ಇನ್ಸ್‌ಪೆಕ್ಟರ್-4, ಸಹಾಯಕ ಸಬ್ ಇನ್ಸ್‌ಪೆಕ್ಟರ್-4, ಮುಖ್ಯ ಪೇದೆ-6, ಪೇದೆಗಳು-30, ಡಿಆರ್-1 ಮತ್ತು ಸ್ಟ್ಯಾಗಿಂಗ್   ವಾಹನ-1, ಹೀಗೆ ಸ್ಟ್ರಾಂಗ್ ರೋಮಿಗೆ ಪಾಳಿಯ ಪ್ರಕಾರ ಹಗಲು ರಾತ್ರಿ ಬಂದೋಬಸ್ತ್ ಕಲ್ಪಿಸಲಾಗಿದೆ ಎಂದು ಪಿಎಸ್‌ಐ ಸೋಮಶೇಖರ ಕೆಂಚರೆಡ್ಡಿ ಪ್ರಜಾವಾಣಿಗೆ ತಿಳಿಸಿದ್ದಾರೆ.ಲೆಕ್ಕಾಚಾರ: ಚಿತ್ತಾಪುರ ಪುರಸಭೆ ವಾರ್ಡ್ ನಂ.22 ಹಾಗೂ ವಾಡಿ ಪುರಸಭೆಗೆ ನಡೆದ ಚುನಾವಣೆ ಮತದಾನ ಮುಗಿದ ಮೇಲೆ ಶಾಸಕರ, ವಿವಿಧ ರಾಜಕೀಯ ಪಕ್ಷದ ಮುಖಂಡರ, ನಾಯಕರ, ಜನಪ್ರತಿನಿಧಿಗಳ, ಕಾರ್ಯಕರ್ತರ ಹಾಗೂ ಚುನಾವಣಾ ಕಣದಲ್ಲಿದ್ದು ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳು ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿ ನಡೆಸುತ್ತಿದ್ದಾರೆ.ವಾಡಿ ಪುರಸಭೆಗೆ ಯಾವ ಪಕ್ಷಕ್ಕೆ ಬಹುಮತ ಸಿಗಲಿದೆ. ಅಧಿಕಾರ ಗದ್ದುಗೆ ಯಾರ ಪಾಲಾಗಲಿದೆ ಎನ್ನುವ ಲೆಕ್ಕಾಚಾರ ಬಿರುಸಿನಿಂದ ನಡೆಯುತ್ತಿದೆ. ಯಾರ‌್ಯಾರು ಗೆಲ್ಲುತ್ತಾರೆ. ಎಷ್ಟು ಸ್ಥಾನಗಳಲ್ಲಿ ಯಾವ ಪಕ್ಷದ ಅಭ್ಯರ್ಥಿ ಜಯ ಸಾಧಿಸಲಿದ್ದಾರೆ.ಕಾಂಗ್ರೆಸ್, ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದಿದ್ದರೆ ಗೆದ್ದ ಇತರೆ ಪಕ್ಷದ ಹಾಗೂ ಪಕ್ಷೇತರ ಅಭ್ಯರ್ಥಿಗಳು ಯಾರಿಗೆ ಬೆಂಬಲ ನೀಡುತ್ತಾರೆ. ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದಿದ್ದ ಪಕ್ಷದಲ್ಲಿ ಏನೇನೂ ರಾಜಕೀಯ ಮೇಲಾಟ ನಡೆಯುತ್ತವೆ ಎನ್ನುವ ಚರ್ಚೆ ಶುರುವಾಗಿದೆ. ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತದಾರ ಪ್ರಭುಗಳು ಮತಪೆಟ್ಟಿಗೆಯಲ್ಲಿ ಭದ್ರಗೊಳಿಸಿದ್ದಾರೆ.  ಜ.13 ರಂದು ನಡೆಯುತ್ತಿರುವ ಮತ ಎಣಿಕೆ  ಉತ್ತರ ನೀಡಲಿದೆ.

Post Comments (+)