ನಡಿಗೆಯಿಂದ ನಡೆತಿದ್ದುವ ಚಿರಯುವಕ!

7

ನಡಿಗೆಯಿಂದ ನಡೆತಿದ್ದುವ ಚಿರಯುವಕ!

Published:
Updated:

ಗುಲ್ಬರ್ಗ:   ಇಲ್ಲಿನ ಗಂಜ್ ರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ಇಳಿವಯಸ್ಸಿನ ವ್ಯಕ್ತಿಯೊಬ್ಬರು ಬೆನ್ನಮೇಲೆ ಭಾರವಾದ ಚೀಲ ಹೊತ್ತುಕೊಂಡು ನಡೆದು ಬರುವುದು ಎಲ್ಲರ ಗಮನಸೆಳೆಯುತ್ತಿತ್ತು.

 

ದೂರದ ಊರಿಂದ ನಡೆದುಕೊಂಡು ಬರುತ್ತಿರುವಂತೆ ಕಾಣುತ್ತಿದ್ದರೂ, ಕಾಲಿಗೆ ಹಾಕಿಕೊಂಡ ಶೂ, ಉಡುಪುಗಳನ್ನು ಗಮನಿಸಿದಾಗ, ಗಿನ್ನಿಸ್ ದಾಖಲೆಗಾಗಿ ಸಾಧನೆ ನಡೆಯುವ ಸಾಹಸ ಕೈಗೊಂಡಿರಬಹುದು ಎಂದು ದೂರದಿಂದ ನೋಡಿದವರಿಗೆ ಭಾಸವಾಗುತ್ತಿತ್ತು.

 

ಇದೆಲ್ಲಕ್ಕಿಂತ ಮಿಗಿಲಾಗಿ ಇಳಿವಯಸ್ಸಿನ ವ್ಯಕ್ತಿ ತನ್ನ ಭಾರವಾದ ಚೀಲದ ಸಿಕ್ಕಿಸಿಕೊಂಡಿದ್ದ ದೊಡ್ಡದಾದ ಎರಡು ತಿರಂಗಾ ಧ್ವಜಗಳು ಎಲ್ಲರನ್ನು ಸಮೀಪ ಸೆಳೆದವು. ಯಾರು ಈ ವ್ಯಕ್ತಿ ಎಂದು ಸಮೀಪಿಸಿ ವಿಚಾರಿಸ ತೊಡಗಿದರು.ಇವರು ಹರಿಯಾಣ ರಾಜ್ಯ ಪಾಣಿಪತ್ ನಗರದ ಬಗೀಚಾ ಸಿಂಗ್. ಮಣಿಪುರ, ನಾಗಾಲ್ಯಾಂಡ್ ಕಡೆಯಿಂದ ಎರಡು ತಿಂಗಳ ಹಿಂದೆ ನಡಿಗೆ ಆರಂಭಿಸಿ, ಇದೀಗ ಗುಲ್ಬರ್ಗ ತಲುಪಿದ್ದಾರೆ. ಗುಲ್ಬರ್ಗ ಮೂಲಕ ಕನ್ಯಾಕುಮಾರಿಗೆ ಹೋಗುವುದು ಸದ್ಯದ ಗುರಿ. ಅಲ್ಲಿಗೆ ಇವರ ನಡಿಗೆ ಮುಗಿಯುವುದಿಲ್ಲವಂತೆ, ಇಡೀ ದೇಶವನ್ನು ನಡಿಗೆ ಮೂಲಕವೆ ಸುತ್ತುವುದು ಬಗೀಚಾ ಸಿಂಗ್ ಉದ್ದೇಶ. ಇವರ ಬೆನ್ನುಮೇಲಿನ ಚೀಲದ ಭಾರದಷ್ಟೆ ಅವರು ಹೇಳುವ ವಿವರಗಳು ಅಚ್ಚರಿ ಮೂಡಿಸುತ್ತವೆ.ಕಾಲ್ನಡಿಗೆ ಮೂಲಕ ಈಗಾಗಲೇ 17 ಬಾರಿ ದೇಶ ಪರ್ಯಟನೆ ಮಾಡಿದ್ದರೂ ಇವರಿಗೆ ಸುಸ್ತಾಗಿಲ್ಲ. ಇದೀಗ 18ನೇ ಬಾರಿ ದೇಶ ಸುತ್ತುವ ಸಾಹಸದಲ್ಲಿ ಬಗೀಚಾ ಸಿಂಗ್ ನಿರತರಾಗಿದ್ದಾರೆ. 58ನೇ ವಯಸ್ಸಿನಲ್ಲಿ 1993ರಿಂದ ಆರಂಭಿಸಿರುವ ನಡಿಗೆಯನ್ನು 19 ವರ್ಷವಾದರೂ ನಿಲ್ಲಿಸಿಲ್ಲ ಎನ್ನುವುದು ವಿಸ್ಮಯ.

 

ಕಾಶ್ಮೀರದಿಂದ ಈಶಾನ್ಯ ರಾಜ್ಯಗಳು, ಅಲ್ಲಿಂದ ಕನ್ಯಾಕುಮಾರಿ-ಬೆಂಗಳೂರು-ಗೋವಾ ಮೂಲಕ ರಾಜಸ್ತಾನ, ಗುಜರಾತ, ದೆಹಲಿ ಮತ್ತೆ ಜಮ್ಮು-ಕಾಶ್ಮೀರ ಹೀಗೆ ಇವರ ಕಾಲುಗಳು ಹೆಜ್ಜೆಹಾಕುತ್ತಲೆ ಇವೆ. `ವಾಕಿಂಗ್~ ಮಾಡಿ ಸುಸ್ತಾಗುವ ಜನರ ನಡುವೆ ಬಗೀಚಾ ಸಿಂಗ್ ಎನ್ನುವ ದೈತ್ಯ `ಛಲ ಬಿಡದ ವಿಕ್ರಮ~ನಂತೆ ನಡೆಯಲು ಏನು ಕಾರಣ ಎನ್ನುವುದು ಬಹಳ ಕುತೂಹಲ ಹುಟ್ಟಿಸುವಂತಹ ವಿಚಾರ.ಫೆ. 9ರಂದು ಹುಮನಾಬಾದ್‌ನ ಮಾಣಿಕನಗರದಲ್ಲಿ 77ನೇ ಹುಟ್ಟುಹಬ್ಬ ಮಾಡಿಕೊಂಡ ಬಗೀಚಾ ಅವರ ಛಲ 78ಕ್ಕೆ ಕಾಲಿಟ್ಟರೂ ಮುಪ್ಪಾಗಿಲ್ಲ. ಹೊಳೆಯುವ ಇವರ ಕಣ್ಣುಗಳಲ್ಲಿ  ದೇಶದ ಅಭಿವೃದ್ಧಿಗಾಗಿ ಜನರಲ್ಲಿ ದೇಶಭಕ್ತಿ ಹುಟ್ಟಿಸುವ ಅಗಾಧ ನಂಬಿಕೆ ಎದ್ದುಕಾಣುತ್ತದೆ.

 

ಗುಟ್ಕಾ ಸೇರಿದಂತೆ ಮಾದಕವ್ಯಸನ ಉತ್ಪನ್ನಗಳನ್ನು ನಿಷೇಧಿಸಬೇಕು. ಗಿಡಗಳನ್ನು ನೆಡುವುದರ ಮೂಲಕ ಭೂಮಿಯ ಸಂರಕ್ಷಣೆ ಮಾಡಬೇಕು. ಪ್ಲಾಸ್ಟಿಕ್ ನಿಷೇಧ ಮಾಡಬೇಕು. ಶಿಕ್ಷಕರು ಟ್ಯೂಷನ್ ಹೇಳುವ ಪರಿಪಾಠ ನಿಲ್ಲಿಸಿ, ಶಾಲೆಗಳಲ್ಲೆ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ಮಾಡಬೇಕು ಎನ್ನುವ ವಿಚಾರಗಳನ್ನು ಕಾಲ್ನಡಿಗೆ ಮುಖಾಂತರ ಪ್ರಚಾರ ಮಾಡುತ್ತಿದ್ದಾರೆ.ಅರಣ್ಯ ಇಲಾಖೆಯಲ್ಲಿ ನೌಕರಿ ಬಿಟ್ಟು, ನಡಿಗೆ ಆರಂಭಿಸಿದರು. ಅವಿವಾಹಿತರಾದ ಬಗೀಚಾ ಸಿಂಗ್, ದೇಶದ ಜನರ ಜಾಗೃತಿ ಮಾಡುವ ಕೆಲಸವನ್ನೆ ಸನ್ಯಾಸದ ಮೂಲಕ ಮಾಡುತ್ತಿದ್ದಾರೆ. ಇಲ್ಲಿಯವರೆಗೂ ಇವರು ಸವೆಸಿದ ಹಾದಿ ಒಟ್ಟು 5 ಲಕ್ಷ ಒಂದು ಸಾವಿರ ಕಿಲೋ ಮೀಟರ್. ಅಂದಹಾಗೆ, 2011ರಲ್ಲಿ 17ನೇ ಬಾರಿಯ ದೇಶ ಪರ್ಯಟನೆ ಆರಂಭಿಸಿದ್ದ ಸಂದರ್ಭದಲ್ಲಿ ಗುಲ್ಬರ್ಗದಲ್ಲಿ ನಡೆಯುತ್ತಿದ್ದ `ಕಲ್ಬುರ್ಗಿ ಕಂಪು~ ಸಮಾರಂಭದಲ್ಲಿ ಬಗೀಚಾ ಸಿಂಗ್ ಪಾಲ್ಗೊಂಡಿದ್ದರು.ಬಿಸಿಲು, ಮಳೆ, ಚಳಿ ಸಹಿಸಲು ಸಾಧ್ಯವಾಗುವ ಉಡುಗೆಗಳು. ಅವರ ಬಗ್ಗೆ ಪ್ರಕಟವಾದ ಪತ್ರಿಕಾ ತುಣುಕುಗಳು. ಸಂದೇಶ ರವಾನಿಸುವ ಬ್ಯಾನರ್‌ಗಳು ಸೇರಿ ಒಟ್ಟು 90 ಕಿಲೋ ಭಾರವನ್ನು ಬಗೀಚಾ ಸಿಂಗ್ ತಮ್ಮ ಬೆನ್ನಮೇಲೆ ಹಾಕಿಕೊಂಡು ನಡೆಯುತ್ತಾರೆ. ಯಾರಿಂದಲೂ ಹಣ ಕೇಳುವುದಿಲ್ಲ. ಮನಸಾರೆ ಕೊಟ್ಟರೆ ಮಾತ್ರ ಹಣ ಪಡೆಯುತ್ತಾರೆ.

 

ಹೆಚ್ಚಿನ ಹಣವನ್ನು ಅನಾಥಶ್ರಮಕ್ಕೆ ನೀಡುವುದು ಇವರ ರೂಢಿ. ದೇವಸ್ಥಾನ, ಉದ್ಯಾನ ಅಥವಾ ಬಸ್ ನಿಲ್ದಾಣಗಳಲ್ಲಿ ರಾತ್ರಿ ಮಲಗುತ್ತಾರೆ. ಇವರು ಅಪ್ಪಟ ಸಸ್ಯಹಾರಿ! ಯಾವುದೇ `ಚೀಟು~ ಮೆಲ್ಲುವ ಸಣ್ಣ ಚಟವೂ ಇವರಿಗಿಲ್ಲ.ಒಂದು ವರ್ಷದಲ್ಲಿ ದೇಶ ಪರ್ಯಟನೆ ಮಾಡಿಕೊಂಡು ಮತ್ತೆ ಗುಲ್ಬರ್ಗ ಬಂದಿದ್ದಾರೆ.

ಗುಲ್ಬರ್ಗದ ಮೋಹನ್ ಲಾಡ್ಜ್  ಬಳಿ ಎರಡು ದಿನ ಇರುವ ಇಂಗಿತವನ್ನು ಬಗೀಚಾ ಸಿಂಗ್ ಹೊಂದಿದ್ದು, ಯಾವುದಾದರೂ ಶಾಲೆಯವರು ಆಹ್ವಾನಿಸಿದರೆ, ಮಕ್ಕಳಿಗೆ ಒಂದಿಷ್ಟು ವಿಚಾರಗಳನ್ನು ಹಂಚಿಕೊಳ್ಳಲು ಬಯಸಿದ್ದಾರೆ.

ಆಸಕ್ತರು ಸಂಪರ್ಕಿಸಲು   094945 57438

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry