ಶನಿವಾರ, ಜೂನ್ 19, 2021
27 °C

ಮಹಾತ್ಮರು ಜಾತಿಗೆ ಸೀಮಿತ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಬುದ್ಧ, ಬಸವಣ್ಣ, ಅಂಬೇಡ್ಕರ್ ಈ ಮುಂತಾದ ಮಹಾತ್ಮರನ್ನು, ಪಂಪ, ಕುವೆಂಪು ಮುಂತಾದ ಕವಿ, ಸಾಹಿತಿಗಳನ್ನು ಜಾತಿಗೆ ಸೀಮಿತಗೊಳಿಸದೆ ಅವರ ವಿಶಾಲ ತತ್ವಗಳನ್ನು ಎಲ್ಲರೂ ಅಳವಡಿಸಿಕೊಳ್ಳುವಂತಾಗಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಅಪ್ಪಗೆರೆ ಸೋಮಶೇಖರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ನಗರದ ಸರ್ಕಾರಿ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾಕೂಟ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಅಪರಾಧ, ಕೌಟುಂಬಿಕ ಕಲಹಗಳೇ ಹೆಚ್ಚಾಗಿ ವಿಜೃಂಬಿಸುತ್ತಿರುವ ಇಂದಿನ ಸಮಾಜದಲ್ಲಿ ಒಳ್ಳೆಯ ವಿಚಾರಗಳ ಕಡೆಯೂ ನೋಡಬೇಕಾದ ಅನಿವಾರ್ಯತೆ ಎದುರಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಾದವರು ಮಹಾತ್ಮರ ಮತ್ತು ಕವಿ ಸಾಹಿತಿಗಳ ಸಂದೇಶವನ್ನು ಮೈಗೂಡಿಸಿಕೊಳ್ಳುವ ಮೂಲಕ ತಮ್ಮ ಬದುಕನ್ನು ಹಸನುಗೊಳಿಸಬೇಕಾಗಿದೆ ಎಂದು ತಿಳಿಸಿದರು.ಇಡೀ ಜಗತ್ತಿಗೆ ಶಾಂತಿಮಂತ್ರವನ್ನು ಬೋಧಿಸಿದ ಬುದ್ಧನನ್ನು ಈ ದೇಶದಿಂದ ಓಡಿಸಿದ್ದೇವೆ. ಜಾಗತಿಕ ಮಟ್ಟದ ವಚನ ಸಂವಿಧಾನವನ್ನು ನೀಡಿದ ಬಸವಣ್ಣನವರನ್ನು ಲಿಂಗಾಯತರು ತಮ್ಮ ಕದಂಬಬಾಹುಗಳಲ್ಲಿ ಬಂಧಿಸಿದ್ದಾರೆ.  ಭಾರತದ ಸಂವಿಧಾನ ನಿರ್ಮಾತೃ ಡಾ. ಅಂಬೇಡ್ಕರ್ ಅವರನ್ನು ದಲಿತರು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೆ. ಹೀಗಾಗಿಯೇ ಇಂದು ಸಮಾಜದಲ್ಲಿ ಕಲುಷಿತ ವಾತಾವರಣ ಉಂಟಾಗಿದೆ. ಆದರೆ ಸಮಾಜದ ಒಳಿತಿಗಾಗಿ ಅಹರ್ನಿಷಿ ಶ್ರಮಿಸಿದ ಆ ಮಹನೀಯರ ತತ್ವಾದರ್ಶಗಳನ್ನು ಮರೆತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಶಾಸಕಿ ಅರುಣಾ ಚಂದ್ರಶೇಖರ ಪಾಟೀಲ ಮಾತನಾಡಿ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಂದ ದೇಹ ಮತ್ತು ಮನಸ್ಸು ಆರೋಗ್ಯವಾಗಿರುತ್ತದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಕಾಲೇಜಿನ ಅಭಿವೃದ್ಧಿಗಾಗಿ ಶಾಸಕರ ಅನುದಾನದಲ್ಲಿ ಹಣ ನೀಡುವುದಾಗಿ ವಾಗ್ದಾನ ಮಾಡಿದರು.ಪ್ರಾಚಾರ್ಯೆ ಡಾ. ಎಲೆನೊರ್ ಗೀತಮಾಲಾ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕಲ್ಯಾಣಾಧಿಕಾರಿ ಸುನೀಲಕುಮಾರ ಬೀದೆ,  ದೈಹಿಕ  ಶಿಕ್ಷಣ ನಿರ್ದೇಶಕ  ಪ್ರೊ, ಮೂರ್ತಿ ಶರಣಪ್ಪ, ಸಾಂಸ್ಕೃತಿಕ ಸಲಹೆಗಾರ ಡಾ. ಸುರೇಶ ಜಾಧವ ಡಾ. ಶಂಭುಲಿಂಗ ವಾಣಿ,  ಡಾ. ಸೋಮನಾಥರೆಡ್ಡಿ ವೇದಿಕೆಯಲ್ಲಿದ್ದರು.ಡಾ. ಅನಿಲಕುಮಾರ ಎಚ್. ನಿರೂಪಿಸಿದರು. ಸಾಂಸ್ಕೃತಿಕ ಸಂಘದ ಅಧ್ಯಕ್ಷ ಪ್ರೊ. ಚಂದ್ರಶೇಖರ ಅನಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕ ಡಾ. ಶರಣಪ್ಪ ಮಾಳಗೆ ಸ್ವಾಗತಿಸಿದರು. ಇಂದುಮತಿ ಸಾಲಿಮಠ, ಪ್ರೊ. ಸರ್ವೋದಯ ಶಿವಪುತ್ರ, ಸಿ.ಎಸ್. ಸಾಲಿಮಠ, ಶಿವಲೀಲಾ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.