81095 ಶೌಚಾಲಯ ನಿರ್ಮಾಣಕ್ಕೆ ಅ.2ರ ಗಡುವು

7
2.59 ಲಕ್ಷ ಶೌಚಾಲಯ ನಿರ್ಮಾಣ ಗುರಿಯಲ್ಲಿ 1,78,421 ಶೌಚಾಲಯಗಳ ನಿರ್ಮಾಣ

81095 ಶೌಚಾಲಯ ನಿರ್ಮಾಣಕ್ಕೆ ಅ.2ರ ಗಡುವು

Published:
Updated:
Deccan Herald

ವಿಜಯಪುರ: ಅ.2ರ ಮಹಾತ್ಮಗಾಂಧಿ ಜಯಂತಿಯೊಳಗೆ ಜಿಲ್ಲೆಯಲ್ಲಿ ಬಯಲು ಬಹಿರ್ದೆಸೆ ಮುಕ್ತಗೊಳಿಸಬೇಕು ಎಂಬ ಸಂಕಲ್ಪ ಜಿಲ್ಲಾ ಪಂಚಾಯ್ತಿ ಆಡಳಿತದ್ದು. ಇದಕ್ಕಾಗಿ ವಿವಿಧ ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೆ ವಿಶೇಷ ಒತ್ತು ನೀಡಿದೆ.

ಸ್ವಚ್ಛ ಭಾರತ ಮಿಷನ್ ಅಡಿ ಜಿಲ್ಲೆಯಲ್ಲಿ 2.59 ಲಕ್ಷ ಶೌಚಾಲಯಗಳನ್ನು ನಿರ್ಮಿಸಲು ಗುರಿ ಹೊಂದಿದ್ದು, ಈಗಾಗಲೇ 1,78,421 ಶೌಚಾಲಯ ನಿರ್ಮಿಸಲಾಗಿದೆ. ಈ ಪೈಕಿ 14 ಗ್ರಾಮ ಪಂಚಾಯ್ತಿಗಳು, 109 ಗ್ರಾಮಗಳನ್ನು ಬಯಲು ಬಹಿರ್ದಸೆ ಮುಕ್ತ ಎಂದು ಘೋಷಿಸಲಾಗಿದೆ.

ಬಸವನಬಾಗೇವಾಡಿ ತಾಲ್ಲೂಕಿನಲ್ಲಿ 10219, ವಿಜಯಪುರ–21199, ಇಂಡಿ–20593, ಮುದ್ದೇಬಿಹಾಳ– 11272, ಸಿಂದಗಿ ತಾಲ್ಲೂಕಿನಲ್ಲಿ 17812 ಸೇರಿದಂತೆ, ಒಟ್ಟು 81,095 ಶೌಚಾಲಯಗಳ ನಿರ್ಮಾಣ ಕಾಮಗಾರಿ ಮುಂಬರುವ ಅ.2ರೊಳಗಾಗಿ ಪೂರ್ಣಗೊಳ್ಳಬೇಕಿದೆ ಎಂದು ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ದುರ್ಗೇಶ ರುದ್ರೇಶ ತಿಳಿಸಿದರು.

ಸ್ವಚ್ಛ ರಥ ಸಂಚಾರ:  ‘ಉದ್ದೇಶಿತ ಗುರಿ ಮುಟ್ಟುವ ನಿಟ್ಟಿನಲ್ಲಿ ವೈಯಕ್ತಿಕ ಶೌಚಾಲಯಗಳಿಂದಾಗುವ ಅನುಕೂಲತೆ ಕುರಿತು ಜನರಲ್ಲಿ ಅರಿವು ಮೂಡಿಸಲು ಜಿಲ್ಲೆಯಾದ್ಯಂಥ ಎರಡು ಸ್ವಚ್ಛ ರಥ ಸಂಚಾರಿ ವಾಹನ ಸಂಚರಿಸುತ್ತಿವೆ. ಇವು ವೇಳಾಪಟ್ಟಿಯಂತೆ 213 ಗ್ರಾಮ ಪಂಚಾಯ್ತಿಗಳಿಗೂ ಭೇಟಿ ನೀಡಲಿವೆ. ತಲಾ ಎರಡು ವಿಡಿಯೋ, ಆಡಿಯೋ ಕ್ಲಿಪ್ಪಿಂಗ್‌ಗಳಿಂದ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ.

ಇದರ ಜತೆಗೆ ಐದು ಪಂಚಾಯ್ತಿಗಳಿಗೆ ಒಬ್ಬರಂತೆ ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರನ್ನು ನೋಡಲ್‌ ಅಧಿಕಾರಿಯನ್ನಾಗಿ ನಿಯೋಜಿಸಿ, ಗುರಿಗೆ ತಕ್ಕಂತೆ ಕೆಲಸ ಮಾಡಲು ಸೂಚಿಸಲಾಗಿದೆ. ನಾನೂ ಕೂಡ ಪಂಚಾಯ್ತಿಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ’ ಎಂದು ದುರ್ಗೇಶ ರುದ್ರೇಶ ‘ಪ್ರಜಾವಾಣಿ’ಗೆ ತಿಳಿಸಿದರು.

₹ 10 ಲಕ್ಷ ಅನುದಾನ:  ಶೌಚಾಲಯ ನಿರ್ಮಿಸಿಕೊಳ್ಳುವ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಪ್ರತಿ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿಗಳಿಗೆ ತಲಾ ₹ 10 ಲಕ್ಷ ಅನುದಾನ ನೀಡಲಾಗಿದೆ. ಈ ಹಣ ಬಳಸಿಕೊಂಡು ಗೋಡೆ ಬರಹ, ಭಿತ್ತಿಪತ್ರ ವಿತರಣೆ, ಅಂಗನವಾಡಿ ಕಾರ್ಯಕರ್ತರ ಮೂಲಕ ಜಾಗೃತಿ, ಶಾಲಾ–ಕಾಲೇಜುಗಳಲ್ಲಿ ಪ್ರಭಾತ್‌ ಪೇರಿ ನಡೆಸಿ ಅರಿವು ಮೂಡಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಬಹಿರ್ದೆಸೆ ಮುಕ್ತ ಗ್ರಾ.ಪಂ:  ಬಸವನ ಬಾಗೇವಾಡಿ ತಾಲ್ಲೂಕಿನ ಅರಷಣಗಿ, ಬೇನಾಳ (ಆರ್‌ಸಿ), ಆಲಮಟ್ಟಿ, ಬ್ಯಾಕೋಡ, ಡೋಣೂರ, ಹೂವಿನ ಹಿಪ್ಪರಗಿ, ಕೂಡಗಿ, ಸಿದ್ಧನಾಥ (ಆರ್‌ಸಿ), ತೆಲಗಿ, ಉಕ್ಕಲಿ, ವಿಜಯಪುರ ತಾಲ್ಲೂಕಿನ ಕಾರಜೋಳ, ಕನಮಡಿ, ಮುದ್ದೇಬಿಹಾಳ ತಾಲ್ಲೂಕಿನ ಕೊಡಗಾನೂರ, ಇಂಡಿ ತಾಲ್ಲೂಕು ಇಂಚಗೇರಿ ಗ್ರಾಮ ಪಂಚಾಯ್ತಿಗಳು ಹಾಗೂ ಇವುಗಳ ವ್ಯಾಪ್ತಿಯ 109 ಹಳ್ಳಿಗಳನ್ನು ಜಿಲ್ಲಾ ಪಂಚಾಯ್ತಿ ಆಡಳಿತ ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳು ಎಂದು ಘೋಷಿಸಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !