ಸೋಮವಾರ, ಮೇ 17, 2021
23 °C

ನೀರು, ಸೂರು, ಸಮಸ್ಯೆ ನೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಮಲಾಪುರ: ಮಹಾಗಂವ ಸಮೀಪದ ನಾಗೂರ ಪುನರ್ವಸತಿ ಕೇಂದ್ರ ಸಂಖ್ಯೆ-2 ಪ್ರದೇಶವು ನೂರಾರು ಸಮಸ್ಯೆಗಳ ಆಗರವಾಗಿದೆ. ಈ ಪುನರ್ವಸತಿ ಕೇಂದ್ರದಲ್ಲಿ ಸೌಲಭ್ಯಗಳಿಲ್ಲದೇ ಹಲವು ಸಮಸ್ಯೆಗಳಿಂದ ಜನ ಬಳಲುತ್ತಿದ್ದಾರೆ.ಸುಡುಬಿಸಿಲಿನ ನಡುವೆಯೂ ಕುಡಿಯುವ ನೀರು ಹಾಗೂ ವಿದ್ಯುತ್ ಸಮಸ್ಯೆಯಿಂದ ಗ್ರಾಮಸ್ಥರು ಬಳಲುತ್ತಿದ್ದಾರೆ. ಇಲ್ಲಿರುವ ನೂರು ಕುಟುಂಬಗಳು ತಗಡು (ಲೋಹದ ಶೀಟ್) ಚಾವಣಿ ಹೊಂದಿದ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಇವರಿಗೆ ಯಾವುದೇ ಸರ್ಕಾರಿ ಸೌಲಭ್ಯಗಳು ದೊರೆತಿಲ್ಲ.ಸುಡುಬಿಸಿಲಿಗೆ ತಗಡಿನ ಮನೆಯಲ್ಲಿ ಉಂಟಾಗುವ ಉರಿ ತಾಪ ತಡೆಯಲಾರದೇ ಜನ ಬಳಲುತ್ತಿದ್ದಾರೆ. ಬೇಸಿಗೆಯ ಧಗೆ ತಾಳದೇ ಚಿಕ್ಕ ಮಕ್ಕಳು, ವೃದ್ಧರು ಮಧ್ಯಾಹ್ನ  ತಗಡಿನ ಮನೆಯಿಂದ ಹೊರ ಬಂದು ಹೊಲದಲ್ಲಿರುವ ಮರದ ಕೆಳಗೆ ಕಾಲ ಕಳೆಯುತ್ತಾರೆ. `ಸಮಸ್ಯೆ ನೂರಾರು. ಆದರೆ ಕೇಳೋರು, ಹೇಳೋರು ಯಾರು?~ ಎಂದು ಸ್ಥಳೀಯ ನಿವಾಸಿ ಶಫಿ ಸಾಬ್ ಮಶಾಕ ಮತ್ತು ಹುಸೇನಿ ಸಾವುಕಾರ ಪ್ರಶ್ನಿಸುತ್ತಾರೆ. ಬೆಳಕು, ನೀರು, ಸೂರುಗಳ ಬಗ್ಗೆ ಹಿರಿಯರಿಗೆ ಪ್ರಶ್ನೆ ಕೇಳಿದರೆ ಆಕಾಶದತ್ತ ದಿಟ್ಟಿಸಿ ನೋಡುತ್ತಾರೆ.ವಿದ್ಯುತ್ ಸಮಸ್ಯೆ ನೀಗಿಸಲು ರಾಜೀವ್‌ಗಾಂಧಿ ಯೋಜನೆ ಅಡಿಯಲ್ಲಿ ವಿದ್ಯುತ್ ಕಂಬಗಳನ್ನು ತಂದು ಹಾಕಲಾಗಿದೆ. ಆದರೆ ಇನ್ನೂ ವಿದ್ಯುತ್ ಸಂಪರ್ಕ ಬಂದಿಲ್ಲ. ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಅಸಡ್ಡೆ ವಹಿಸುತ್ತಿದ್ದಾರೆ. ಕೇಳಿದರೂ ಕ್ಯಾರೇ ಅನ್ನುತ್ತಿಲ್ಲ ಎಂದು ಸ್ಥಳೀಯರು ದೂರುತ್ತಾರೆ.“ಈ ಮನೆಯಲ್ಲಿ ಆರೇಳು ವರ್ಷಗಳಿಂದ ಬದುಕುತ್ತಿದ್ದೇವೆ. ಮಳೆಗಾಲದಲ್ಲಿ ಮಳೆಯಿಂದ ಡಬ ಡಬ ಸದ್ದು... ಬೇಸಿಗೆಯಲ್ಲಿ ಮಧ್ಯಾಹ್ನದ ಬಿಸಿ, ಬಹಳ ಕಷ್ಟಾರಿ. ಪ್ರತಿದಿನ ಮಧ್ಯಾಹ್ನ ಹೊಲದ ಮರಗಳ ಕೆಳಗೆ ಹೋಗಿ ಮಲಗುತ್ತೇವೆ” ಎಂದು ಸುಡುಬಿಸಿಲಿನ ನಡುವೆಯೂ ಕಂಕುಳಲ್ಲಿ ಮಗುವನ್ನು ಎತ್ತಿಕೊಂಡು ನೀರು ತರುತ್ತಿದ್ದ ಮಹಿಳೆ ಚಾಂದಬಿ ಹೇಳಿದರು.ಶೌಚಾಲಯಗಳೇ ಇಲ್ಲಿಲ್ಲ. ಪ್ರತಿದಿನ ಬಹಿರ್ದೆಸೆಗೆ ಬಯಲೇ ಆಸರೆ. ಸಂಜೆಯಾದರೆ ಹಾವು-ಚೇಳುಗಳ ಕಾಟ. ಶೌಚಕ್ಕೆ ಹೋಗುವುದೂ ಜೀವ ಭಯದಲ್ಲಿಯೇ. ಸಮಸ್ಯೆ ಸುಧಾರಿಸದೇ ಹೋಗದಿದ್ದರೆ, ಈಗಾಗಲೇ ಬೀದಿಗೆ ಬಿದ್ದಿರುವ ನಾವು ಹೋರಾಟವನ್ನೇ ಮಾಡಬೇಕಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.