ಬುಧವಾರ, ಏಪ್ರಿಲ್ 21, 2021
30 °C

ಚಳವಳಿಗೆ ಹುರುಪು ನೀಡಿದ ಪಾಟೀಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸಮಾಜದಲ್ಲಿ ಬದಲಾವಣೆ ತರಬೇಕು ಎನ್ನುವ ಹೆಬ್ಬಯಕೆಯನ್ನು ಪ್ರೊ. ಬಿ.ಬಿ. ಪಾಟೀಲ ಓಕಳಿ ಅವರು ಹೊಂದಿದ್ದರು. ಹೀಗಾಗಿ ಚಳವಳಿ ನಡೆಯುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತಿದ್ದರು ಎಂದು ವಿಧಾನ ಪರಿಷತ್ ಮಾಜಿ ಉಪಸಭಾಪತಿ ಬಿ.ಆರ್. ಪಾಟೀಲ ನೆನಪಿಸಿಕೊಂಡರು.

‘ವ್ಯಕ್ತಿತ್ವ ವಿಕಾಸ ಎಜ್ಯುಕೇಷನ್ ಸೊಸೈಟಿ’ ಮಂಗಳ ದೀಪ ಬೆಳ್ಳಿ ಮಂಟಪ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ದಿವಂಗತ ಪ್ರೊ. ಬಿ.ಬಿ. ಪಾಟೀಲ ಓಕಳಿ ಅವರ ಐದನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿದರು.

‘ವಿದ್ಯಾರ್ಥಿ ದೆಸೆಯಲ್ಲಿ ನಮಗೆ ರಾಜ್ಯಶಾಸ್ತ್ರ ಬೋಧಿಸುತ್ತಿದ್ದ ಅವರು, ಭಾರತದ ರಾಜಕೀಯ ಹಾಗೂ ಸಂವಿಧಾನದ ಬಗ್ಗೆ ಆಳವಾದ ಜ್ಞಾನ ಸಂಪಾದಿಸಿದ್ದರು. ರಾಜಕೀಯ ಕ್ಷೇತ್ರದಲ್ಲಿ ನನಗೆ ಒಲವು ಬೆಳೆಯಲು ಪ್ರೊ. ಬಿ.ಬಿ. ಪಾಟೀಲರ ಕೊಡುಗೆಯೂ ಅಪಾರವಾಗಿದೆ’ ಎಂದರು.

ಯಾವುದೇ ಅನ್ಯಾಯವನ್ನು ತಮ್ಮದೇ ಆದ ನಿಲುವಿನಲ್ಲಿ ಪ್ರತಿರೋಧಿಸುವ ದಿಟ್ಟತನ, ಧೈರ್ಯ ಅವರಲ್ಲಿತ್ತು. ತುಂಬಾ ನೇರ ವ್ಯಕ್ತಿತ್ವ ರೂಢಿಸಿಕೊಂಡಿದ್ದರಿಂದ ಕೆಪಿಎಸ್‌ಸಿ ಸದಸ್ಯರಾಗಿದ್ದ ವೇಳೆಯಲ್ಲಿ ಅವರು ಒಳ್ಳೆಯ ಕೆಲಸ ಮಾಡಲು ಸಾಧ್ಯವಾಯಿತು ಎಂದು ತಿಳಿಸಿದರು.ಪಾಟೀಲರು ಕಟ್ಟಿರುವ ಶಿಕ್ಷಣ ಸಂಸ್ಥೆಯೊಂದು ಹೆಮ್ಮರವಾಗಿ ಬೆಳೆಯುತ್ತಿರುವುದು ಒಳ್ಳೆಯ ವಿಚಾರ. ಇಂಥ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ ಮಕ್ಕಳು ನಿಜವಾಗಿಯೂ ಭಾಗ್ಯವಂತರು. ಪ್ರೊ. ಬಿ.ಬಿ. ಪಾಟೀಲರು ಹೊಂದಿದ್ದ ಮೌಲ್ಯಗಳನ್ನು ಮಕ್ಕಳು ಜೀವನದುದ್ದಕ್ಕೂ ಪಾಲಿಸಿಕೊಂಡು ಹೋಗಬೇಕು ಎಂದು ಸಲಹೆ ಮಾಡಿದರು.

ಪ್ರಸ್ತುತ ವಾತಾವರಣದಲ್ಲಿ ಇನ್ನೊಬ್ಬರ ಕಷ್ಟ-ಸುಖಗಳಿಗೆ ಸ್ಪಂದಿಸುವ ವಾತಾವರಣವೇ ಹೊರಟು ಹೋಗಿದೆ. ಈ ಶಾಲೆಯ ಮಕ್ಕಳು ಇದಕ್ಕೆ ತದ್ವರುದ್ಧ ಜೀವನಕ್ರಮ ಬೆಳೆಸಿಕೊಳ್ಳಬೇಕು. ಬೇರೆಯವರ ಕಷ್ಟ-ಸುಖದಲ್ಲಿ ಅರಿಯುವ ಮೂಲಕ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದರು.

ನ್ಯಾಯವಾದಿ ಎಸ್.ಬಿ.ಐರಡ್ಡಿ ಮಾತನಾಡಿ, ‘ಪ್ರೊ. ಬಿ.ಬಿ. ಪಾಟೀಲರು ವಿಭಿನ್ನ ಚಿಂತಕರಾಗಿದ್ದರು. ಕನ್ನಡದಲ್ಲೇ ಕಾನ್ವೆಂಟ್ ಏಕೆ ಇರಬಾರದು ಎಂದುಕೊಂಡು ಕನ್ನಡ ಕಾನ್ವೆಂಟ್ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯನ್ನು ತೆರೆದರು. ಅಲ್ಲದೇ ಶಿಕ್ಷಣ ಸಂಸ್ಥೆಗೆ ‘ವ್ಯಕ್ತಿತ್ವ ವಿಕಾಸ’ ಎನ್ನುವ ಹೆಸರು ಇಟ್ಟರು ಎಂದರು.

ಡಿ.ಪಿ. ಕೊಟಗಿ ಅವರು ಬರೆದಿದ್ದ ‘ಋಣ’ ಕಾವ್ಯವನ್ನು ಕಮಲಾತಾಯಿ ಬಿಡುಗಡೆ ಮಾಡಿದರು. ಶಿಕ್ಷಣ ಸಂಸ್ಥೆಯ ಸದಸ್ಯ ಎಂ.ಎಸ್. ದಡವೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಲ್ಲೇಶಪ್ಪ ಮಾವುರ, ಜಯರಾಜ ಪಾಟೀಲ ಓಕಳಿ, ವಿಕ್ರಮ ಪಾಟೀಲ ಇದ್ದರು. ಪ್ರೊ. ಎಸ್.ಜಿ. ಮೆಳಕುಂದಿ ಪ್ರಸ್ತಾವಿಕವಾಗಿ ಮಾತನಾಡಿ, ಪ್ರೊ. ಬಿ.ಬಿ. ಪಾಟೀಲರು ಬೆಳೆದು ಬಂದ ಬಗ್ಗೆ ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.