ಹಳಿ ತಪ್ಪಿದ ಆಡಳಿತ; ಸದಸ್ಯರಲ್ಲೇ ಅಪಸ್ವರ..!

7
ಬರೋಬ್ಬರಿ ಐದು ತಿಂಗಳ ಬಳಿಕ ವಿಜಯಪುರ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆ ಇಂದು

ಹಳಿ ತಪ್ಪಿದ ಆಡಳಿತ; ಸದಸ್ಯರಲ್ಲೇ ಅಪಸ್ವರ..!

Published:
Updated:
Deccan Herald

ವಿಜಯಪುರ: ಬರೋಬ್ಬರಿ ಐದು ತಿಂಗಳ ಬಳಿಕ ವಿಜಯಪುರ ಜಿಲ್ಲಾ ಪಂಚಾಯ್ತಿಯ ಸಾಮಾನ್ಯ ಸಭೆ ಮಂಗಳವಾರ (ಆ 7) ನಡೆಯಲಿದೆ. ವಿಧಾನಸಭಾ ಚುನಾವಣಾ ನೀತಿ ಸಂಹಿತೆ ನೆಪದಲ್ಲಿ, ಸಕಾಲಕ್ಕೆ ಸಭೆ ಕರೆಯದಿದ್ದಕ್ಕೆ ಸದಸ್ಯರ ವಲಯದಲ್ಲೇ ಅಧ್ಯಕ್ಷೆ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ಕಳೆದ ಮೇ 18ಕ್ಕೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡು, ನೀತಿ ಸಂಹಿತೆ ತೆರವುಗೊಂಡಿತ್ತು. ಆದರೆ ಸಕಾಲಕ್ಕೆ ಸ್ಥಾಯಿ ಸಮಿತಿಗಳ ರಚನೆ, ಸಭೆ ನಡೆಯದಿದ್ದರಿಂದ ಸಾಮಾನ್ಯ ಸಭೆ ನಡೆದಿರಲಿಲ್ಲ ಎಂಬುದನ್ನು ಜಿಲ್ಲಾ ಪಂಚಾಯ್ತಿ ಮೂಲಗಳು ತಿಳಿಸಿವೆ.

ವಿಜಯಪುರ ಜಿಲ್ಲಾ ಪಂಚಾಯ್ತಿ ಆಡಳಿತ ಸಂಪೂರ್ಣ ಹಳಿ ತಪ್ಪಿದೆ. ಗ್ರಾಮೀಣರಿಗೆ ಸರ್ಕಾರಿ ಸೌಲಭ್ಯ ಒದಗಿಸುವಲ್ಲಿ ಸಂಪೂರ್ಣ ವಿಫಲಗೊಂಡಿದೆ. ಕುಡಿಯುವ ನೀರಿನ ತಾಪತ್ರಯ ಇಂದಿಗೂ ತಪ್ಪದಾಗಿದೆ. ಸಕಾಲಕ್ಕೆ ಕೃಷಿ ಮಾಹಿತಿ ದೊರಕದಾಗಿದೆ. ಶೌಚಾಲಯ ನಿರ್ಮಾಣ ಸಹ ಇದೂವರೆಗೂ ಆಂದೋಲನ ಸ್ವರೂಪ ಪಡೆದಿಲ್ಲ ಎಂಬ ಸಾರ್ವಜನಿಕರ ದೂರಿನ ಧ್ವನಿಗೆ, ಇದೀಗ ಸದಸ್ಯರು ದನಿಗೂಡಿಸಲಾರಂಭಿಸಿದ್ದಾರೆ.

ಜಿಲ್ಲಾ ಪಂಚಾಯ್ತಿ ಅಸ್ತಿತ್ವಕ್ಕೆ ಬಂದ ದಿನದಿಂದ ಇಲ್ಲಿಯವರೆಗೂ ನಿಯಮಾವಳಿಗಳಂತೆ, ಎರಡು ತಿಂಗಳಿಗೊಂದರಂತೆ ಕನಿಷ್ಠ 13–14 ಸಾಮಾನ್ಯ ಸಭೆಗಳಾದ್ರೂ ನಡೆಯಬೇಕಿತ್ತು. ಆದರೆ ಅಧ್ಯಕ್ಷೆಯ ನಿರಾಸಕ್ತಿಯಿಂದ ಸಮಯಕ್ಕೆ ಸರಿಯಾಗಿ ಸಭೆಗಳು ನಡೆದಿಲ್ಲ ಎಂಬ ದೂರು ಜಿಲ್ಲಾ ಪಂಚಾಯ್ತಿ ಅಂಗಳದಿಂದಲೇ ಪಕ್ಷಾತೀತವಾಗಿ ಕೇಳಿ ಬಂದಿದೆ.

‘ಅಧ್ಯಕ್ಷೆ ನೀಲಮ್ಮ ಮೇಟಿ ಕಾಂಗ್ರೆಸ್ಸಿಗರು ಸೇರಿದಂತೆ ಜಿಲ್ಲಾ ಪಂಚಾಯ್ತಿಯ ಯಾವೊಬ್ಬ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ. ಪ್ರಮುಖ ಆಡಳಿತಾತ್ಮಕ ವಿಚಾರಗಳಲ್ಲಿ ಚರ್ಚಿಸಲ್ಲ. ತಮ್ಮ ಪತಿಯ ನಿರ್ದೇಶನದಂತೆ ಅಧಿಕಾರ ಚಲಾಯಿಸುತ್ತಾರೆ.

ನಿತ್ಯವೂ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಕಚೇರಿಗೆ ಹಾಜರಾಗಲ್ಲ. ವಿಜಯಪುರಕ್ಕಿಂತ ಗೋವಾದಲ್ಲೇ ಹೆಚ್ಚು ಕಾಲ ಕಳೆಯುತ್ತಾರೆ. ಜಿಲ್ಲಾ ಪಂಚಾಯ್ತಿ ಅಧೀನದ ಇಲಾಖೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವುದನ್ನು ಪ್ರಸ್ತಾಪಿಸಿ, ದಾಖಲೆ ನೀಡಿದರೂ; ಇದೂವರೆಗೂ ಯಾವೊಬ್ಬ ಅಧಿಕಾರಿ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿಲ್ಲ. ತಮ್ಮ ಅಧಿಕಾರವನ್ನು ಸಮರ್ಪಕವಾಗಿ ಬಳಸಿಕೊಂಡು ಆಡಳಿತದಲ್ಲಿ ಯಾವುದೇ ಸುಧಾರಣೆ ತಂದಿಲ್ಲ.

ಅಧಿಕಾರಿಗಳ ಮೇಲೆ ಹಿಡಿತವಿಲ್ಲ. ಅಧಿಕಾರಿಗಳು ಸಹ ಕಿಂಚಿತ್‌ ಗೌರವ ಕೊಡುತ್ತಿಲ್ಲ. ಆಡಳಿತದ ಬದಲು ಪ್ರಮುಖ ಇಲಾಖೆಗಳಲ್ಲಿ ಅಕ್ರಮದ ಡೀಲ್‌ ನಡೆಯುತ್ತಿರುವುದೇ ಹೆಚ್ಚಿದೆ’ ಎಂಬ ಆರೋಪ ಜಿಲ್ಲಾ ಪಂಚಾಯ್ತಿಯ ಬಹುತೇಕ ಸದಸ್ಯರಿಂದ ವ್ಯಕ್ತವಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !